ನವದೆಹಲಿ: ‘ನ್ಯಾಯಾಂಗ ನೇಮಕಾತಿಯಲ್ಲಿ ಪಾರದರ್ಶಕತೆಯ ಕೊರತೆಯಿದೆ. ಇದು ಅನಪೇಕ್ಷಿತ ಅಭ್ಯರ್ಥಿಗಳು ನ್ಯಾಯಾಂಗವನ್ನು ಪ್ರವೇಶಿಸಿ, ಜನರನ್ನು ‘ಇರುವೆಗಳು’ ಎಂದು ಕರೆಯುವಂತಹ ಅಸಾಂವಿಧಾನಿಕ ಹೇಳಿಕೆಗೆ ಅವಕಾಶ ಕಲ್ಪಿಸಿದೆ’ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಇತ್ತೀಚೆಗೆ ನಿರುದ್ಯೋಗಿಗಳನ್ನು ‘ಪರಾವಲಂಬಿ’ ಮತ್ತು ‘ಜಿರಳೆ’ಗಳು ಎಂದು ಪ್ರಸ್ತಾಪಿಸಿದ್ದ ವಿಷಯ ದೇಶವ್ಯಾಪಿ ಜಿರಳೆ ಅಭಿಯಾನಕ್ಕೆ ಕಾರಣವಾದ ಬೆನ್ನಲ್ಲೇ ನ್ಯಾ. ಭುಯಾನ್ ಅವರಿಂದ ಈ ಹೇಳಿಕೆ ಬಂದಿದೆ. ಆದರೆ ನ್ಯಾ.ಭುಯಾನ್ ತಮ್ಮ ಭಾಷಣದಲ್ಲಿ ಎಲ್ಲೂ ಯಾರ ಹೆಸರನ್ನೂ ಪ್ರಸ್ತಾಪ ಮಾಡಿಲ್ಲ.
‘ವಿಧಿ’ ಚಿಂತಕರ ಚಾವಡಿಯ ‘ನ್ಯಾಯಾಂಗ ಪಾರದರ್ಶಕತೆ ಸೂಚ್ಯಂಕ’ ವರದಿ ಬಿಡುಗಡೆ ಮಾಡಿ ಮಾತನಾಡಿದ ನ್ಯಾ.ಭುಯಾನ್, ‘ಕೊಲಿಜಿಯಂ ತನ್ನ ಕಳೆದ 3 ನೇಮಕಾತಿಗಳಿಗೆ ಯಾವುದೇ ಕಾರಣ ನೀಡಿಲ್ಲ. ಇದು ಪಾರದರ್ಶಕತೆಯ ತತ್ವದಿಂದ ಹಿಂದಕ್ಕೆ ಸರಿಯುವ ನಡೆಯೇ?’ ಎಂದು ಕಟುವಾಗಿ ಪ್ರಶ್ನಿಸಿದರು.
ಜಡ್ಜ್ ನೇಮಕ ಜನರಿಗೆ ತಿಳಿಸಿ:
‘ನ್ಯಾಯಾಂಗ ನೇಮಕಾತಿಗಳಿಗೆ ಸಂಬಂಧಿಸಿದಂತೆ ಕೊಲಿಜಿಯಂ ತನ್ನ ಶಿಫಾರಸುಗಳ ಹಿಂದಿನ ಕಾರಣ ವಿವರಿಸಬೇಕು. ಇಂತಹ ನಿರ್ಣಾಯಕ ನೇಮಕಾತಿಗಳನ್ನು ಮಾಡುವಾಗ ಸುಶಿಕ್ಷಿತ ಸಾರ್ವಜನಿಕ ಚರ್ಚೆ ನಡೆಯಬೇಕು. ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯಲು ಮತ್ತು ನ್ಯಾಯಾಂಗದಲ್ಲಿ ಅರ್ಹತೆಗೆ ಮನ್ನಣೆ ನೀಡಲು ಪಾರದರ್ಶಕತೆ ಅತ್ಯಗತ್ಯ’ ಎಂದು ಪ್ರತಿಪಾದಿಸಿದರು.
