ಪ್ರಜಾಪ್ರಭುತ್ವ ಪಾಠ ಬಿಟ್ಟು ಉಗ್ರರ ಫ್ಯಾಕ್ಟರಿ ಮುಚ್ಚಿ: ಪಾಕ್‌ಗೆ ತಾಕೀತು

| Published : Mar 26 2024, 01:03 AM IST / Updated: Mar 26 2024, 11:29 AM IST

ಪ್ರಜಾಪ್ರಭುತ್ವ ಪಾಠ ಬಿಟ್ಟು ಉಗ್ರರ ಫ್ಯಾಕ್ಟರಿ ಮುಚ್ಚಿ: ಪಾಕ್‌ಗೆ ತಾಕೀತು
Share this Article
  • FB
  • TW
  • Linkdin
  • Email

ಸಾರಾಂಶ

ಭಯೋತ್ಪಾದನೆಯ ಅತಿದೊಡ್ಡ ಇತಿಹಾಸ ಹೊಂದಿರುವ ದೇಶವೊಂದು ನೆರೆಯ ದೇಶಕ್ಕೆ ಪ್ರಜಾಪ್ರಭುತ್ವದ ಪಾಠ ಮಾಡುವುದನ್ನು ಬಿಟ್ಟು, ತನ್ನ ದೇಶದಲ್ಲಿನ ಉಗ್ರರ ಫ್ಯಾಕ್ಟರಿ ಮುಚ್ಚುವುದರ ಬಗ್ಗೆ ಆದ್ಯತೆ ನೀಡಬೇಕು ಎಂದು ಪಾಕಿಸ್ತಾನಕ್ಕೆ ಭಾರತ ತಪರಾಕಿ ಹಾಕಿದೆ.

ನವದೆಹಲಿ: ಭಯೋತ್ಪಾದನೆಯ ಅತಿದೊಡ್ಡ ಇತಿಹಾಸ ಹೊಂದಿರುವ ದೇಶವೊಂದು ನೆರೆಯ ದೇಶಕ್ಕೆ ಪ್ರಜಾಪ್ರಭುತ್ವದ ಪಾಠ ಮಾಡುವುದನ್ನು ಬಿಟ್ಟು, ತನ್ನ ದೇಶದಲ್ಲಿನ ಉಗ್ರರ ಫ್ಯಾಕ್ಟರಿ ಮುಚ್ಚುವುದರ ಬಗ್ಗೆ ಆದ್ಯತೆ ನೀಡಬೇಕು ಎಂದು ಪಾಕಿಸ್ತಾನಕ್ಕೆ ಭಾರತ ತಪರಾಕಿ ಹಾಕಿದೆ.

ಜಿನೇವಾದಲ್ಲಿ ನಡೆಯುತ್ತಿರುವ ಅಂತರ್‌ ಸಂಸದೀಯ ಒಕ್ಕೂಟದ ಸಭೆಯಲ್ಲಿ ಕಾಶ್ಮೀರದಲ್ಲಿನ ಬೆಳವಣಿಗೆಗಳ ಕುರಿತು ಕಳವಳ ವ್ಯಕ್ತಪಡಿಸಿದ್ದ ಪಾಕಿಸ್ತಾನಕ್ಕೆ ತಿರುಗೇಟು ನೀಡಿದ ಭಾರತದ ಪ್ರತಿನಿಧಿ ಹಾಗೂ ರಾಜ್ಯಸಭೆ ಉಪಸಭಾಪತಿ ಹರಿವಂಶ್‌, ‘ಭಾರತ ವಿಶ್ವದಲ್ಲೇ ಅತಿದೊಡ್ಡ ಪ್ರಜಾಪ್ರಭುತ್ವ. 

