ಜಿಲ್ಲಾ ಕೋರ್ಟ್‌ ವಿಷಯದಿಂದ ದೂರವಿರಿ : ಸುಪ್ರೀಂಗೆ ಅಲಹಾಬಾದ್‌ ಹೈಕೋರ್ಟ್‌

| N/A | Published : Oct 31 2025, 03:30 AM IST

Alahabad High Court
ಜಿಲ್ಲಾ ಕೋರ್ಟ್‌ ವಿಷಯದಿಂದ ದೂರವಿರಿ : ಸುಪ್ರೀಂಗೆ ಅಲಹಾಬಾದ್‌ ಹೈಕೋರ್ಟ್‌
Share this Article
  • FB
  • TW
  • Linkdin
  • Email

ಸಾರಾಂಶ

 ಕೆಳ ಹಂತದ ನ್ಯಾಯಾಲಯಗಳಿಗೆ ಸುಪ್ರೀಂ ಸೇವಾ ನಿಯಮ ರೂಪಿಸುವುದಕ್ಕೆ ದಶಕಗಳಿಂದಲೂ ಇರುವ ಆಕ್ಷೇಪ ಮತ್ತೊಮ್ಮೆ ಭುಗಿಲೆದ್ದಿದ್ದು, ‘ಜಿಲ್ಲಾ ನ್ಯಾಯಾಂಗ ನಮ್ಮ ವ್ಯಾಪ್ತಿಗೆ ಬರುತ್ತದೆ. ನೀವು ಅದರಿಂದ ದೂರವಿರಿ’ ಎಂದು ಅಲಹಾಬಾದ್‌ ಹೈಕೋರ್ಟ್‌ ಸುಪ್ರೀಂಕೋರ್ಟ್‌ಗೆ ಸಲಹೆ ನೀಡಿದೆ.

 ನವದೆಹಲಿ: ರಾಜ್ಯಗಳಲ್ಲಿರುವ ಕೆಳ ಹಂತದ ನ್ಯಾಯಾಲಯಗಳಿಗೆ ಸುಪ್ರೀಂಕೋರ್ಟ್‌ ಸೇವಾ ನಿಯಮ ರೂಪಿಸುವುದಕ್ಕೆ ದಶಕಗಳಿಂದಲೂ ಇರುವ ಆಕ್ಷೇಪ ಮತ್ತೊಮ್ಮೆ ಭುಗಿಲೆದ್ದಿದ್ದು, ‘ಜಿಲ್ಲಾ ನ್ಯಾಯಾಂಗ ನಮ್ಮ ವ್ಯಾಪ್ತಿಗೆ ಬರುತ್ತದೆ. ನೀವು ಅದರಿಂದ ದೂರವಿರಿ’ ಎಂದು ಅಲಹಾಬಾದ್‌ ಹೈಕೋರ್ಟ್‌ ಸುಪ್ರೀಂಕೋರ್ಟ್‌ಗೆ ಸಲಹೆ ನೀಡಿದಂಥ ಅಚ್ಚರಿಯ ವಿದ್ಯಮಾನವೊಂದು ಸುಪ್ರೀಂಕೋರ್ಟ್‌ನ ವಿಚಾರಣೆ ವೇಳೆ ನಡೆದಿದೆ.

ಪ್ರಕರಣ ಹಿನ್ನೆಲೆ:

ಜಿಲ್ಲಾ ಮಟ್ಟದಲ್ಲಿ ನ್ಯಾಯಾಧೀಶರ ನೇಮಕ, ಬಡ್ತಿ ವಿಷಯದಲ್ಲಿ ಏಕರೂಪ ನಿಯಮಗಳಿಲ್ಲ. ಹೀಗಾಗಿ ನೇರವಾಗಿ ನೇಮಕಗೊಂಡ ಜಿಲ್ಲಾ ಜಡ್ಜ್‌ಗಳಿಗೆ ಹೋಲಿಸಿದರೆ ಕೆಳ ಹಂತದ ಕೋರ್ಟ್‌ಗಳಿಂದ ಬಡ್ತಿ ಪಡೆದುಬಂದ ಜಡ್ಜ್‌ಗಳ ಪದೋನ್ನತಿಯಲ್ಲಿ ಭಾರೀ ವಿಳಂಬವಾಗುತ್ತಿದೆ. ಈ ಸಂಬಂಧ ಏಕರೂಪ ನಿಯಮ ರೂಪಿಸಬೇಕು ಎಂದು ಅಖಿಲ ಭಾರತ ನ್ಯಾಯಾಧೀಶರ ಒಕ್ಕೂಟ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಅಲ್ಲದೆ ಈ ಸಂಬಂಧ ಅಲಹಾಬಾದ್‌ ಹೈಕೋರ್ಟ್‌ನ ಅಂಕಿ ಸಂಖ್ಯೆಗಳನ್ನು ಉದಾಹರಣೆಯಾಗಿ ನೀಡಿತ್ತು. ಬುಧವಾರ ಈ ಅರ್ಜಿಯ ಕುರಿತು ಸಾಂವಿಧಾನಿಕ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅಲಹಾಬಾದ್‌ ಹೈಕೋರ್ಟ್‌ ಪರ ವಾದ ಮಂಡಿಸಿದ ಹಿರಿಯ ವಕೀಲ ರಾಕೇಶ್‌ ದ್ವಿವೇದಿ, ‘ನ್ಯಾಯಾಂಗ ಅಧಿಕಾರಿಗಳ ನೇಮಕ, ಬಡ್ತಿ, ಜಿಲ್ಲಾ ನ್ಯಾಯಾಧೀಶರ ನೇಮಕಕವು, ಹೈಕೋರ್ಟ್‌ಗಳಿಗೆ ಸಂವಿಧಾನಬದ್ಧವಾಗಿ ಸಿಕ್ಕಿರುವ ಅಧಿಕಾರ. ಹೀಗಾಗಿ ಈ ವಿಷಯದಲ್ಲಿ ಹೇಗೆ ನಡೆದುಕೊಳ್ಳಬೇಕು? ಯಾವ ರೀತಿ ಸೇವಾ ನಿಯಮ ರೂಪಿಸಬೇಕು ಎಂಬ ವಿಷಯವನ್ನು ಹೈಕೋರ್ಟ್‌ಗಳಿಗೆ ಬಿಡಬೇಕು. ಇದರಲ್ಲಿ ಸುಪ್ರೀಂಕೋರ್ಟ್ ಮಧ್ಯಪ್ರವೇಶ ಮಾಡಬಾರದು. ಈ ವಿಷಯದಲ್ಲಿ ಸುಪ್ರೀಂಕೋರ್ಟ್‌ ದೂರವೇ ಇರುವುದು ಒಳಿತು. ಹೈಕೋರ್ಟ್‌ಗಳನ್ನು ದುರ್ಬಲಪಡಿಸುವ ಬದಲು ಅದನ್ನು ಬಲಪಡಿಸುವ ವಿಚಾರಗಳು ತುಂಬಾ ಇದೆ. ಅದನ್ನು ಮಾಡಬೇಕು. ಏನಾದರೂ ಹೇಳಬೇಕಾದರೆ ಸಾಮಾನ್ಯ ನಿರ್ದೇಶನಗಳು ಮಾತ್ರ ಇರಲಿ. ನಿಯಮ ರೂಪಿಸಬಾರದು’ ಎಂದು ವಾದಿಸಿದ್ದರು.

