ನವದೆಹಲಿ: ‘ಕೃತಕ ಬುದ್ಧಿಮತ್ತೆಯ (ಎಐ) ಅವಕಾಶಗಳನ್ನು ಬಳಸಿಕೊಳ್ಳುವಾಗ ಸೈಬರ್ ವಂಚನೆ, ಮಾದಕವಸ್ತು ದುರ್ಬಳಕೆಯಂತಹ ಸಾಮಾಜಿಕ ಸವಾಲುಗಳನ್ನು ಎಚ್ಚರಿಕೆಯಿಂದ ಎದುರಿಸಿ. ಎಲ್ ನಿನೋ ಪರಿಣಾಮದಿಂದಾಗುವ ಅಪಾಯಗಳ ಬಗ್ಗೆ ಎಚ್ಚರದಿಂದಿರಿ. ನೀರಿನ ಸಂರಕ್ಷಣೆಗೆ ಬಲವಾದ ಕ್ರಮಗಳನ್ನು ತೆಗೆದುಕೊಳ್ಳಿ’ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ರಾಜ್ಯಗಳಿಗೆ ಕರೆ ನೀಡಿದ್ದಾರೆ.

ನೀತಿ ಆಯೋಗದ 11ನೇ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೋದಿ, ‘ಸಾಮಾಜಿಕ ಸವಾಲುಗಳಾದ ಮಾದಕವಸ್ತು ದುರ್ಬಳಕೆ ಮತ್ತು ಸೈಬರ್‌ ವಂಚನೆಗಳನ್ನು ತಡೆಗಟ್ಟಲು ಜಾಗೃತಿ ಅಭಿಯಾನಗಳು, ತಡೆಗಟ್ಟುವಿಕೆ ಕ್ರಮಗಳು ಮತ್ತು ಉತ್ತಮ ಆಡಳಿತ ಅಗತ್ಯ. ಹೂಡಿಕೆ ಆಕರ್ಷಿಸಲು ಪಾರದರ್ಶಕ ಆಡಳಿತ ಮತ್ತು ಮೂಲಸೌಕರ್ಯ ಅತ್ಯಂತ ಮುಖ್ಯ. ಬ್ರ್ಯಾಂಡಿಂಗ್, ಸುಲಭ ವ್ಯವಹಾರ ವಾತಾವರಣ, ಡೇಟಾ ಸೆಂಟರ್‌ಗಳು, ಎಐ ಮತ್ತು ಮುಂದಿನ ತಲೆಮಾರಿನ ಉತ್ಪಾದನೆಯ ಅವಕಾಶಗಳನ್ನು ಸೃಷ್ಟಿಸಿ’ ಎಂದು ರಾಜ್ಯಗಳಿಗೆ ಸಲಹೆ ನೀಡಿದರು.

ವಿಕಸಿತ ಭಾರತಕ್ಕಾಗಿ ಒಟ್ಟಾಗಿ ಕೆಲಸ:

ಭಾರತದ 70 ಕೋಟಿ ಯುವಕರನ್ನು ದೊಡ್ಡ ಸಂಪತ್ತು ಎಂದು ಕರೆದ ಪ್ರಧಾನಿ, ‘ಈ ಡೆಮೋಗ್ರಾಫಿಕ್ ಡಿವಿಡೆಂಡ್ ಅನ್ನು ಡೆವಲಪ್‌ಮೆಂಟ್ ಡಿವಿಡೆಂಡ್ ಆಗಿ ಪರಿವರ್ತಿಸಬೇಕು. ಜನರನ್ನು ಭವಿಷ್ಯದ ಆರ್ಥಿಕತೆಗೆ ಸಿದ್ಧಪಡಿಸಲು ಎಐನಲ್ಲಿ ಕೌಶಲ್ಯ ಅಭಿವೃದ್ಧಿ ಮಾಡಬೇಕು. ಇತ್ತೀಚೆಗೆ ಭಾರತವು ವಿವಿಧ ದೇಶಗಳೊಂದಿಗೆ ಮಾಡಿಕೊಂಡಿರುವ ವ್ಯಾಪಾರ ಒಪ್ಪಂದಗಳ ಪ್ರಯೋಜನವನ್ನು ಯುವಕರು ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್‌ಎಂಇ) ಪಡೆಯುವಂತೆ ಅವಕಾಶಗಳನ್ನು ಸೃಷ್ಟಿಸಬೇಕು. ಕೇಂದ್ರ ಮತ್ತು ರಾಜ್ಯಗಳು ಒಟ್ಟಾಗಿ ಕೆಲಸ ಮಾಡಿ ವಿಕಸಿತ ಭಾರತದ ಗುರಿ ಸಾಧಿಸಬೇಕು. ವಿಕಸಿತ ಭಾರತದ ದೃಷ್ಟಿಕೋನವು ಪ್ರತಿ ರಾಜ್ಯ, ಜಿಲ್ಲೆ, ಬ್ಲಾಕ್ ಮತ್ತು ಗ್ರಾಮದ ಸಾಮೂಹಿಕ ಸಂಕಲ್ಪವಾಗಬೇಕು’ ಎಂದು ಸೂಚಿಸಿದರು.


ವಾರ್ಷಿಕ ಸಭೆ

ಈ ಸಭೆಯಲ್ಲಿ ದೇಶದ ಎಲ್ಲ 28 ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು 5 ಕೇಂದ್ರ ಆಡಳಿತ ಪ್ರದೇಶಗಳು ಭಾಗವಹಿಸಿದ್ದರು. ಇದೇ ಮೊದಲ ಬಾರಿಗೆ ಎಲ್ಲ 28 ರಾಜ್ಯಗಳ ಮುಖ್ಯಮಂತ್ರಿಗಳು ಈ ವಾರ್ಷಿಕ ಸಭೆಯಲ್ಲಿ ಭಾಗವಹಿಸಿದ್ದು ವಿಶೇಷ.