ಸಾರಾಂಶ
ವಾಷಿಂಗ್ಟನ್: 8 ದಿನಗಳಿಗೆಂದು ಹೋಗಿ 8 ತಿಂಗಳಿನಿಂದ ಅಂರಾತಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಸಿಕ್ಕಿಬಿದ್ದಿರುವ ಭಾರತ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಅವರು ಭೂಮಿಗೆ ಮರಳುವ ಕಾಲ ಸನ್ನಿಹಿತವಾಗಿದೆ.
ಆದರೆ ಬರೋಬ್ಬರಿ 8 ತಿಂಗಳುಗಳ ಕಾಲ ಗುರುತ್ವಾಕರ್ಷಣೆಯಿಲ್ಲದ ಬಾಹ್ಯಾಕಾಶದಿಂದ ಅವರು ಭೂಮಿಗೆ ಬಂದ ಬಳಿಕ ಇಲ್ಲಿನ ಗುರುತ್ವಾಕರ್ಷಣ ಬಲವೇ ಅವರಿಗೆ ಸವಾಲಾಗಿ ಪರಿಣಮಿಸಲಿದೆ. ಈ ಕುರಿತು, ಸುನಿತಾರೊಂದಿಗೆ ಬಾಹ್ಯಾಕಾಶದಲ್ಲಿ ಸಿಲುಕಿರುವ ಬುಚ್ ವಿಲ್ಮೋರ್ ಸಂದರ್ಶನವೊಂದರಲ್ಲಿ ಮಾಹಿತಿ ನೀಡಿದ್ದು, ‘ಗುರ್ತ್ವಾಕರ್ಷಣೆಯು ದೇಹದೊಳಗಿನ ದ್ರವ ಸೇರಿದಂತೆ ಎಲ್ಲವನ್ನೂ ಕೆಳಗೆ ಎಳೆಯುತ್ತದೆ. ಇದರಿಂದಾಗಿ ನಮಗೆ ಪೆನ್ಸಿಲ್ ಎತ್ತುವುದೂ ವ್ಯಾಯಾಮದಂತೆ ಅನ್ನಿಸಬಹುದು. ಈ ಹಠಾತ್ ಬದಲಾವಣೆಯಿಂದಾಗಿ ನಮ್ಮ ದೇಹ ಭೂಮಿಯ ವಾತಾವರಣಕ್ಕೆ ಹೊಂದಿಕೊಳ್ಳಲು ಕೆಲ ಸಮಯ ಹಿಡಿಯಬಹುದು’ ಎಂದಿದ್ದಾರೆ. ಸುನಿತಾ ಕೂಡ, ‘ನಮ್ಮ ಸ್ನಾಯುಗಳನ್ನು ವೇಗವಾಗಿ ಚಲಿಸಲು ಪರಿಶ್ರಮ ಪಡಬೇಕಾಗುವುದು’ ಎಂದಿದ್ದಾರೆ. ಸುನಿತಾ ವಿಲಿಯಮ್ಸ್ ಮಾ.19ರಂದು ಭೂಮಿಗೆ ಮರಳುವ ನಿರೀಕ್ಷೆಯಿದೆ.
ಬದಲಾವಣೆಗೆ ಕಾರಣವೇನು? : ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣ ಬಲವಿಲ್ಲದ ಕಾರಣ ಗಗನಯಾತ್ರಿಗಳ ದೇಹದಲ್ಲಿ ಸ್ನಾಯು ಕ್ಷೀಣಿಸುವಿಕೆ ಮತ್ತು ಮೂಳೆ ಸಾಂದ್ರತೆ ನಷ್ಟದಂತಹ ಬದಲಾವಣೆಗಳಾಗುತ್ತವೆ. ಅಲ್ಲಿ ಯಾವುದೇ ಶ್ರಮದ ಕೆಲಸಗಳನ್ನು ಮಾಡುವ ಅವಶ್ಯಕತೆ ಇರದ ಕಾರಣ ಅವರು ಪ್ರತಿ ತಿಂಗಳು ಶೇ.1ರಷ್ಟು ಮೂಳೆಯನ್ನು ಕಳೆದುಕೊಳ್ಳುತ್ತಾರೆ. ಜೊತೆಗೆ, ದೇಹದಲ್ಲಿರುವ ದ್ರವ ಮುಖದ ಭಾಗದಲ್ಲಿ ಶೇಖರಣೆಯಾಗಿ, ಅವರ ಮುಖ ಉಬ್ಬಿದಂತಾಗುತ್ತದೆ.
ಇಬ್ಬರು ಗಗನಯಾತ್ರಿಗಳು ಸತತ 8 ತಿಂಗಳು ಬಾಹ್ಯಾಕಾಶದಲ್ಲೇ ಇದ್ದ ಕಾರಣ ಭೂಮಿಗೆ ಬರುತ್ತಿದ್ದಂತೆ ಆಗುವ ಬದಲಾವಣೆಗೆ ಅವರ ದೇಹ ಒಗ್ಗಿಕೊಳ್ಳಲು ಸಮಯ ಹಿಡಿಸುತ್ತದೆ. ಇದಕ್ಕೆ ಅನುಕೂಲವಾಗುವಂತೆ ಅವರಿಗಾಗಿ ಪುನಶ್ಚೇತನ ಕಾರ್ಯಕ್ರಮ ಏರ್ಪಡಿಸಲಾಗುವುದು.