ಅಲ್ಲದೆ, ನ್ಯಾಯಾಧೀಶರ ನೇಮಕಕ್ಕೆ ಏಕರೂಪ ನಿಯಮ ರೂಪಿಸುವುದು ದುರಂತವಾಗಲಿದೆ ಮತ್ತು ಹೈಕೋರ್ಟ್‌ಗಳನ್ನು ಬಲಪಡಿಸುವ ಬದಲು ಅವುಗಳನ್ನು ದುರ್ಬಲಗೊಳಿಸಲಿದೆ. ಇಲ್ಲಿ ಅರ್ಜಿದಾರರು ಪ್ರಸ್ತಾಪಿಸಿದ ವಿಷಯ ಎಲ್ಲಾ ರಾಜ್ಯಗಳಲ್ಲೂ ನಡೆದಿಲ್ಲ. ಹೀಗಾಗಿ ಸುಪ್ರೀಂಕೋರ್ಟ್‌ ಈ ವಿಷಯದಿಂದ ಕೈತೊಳೆದುಕೊಳ್ಳುವುದು ಒಳಿತು’ ಎಂದು ಕಟುನುಡಿಗಳಲ್ಲಿ ಹೇಳಿದರು.

ಅಧಿಕಾರ ಕಿತ್ತುಕೊಳ್ಳುವ ಉದ್ದೇಶವಿಲ್ಲ:

ಅಲಹಾಬಾದ್‌ ಹೈಕೋರ್ಟ್‌ ಪರ ವಕೀಲರ ವಾದ ಮಂಡನೆ ವೇಳೆ ಸಿಜೆಐ ನೇತೃತ್ವದ ಸುಪ್ರೀಂ ಪೀಠ, ‘ ಅಖಿಲ ಭಾರತೀಯ ನ್ಯಾಯಾಂಗ ಸೇವೆಯ ಪರಿಕಲ್ಪನೆ ಇನ್ನು ಜೀವಂತವಾಗಿದೆ. ಅದು ಕಾರ್ಯರೂಪಕ್ಕೆ ಬಂದರೆ ಜಿಲ್ಲಾ ನ್ಯಾಯಾಂಗಕ್ಕೆ ಏಕರೂಪ ಸೇವಾ ನಿಯಮ ರೂಪಿಸುವುದರಲ್ಲಿ ಸುಪ್ರೀಂ ಪಾತ್ರ ವಹಿಸಬಹುದು. ಹೆಸರುಗಳನ್ನು ಶಿಫಾರಸು ಮಾಡುವಲ್ಲಿ ಉಚ್ಚ ನ್ಯಾಯಾಲಯದ ಅಧಿಕಾರ ಕಸಿದುಕೊಳ್ಳುವುದಿಲ್ಲ. ಆದರೆ ಪ್ರತಿ ಹೈಕೋರ್ಟ್‌ಗೆ ವಿಭಿನ್ನ ನೀತಿಗಳು ಏಕೆ ಇರಬೇಕು ಎನ್ನುವುದಷ್ಟೇ ವಾದ. ಇದರ ಅರ್ಥ ಹೈಕೋರ್ಟ್‌ ಅಧಿಕಾರ ಕಸಿದುಕೊಳ್ಳುವುದು ಸುಪ್ರೀಂ ಕೋರ್ಟ್‌ನ ಉದ್ದೇಶವಲ್ಲ’ ಎಂದಿದೆ.

Read more Articles on