ನಮ್ಮ ಮಾದರಿಯನ್ನು ಇತರೆ ದೇಶಗಳು ಅನುಕರಿಸ ಬಯಸುತ್ತವೆ. ಆದರೆ ಪ್ರಜಾಪ್ರಭುತ್ವದ ವಿಷಯದಲ್ಲಿ ಅತ್ಯಂತ ಕರಾಳ ಹಿನ್ನೆಲೆ ಹೊಂದಿರುವ ದೇಶವೊಂದು ನಮಗೆ ಪ್ರಜಾಪ್ರಭುತ್ವದ ಪಾಠ ಮಾಡಲು ಬರುವುದು ಹಾಸ್ಯಾಸ್ಪದ. 

ಜೊತೆಗೆ ತನ್ನ ಅಸಂಬದ್ಧ ಆಪಾದನೆ ಮತ್ತು ಸುಳ್ಳಿನ ನಿರೂಪಣೆಗೆ ಇಂಥ ವೇದಿಕೆ ಬಳಸಿಕೊಳ್ಳುವುದು ವೇದಿಕೆ ಗೌರವವನ್ನು ಕಡಿಮೆ ಮಾಡುತ್ತದೆ’ ಎಂದು ಛೀಮಾರಿ ಹಾಕಿದ್ದಾರೆ.

‘ಜಮ್ಮು ಮತ್ತು ಕಾಶ್ಮೀರ, ಲಡಾಖ್‌ ಹಿಂದೆಯೂ ಭಾರತದ ಭಾಗವಾಗಿತ್ತು. ಮುಂದೆಯೂ ಆಗಿರಲಿದೆ. ಯಾವುದೇ ವಾಕ್ಚಾತುರ್ಯ, ಪ್ರಾಪಗೆಂಡಾ ಈ ವಾಸ್ತವ ಸಂಗತಿಯನ್ನು ಅಳಿಸಿಹಾಕಲಾಗದು. 

ಅದರ ಬದಲು ಕಾಶ್ಮೀರದಲ್ಲಿ ಭಯೋತ್ಪಾದನೆ ಕೃತ್ಯಗಳಿಗೆ ಪ್ರೋತ್ಸಾಹ ನೀಡಲು ತಾನು ಸ್ಥಾಪಿಸಿರುವ ಉಗ್ರರ ಕ್ಯಾಂಪ್‌ಗಳನ್ನು ಮುಚ್ಚುವುದು ಒಳಿತು’ ಎಂದು ನೆರೆಯ ದೇಶಕ್ಕೆ ತಪರಾಕಿ ಹಾಕಿದರು.

ಇದೇ ವೇಳೆ ‘ಭಯೋತ್ಪಾದನೆ ವಿಷಯದಲ್ಲಿ ಪಾಕಿಸ್ತಾನದ ಸುದೀರ್ಘ ಇತಿಹಾಸದ ಬಗ್ಗೆ ವೇದಿಕೆಯ ಗಮನ ಸೆಳೆದ ಹರಿವಂಶ್‌, ಭಯೋತ್ಪಾದನೆಯ ಜಾಗತಿಕ ಮುಖವಾಗಿದ್ದ ಒಸಾಮಾ ಬಿನ್‌ ಲಾಡೆನ್‌ ಪಾಕಿಸ್ತಾನದಲ್ಲೇ ಸಿಕ್ಕಿಬಿದ್ದಿದ್ದ ಎಂಬುದನ್ನು ಯಾರೂ ಮರೆತಿಲ್ಲ. 

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಉಗ್ರರೆಂದು ಘೋಷಿಸಿರುವ ಅತಿ ಹೆಚ್ಚು ಜನರಿಗೆ ಪಾಕಿಸ್ತಾನವೇ ಆಶ್ರಯ ನೀಡಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. 

ಹೀಗಾಗಿ ಇನ್ನು ಮುಂದಾದರೂ, ತನ್ನ ದೇಶದ ಜನತೆ ಒಳಿತನ್ನು ಬಯಸಿಯಾದರೂ ಪಾಕಿಸ್ತಾನ ಉತ್ತಮ ಪಾಠ ಕಲಿಯಲಿದೆ ಎಂಬುದು ನಮ್ಮ ಆಶಾಭಾವನೆ’ ಎಂದು ಹೇಳಿದರು.