ಜಡ್ಜ್‌ಗಳು ಯಾರು ಎಂಬುದನ್ನು ತಿಳಿದುಕೊಳ್ಳುವ ಹಕ್ಕು ನಾಗರಿಕರಿಗಿದೆ.
‘ಕೋರ್ಟ್‌ಗಳಲ್ಲಿ ಏನು ನಡೆಯುತ್ತಿದೆ ಮತ್ತು ತಮ್ಮ ಜಡ್ಜ್‌ಗಳು ಯಾರು ಎಂಬುದನ್ನು ತಿಳಿದುಕೊಳ್ಳುವ ಹಕ್ಕು ನಾಗರಿಕರಿಗಿದೆ. ಒಬ್ಬ ಜಡ್ಜ್ ಯಾವ ರೀತಿಯ ತೀರ್ಪುಗಳನ್ನು ನೀಡಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ಹಕ್ಕೂ ಅವರಿಗಿದೆ. ಇವೆಲ್ಲವೂ ಸಾರ್ವಜನಿಕರಿಗೆ ಲಭ್ಯವಿರಬೇಕು. ಕೇವಲ ಅಧಿಕಾರವನ್ನು ಚಲಾಯಿಸುವುದಲ್ಲದೆ, ನ್ಯಾಯ ಒದಗಿಸುವುದಾಗಿ ಪ್ರತಿಪಾದಿಸುವ ಪ್ರತಿ ಕಾನೂನು ವ್ಯವಸ್ಥೆಯೂ ಒಂದು ಹಳೆಯ ಮತ್ತು ಮುಜುಗರದ ಪ್ರಶ್ನೆಗೆ ಉತ್ತರಿಸಬೇಕಾಗುತ್ತದೆ: ಕಾವಲುಗಾರರ ಮೇಲೆ ಕಣ್ಣಿಡುವವರು ಯಾರು?’ ಎಂದು ಪ್ರಶ್ನಿಸಿದರು.
ಜನರನ್ನು ‘ಇರುವೆ’ ಎಂದಿದ್ದಕ್ಕೆ ಆಕ್ಷೇಪ:
‘ನಿರ್ದಿಷ್ಟ ನ್ಯಾಯಾಧೀಶರನ್ನು ಏಕೆ ನೇಮಕ ಮಾಡಿದ್ದೇವೆ ಎಂದು ಕೊಲಿಜಿಯಂ ಬಹಿರಂಗಪಡಿಸದಿದ್ದರೆ, ಅದು ನಿಜವಾಗಿಯೂ ಅತ್ಯುತ್ತಮರಾದ ಮತ್ತು ಅಪಾರ ಸೇವೆ ಸಲ್ಲಿಸಿದ ಅನೇಕ ನ್ಯಾಯಾಧೀಶರಿಗೆ ಅನ್ಯಾಯವೆಸಗಿದಂತಾಗುತ್ತದೆ. ಇದರಿಂದ ಕೆಲವರು ನ್ಯಾಯಾಂಗವನ್ನು ಪ್ರವೇಶಿಸಬಹುದು. ಮುಂದೆ ಜನರ ಗುಂಪೊಂದನ್ನು ‘ಇರುವೆಗಳು’ ಎಂದು ಸಂಬೋಧಿಸುವಂತಹ ಅತ್ಯಂತ ವಿವಾದಾತ್ಮಕ, ಅನುಚಿತ ಮತ್ತು ಮಾನವೀಯತೆಯನ್ನು ಕಡೆಗಣಿಸುವ ಹೇಳಿಕೆಗಳನ್ನು ನೀಡಬಹುದು. ಇಷ್ಟಾದರೂ ಯಾವುದೇ ತೊಂದರೆಯಿಲ್ಲದೆ ಪಾರಾಗಬಹುದು’ ಎಂದು ಚಾಟಿ ಬೀಸಿದರು.
