ತಿರುಪತಿ ಲಡ್ಡು ತಯಾರಿಗೆ ಕಳಪೆ ಗುಣಮಟ್ಟದ ತುಪ್ಪ ಬಳಸಿದ ಲೋಕಲ್‌ ವಿಷಯ ದೊಡ್ಡ ಮಾಡಬೇಡಿ: ಪ್ರಕಾಶ್‌ ರೈ

| Published : Sep 22 2024, 01:47 AM IST / Updated: Sep 22 2024, 05:14 AM IST

Prakash Rai

ಸಾರಾಂಶ

ತಿರುಪತಿ ಲಡ್ಡು ತಯಾರಿಕೆಯಲ್ಲಿ ಕಳಪೆ ಗುಣಮಟ್ಟದ ತುಪ್ಪ ಬಳಕೆ ವಿವಾದಕ್ಕೆ ಸಂಬಂಧಿಸಿದಂತೆ ನಟ ಪವನ್ ಕಲ್ಯಾಣ್ ಅವರ ಹೇಳಿಕೆಗೆ ನಟ ಪ್ರಕಾಶ್ ರೈ ತಿರುಗೇಟು ನೀಡಿದ್ದಾರೆ. ಈ ಘಟನೆಯನ್ನು ರಾಷ್ಟ್ರಮಟ್ಟದಲ್ಲಿ ಸ್ಫೋಟಿಸುವ ಮೂಲಕ ಆತಂಕ ಹಬ್ಬಿಸುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ವಿಜಯವಾಡ: ತಿರುಪತಿ ಲಡ್ಡು ತಯಾರಿಗೆ ಕಳಪೆ ಗುಣಮಟ್ಟದ ತುಪ್ಪ ಬಳಸಿದ ವಿಷಯ ಲೋಕಲ್‌. ಅದನ್ನೇಕೆ ರಾಷ್ಟ್ರಮಟ್ಟದಲ್ಲಿ ದೊಡ್ಡದಾಗಿ ಆತಂಕ ಹಬ್ಬಿಸಲು ಬಳಸುತ್ತಿದ್ದೀರಿ ಎಂದು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ, ನಟ ಪವನ್‌ ಕಲ್ಯಾಣ್‌ಗೆ, ನಟ ಪ್ರಕಾಶ್‌ ರೈ ಪ್ರಶ್ನೆ ಮಾಡಿದ್ದಾರೆ.

ತಿರುಪತಿ ಲಡ್ಡುಗೆ ಬಳಸಿದ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಪತ್ತೆಯಾದ ವರದಿ ಕುರಿತು ಪ್ರತಿಕ್ರಿಯಿಸಿದ್ದ ಪವನ್‌ ಕಲ್ಯಾಣ್‌, ‘ಬಹುಶಃ ದೇಶದಲ್ಲಿ ಸನಾತನ ಧರ್ಮ ಸ್ಥಾಪನೆಗೆ ಕಾಲ ಸನ್ನಿಹಿತವಾಗಿದೆ. ಕಾನೂನುಗಳನ್ನು ರೂಪಿಸುವವರು, ಧಾರ್ಮಿಕ ಮುಖಂಡರು, ನ್ಯಾಯಾಂಗ, ನಾಗರಿಕರು ಮತ್ತು ಮಾಧ್ಯಮಗಳನ್ನು ಒಳಗೊಂಡಂತೆ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಬೇಕು. ಸನಾತನ ಧರ್ಮವನ್ನು ಅಪವಿತ್ರಗೊಳಿಸುವುದರ ವಿರುದ್ಧ ನಾವೆಲ್ಲರೂ ಒಗ್ಗೂಡಬೇಕು’ ಎಂದಿದ್ದರು.

