ಭಾರತ ವಿರೋಧಿ ಉದ್ಯಮಿ ಜಾರ್ಜ್‌ ಸೊರೋಸ್‌ರ ಬೆಂಗಳೂರು ಕಂಪನಿಗೆ ಯುಎಸ್‌ಏಡ್‌ನಿಂದ 8 ಕೋಟಿ ರು.

| N/A | Published : Apr 03 2025, 12:35 AM IST / Updated: Apr 03 2025, 06:53 AM IST

ಸಾರಾಂಶ

ಭಾರತ ವಿರೋಧಿ ಉದ್ಯಮಿ ಜಾರ್ಜ್‌ ಸೊರೋಸ್‌ ಬೆಂಬಲಿತ ಬೆಂಗಳೂರು ಮೂಲದ ಕಂಪನಿಯೊಂದಕ್ಕೆ ಅಮೆರಿಕದ ಅಂತಾರಾಷ್ಟ್ರೀಯ ಅಭಿವೃದ್ಧಿ ಏಜೆನ್ಸಿ(ಯುಎಸ್‌ಏಡ್‌)ಯಿಂದಲೂ 8 ಕೋಟಿ ರು. ಪಾವತಿಯಾಗಿರುವ ವಿಚಾರ ಇದೀಗ ಜಾರಿ ನಿರ್ದೇಶನಾಲಯ(ಇ.ಡಿ.) ತನಿಖೆಯಿಂದ ಬೆಳಕಿಗೆ ಬಂದಿದೆ.

ನವದೆಹಲಿ: ಭಾರತ ವಿರೋಧಿ ಉದ್ಯಮಿ ಜಾರ್ಜ್‌ ಸೊರೋಸ್‌ ಬೆಂಬಲಿತ ಬೆಂಗಳೂರು ಮೂಲದ ಕಂಪನಿಯೊಂದಕ್ಕೆ ಅಮೆರಿಕದ ಅಂತಾರಾಷ್ಟ್ರೀಯ ಅಭಿವೃದ್ಧಿ ಏಜೆನ್ಸಿ(ಯುಎಸ್‌ಏಡ್‌)ಯಿಂದಲೂ 8 ಕೋಟಿ ರು. ಪಾವತಿಯಾಗಿರುವ ವಿಚಾರ ಇದೀಗ ಜಾರಿ ನಿರ್ದೇಶನಾಲಯ(ಇ.ಡಿ.) ತನಿಖೆಯಿಂದ ಬೆಳಕಿಗೆ ಬಂದಿದೆ.

ಸೊರೋಸ್‌ ಬೆಂಬಲಿತ ಎಎಸ್‌ಎಆರ್‌ ಸೋಷಿಯಲ್ ಇಂಪ್ಯಾಕ್ಟ್‌ ಅಡ್ವೆಸರ್ಸ್‌ ಹೆಸರಿನ ಕಂಪನಿಯು 2022-23ರಲ್ಲಿ ಎಂಟು ಕೋಟಿ ರು. ಪಡೆದಿರುವುದು ಕಂಡುಬಂದಿದೆ.

ಇ.ಡಿ.ಯು ಕಳೆದ ಕೆಲ ತಿಂಗಳಿಂದ ದೇಶದಲ್ಲಿ ಸೊರೋಸ್‌ ಎಕನಾಮಿಕ್‌ ಡೆವಲಪ್‌ಮೆಂಟ್‌ ಫಂಡ್‌ಗೆ ಸಂಬಂಧಿಸಿ ತನಿಖೆ ನಡೆಸುತ್ತಿದೆ. ಅದರಂತೆ ಮಾರ್ಚ್‌ನಲ್ಲಿ ಸೊರೋಸ್‌ ಬೆಂಬಲಿತ ಬೆಂಗಳೂರು ಮೂಲದ ಮೂರು ಕಂಪನಿಗಳಾದ ಎಸ್‌ಎಆರ್‌ ಸೋಷಿಯನ್‌ ಇಂಪ್ಯಾಕ್ಟ್‌ ಅಡ್ವೈಸರ್ಸ್‌, ರೂಟ್ ಬ್ರಿಡ್ಜ್‌ ಸರ್ವೀಸಸ್‌ ಪ್ರೈ. ಲಿ. ಮತ್ತು ರೂಟ್‌ ಬ್ರಿಡ್ಜ್‌ ಅಕಾಡೆಮಿ ಲಿ. ಮೇಲೆ ದಾಳಿಯನ್ನೂ ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆದಿದೆ. 2022ರಿಂದ 2024ರ ನಡುವೆ ಈ ಕಂಪನಿಗಳಿಗೆ ವಿದೇಶದಿಂದ 25 ಕೋಟಿ ಶಂಕಾಸ್ಪದ ರೀತಿಯಲ್ಲಿ ಪಾವತಿಯಾಗಿರುವ ಸಂಬಂಧ ಈ ದಾಳಿ ನಡೆಸಲಾಗಿದೆ.

ಈ ಮೂರು ಕಂಪನಿಗಳಲ್ಲಿ ಎಎಸ್‌ಎಆರ್‌ ಸೋಷಿಯಲ್ ಇಂಪ್ಯಾಕ್ಟ್‌ ಅಡ್ವೆಸರ್ಸ್‌ ಹೆಸರಿನ ಕಂಪನಿಗೆ ಯುಎಸ್‌ ಏಡ್‌ನಿಂದಲೂ 2022-23ರಲ್ಲಿ 8 ಕೋಟಿ ರು. ಪಾವತಿಯಾಗಿರುವುದೂ ಪತ್ತೆಯಾಗಿದೆ.

ಆದರೆ ಎಎಸ್‌ಎಆರ್‌ ಮಾತ್ರ ಕೌನ್ಸಿಲ್‌ ಆನ್‌ ಎನರ್ಜಿ, ಎನ್ವಿರಾನ್‌ಮೆಂಟ್‌ ಆ್ಯಂಡ್‌ ವಾಟರ್‌(ಸಿಇಇಡಬ್ಲ್ಯು)ಗೆ ಸಂಬಂಧಿಸಿ ನೀಡಿದ ಸೇವೆಗೆ ಈ ಹಣ ನೀಡಲಾಗಿದೆ ಎಂದು ಹೇಳಿದೆ.

ಈ ನಡುವೆ, ಸಿಇಇಡಬ್ಲ್ಯು ಮಾತ್ರ ನಮಗೂ ಜಾರ್ಜ್‌ ಸೊರೋಸ್‌ ಅಥವಾ ಅವರ ಓಪನ್‌ ಸೊಸೈಟಿ ಫೌಂಡೇಷನ್‌ಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದೆ.

ಯುಎಸ್‌ ಏಡ್‌ ಕುರಿತು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೇ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯುಎಸ್‌ಏಡ್‌ ಮೂಲಕ ವಿದೇಶಿ ಸರ್ಕಾರಗಳನ್ನು ಅತಂತ್ರಗೊಳಿಸುವ ಕೆಲಸವನ್ನು ಸೊರೋಸ್‌ ಮಾಡಿದ್ದರು ಎಂದು ಆರೋಪಿಸಿದ್ದರು.