ಸಾರಾಂಶ
ಕೇಪ್ ಕೆನವೆರಲ್: ಕಳೆದ 9 ತಿಂಗಳುಗಳಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಸಿಕ್ಕಿಬಿದ್ದಿರುವ ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಅವರ ಮರಳುವಿಕೆ ಮತ್ತೆ ವಿಳಂಬವಾಗಲಿದೆ. ಕಾರಣ, ಸುನಿತಾ ಹಾಗೂ ಬುಚ್ ವಿಲ್ಮೋರ್ ಅವರನ್ನು ಕರೆ ತರುವ ಉದ್ದೇಶದಿಂದ ಉಡ್ಡಯನಕ್ಕೆ ಸಜ್ಜಾಗಿದ್ದ ನೌಕೆಯ ಉಡ್ಡಯನ ಲಾಂಚ್ ಪ್ಯಾಡ್ ಸಮಸ್ಯೆಯಿಂದಾಗಿ ಮುಂದೂಡಲ್ಪಟ್ಟಿದೆ.
ಎಲಾನ್ ಮಸ್ಕ್ ಒಡೆತನದ ಸ್ಪೇಸ್‌ಎಕ್ಸ್ ಕಂಪನಿಯ ಫಾಲ್ಕನ್ ರಾಕೆಟ್ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಳ್ಳಲಿತ್ತು. ಆದರೆ ಉಡ್ಡಯನಕ್ಕೂ 4 ತಾಸುಗಳ ಮೊದಲು, ರಾಕೆಟ್ ಸಾಗುವ ದಿಕ್ಕನ್ನು ನಿಯಂತ್ರಿಸುವ ಹೈಡ್ರಾಲಿಕ್ ವ್ಯವಸ್ಥೆಯಲ್ಲಿ ದೋಷವಿರುವುದನ್ನು ತಂತ್ರಜ್ಞರು ಪತ್ತೆ ಹಚ್ಚಿದ್ದಾರೆ. ಪರಿಣಾಮ ಉಡ್ಡಯನವನ್ನು ಶುಕ್ರವಾರದ ವರೆಗೆ ರದ್ದುಪಡಿಸಲಾಗಿದೆ.
ಅಮೆರಿಕ, ಜಪಾನ್ ಹಾಗೂ ರಷ್ಯಾದ ಗಗನಯಾತ್ರಿಗಳು ಐಎಸ್‌ಎಸ್ ತಲುಪಿದ 1 ವಾರದ ಬಳಿಕವಷ್ಟೇ ಸುನಿತಾ ಹಾಗೂ ಬುಚ್ ಮರಳಬಹುದಾಗಿದೆ.
ಖಾಸಗಿ ಸಂಸ್ಥೆ ಬೋಯಿಂಗ್‌ನ ಸ್ಟಾರ್‌ಲಿಂಕ್ ಬಾಹ್ಯಾಕಾಶ ನೌಕೆಯ ಸಿಬ್ಬಂದಿ ಸಹಿತ ಉಡ್ಡಯನ ಪರೀಕ್ಷೆಗಾಗಿ ಜೂನ್‌ನಲ್ಲಿ ಸುನಿತಾ ಹಾಗೂ ವಿಲ್ಮೋರ್ 8 ದಿನಗಳ ಮಿಷನ್ ಭಾಗವಾಗಿ ಐಎಸ್‌ಎಸ್‌ಗೆ ತೆರಳಿದ್ದರು. ಆದರೆ ಅವರನ್ನು ಹೊತ್ತೊಯ್ದಿದ್ದ ನೌಕೆಯಲ್ಲಿ ದೋಷ ಕಾಣಿಸಿಕೊಂಡಿದ್ದರಿಂದ ಗಗನಯಾತ್ರಿಗಳ ಭದ್ರತಾ ದೃಷ್ಟಿಯಿಂದ ಅದನ್ನು ಸಿಬ್ಬಂದಿರಹಿತವಾಗಿ ಭೂಮಿಗೆ ಕರೆಸಿಕೊಳ್ಳಲಾಗಿತ್ತು.