ಇದಕ್ಕೆ ತಿರುಗೇಟು ನೀಡಿರುವ ನಟ ಪ್ರಕಾಶ್ ರಾಜ್, ‘ಪವನ್ ಕಲ್ಯಾಣ್ ಅವರೇ, ಈ ಘಟನೆ ನೀವು ಡಿಸಿಎಂ ಆಗಿರುವ ರಾಜ್ಯದಲ್ಲಿ ನಡೆದಿದೆ. ದಯವಿಟ್ಟು ತನಿಖೆ ನಡೆಸಿ, ಆರೋಪಿಗಳ ವಿರುದ್ಧ ಕ್ರಮವನ್ನು ಕೈಗೊಳ್ಳಿ. ನಮಗೆ ದೇಶದಲ್ಲಿ ಸಾಕಷ್ಟು ಕೋಮು ಉದ್ವಿಗ್ನತೆ ಇದೆ ಅದರ ನಡುವೆ ಯಾಕೆ ಈ ಘಟನೆಯನ್ನು ರಾಷ್ಟ್ರಮಟ್ಟದಲ್ಲಿ ಸ್ಫೋಟಿಸುವ ಮೂಲಕ ಆತಂಕ ಹಬ್ಬಿಸುತ್ತಿದ್ದೀರಿ’ ಎಂದು ಎಕ್ಸ್‌ನಲ್ಲಿ ಪ್ರಶ್ನಿಸಿದ್ದಾರೆ.

ಲಡ್ಡುಗೆ ಬಳಸಿದ್ದು ಅಮುಲ್‌ ತುಪ್ಪ ಎಂದು ಸುಳ್ಳು ಸುದ್ದಿ 7 ಜನರ ವಿರುದ್ಧ ಕೇಸು

ಅಹ್ಮದಾಬಾದ್‌ (ಗುಜರಾತ್‌): ತಿರುಪತಿ ಲಡ್ಡುವಿನಲ್ಲಿ ಪತ್ತೆಯಾದ ಪ್ರಾಣಿಗಳ ಕೊಬ್ಬಿನ ಅಂಶ ಹೊಂದಿರುವ ತುಪ್ಪ ಪೂರೈಸಿದ್ದು ‘ಅಮುಲ್‌’ ಎಂದು ಸುಳ್ಳು ಸುದ್ದಿ ಹಬ್ಬಿಸಿದ 7 ಜನರ ವಿರುದ್ಧ ಗುಜರಾತ್‌ನ ಅಮುಲ್‌ ಕಂಪನಿ ಪ್ರಕರಣ ದಾಖಲಿಸಿದೆ. ಕೆಲವು ಜಾಲತಾಣ ಬಳಕೆದಾರರು ಇಂಥ ಸುಳ್ಳು ಸುದ್ದಿ ಹಬ್ಬಿಸಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ನಡುವೆ ತಿರುಮಲ ತಿರುಪತಿ ದೇವಸ್ಥಾನಕ್ಕೆ ತನ್ನ ಅಮುಲ್‌ಗೆ ಗುರುತಿನ ಯಾವುದೇ ತುಪ್ಪ ಸರಬರಾಜು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಲಡ್ಡು ಕಲಬೆರಕೆ ವಿವಾದ: ಜಗನ್ ವಿರುದ್ಧ ಪ್ರಕರಣ ದಾಖಲು

ಹೈದರಾಬಾದ್‌: ತಿರುಪತಿ ಲಡ್ಡು ತಯಾರಿಕೆಗೆ ಕಳಪೆ ಗುಣಮಟ್ಟದ ತುಪ್ಪ ಬೆರೆಸಿ, ದೇಗುಲದ ಪಾವಿತ್ರ್ಯತೆಯನ್ನು ಹಾಳು ಮಾಡಲಾಗಿದೆ ಜೊಯೆಹೆ ಹಿಂದೂಗಳ ಭಾವನೆಗೆ ಧಕ್ಕೆಯುಂಟು ಮಾಡಿದ್ದಾರೆ ಎಂದು ಆರೋಪಿಸಿ ಆಂಧ್ರಪ್ರದೇಶ ಮಾಜಿ ಸಿಎಂ, ವೈಎಸ್‌ಆರ್‌ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಹಾಗೂ ಕೆಲವರ ವಿರುದ್ಧ ಪ್ರಕರಣ ದಾಖಲಾಗಿದೆ. ವಕೀಲ ಕೆ. ಕರುಣ ಸಾಗರ್‌ ಎನ್ನುವವರು ಸೈದಬಾದ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣದ ಬಗ್ಗೆ ತನಿಖೆ ನಡೆಸಿ ಜಗನ್ ಮತ್ತು ಇತರ ಆರೋಪಿತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆರೋಪಿಸಿದ್ದಾರೆ.