ಸಾರಾಂಶ
ನವದೆಹಲಿ: ಅಕ್ರಮವಾಗಿ ನೇಮಕಾತಿ ಆರೋಪ ಹೊರಿಸಿ 25 ಸಾವಿರಕ್ಕೂ ಅಧಿಕ ಸರ್ಕಾರಿ ಶಿಕ್ಷಕರನ್ನು ಇತ್ತೀಷೆಗಷ್ಟೇ ವಜಾಗೊಳಿಸಿದ್ದ ಸುಪ್ರೀಂ ಕೋರ್ಟ್, ‘ಅದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು’ ಎಂಬ ಕಾರಣಕ್ಕೆ ‘ಕಳಂಕರಹಿತ ಶಿಕ್ಷಕರಿಗೆ’ ಬೋಧನೆ ಮುಂದುವರೆಸಲು ಅನುಮತಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾ। ಸಂಜೀವ್ ಖನ್ನಾ, ‘ಕೋರ್ಟ್ ಆದೇಶದಿಂದಾಗಿ ವಿದ್ಯಾರ್ಥಿಗಳಿಗೆ ಕಷ್ಟವಾಗಬಾರದು. ಆದ್ದರಿಂದ ಹೊಸ ನೇಮಕಾತಿಯಾಗುವ ತನಕ 9, 10, 11 ಮತ್ತು 12ನೇ ತರಗತಿಯ ಶಿಕ್ಷಕರು ಬೋಧನೆಯನ್ನು ಮುಂದುವರೆಸಬಹುದು. ರಾಜ್ಯದ ಶಾಲಾ ಸೇವಾ ಆಯೋಗ ಮೇ 31ರ ಹೊತ್ತಿಗೆ ಹೊಸ ನೇಮಾತಿಗೆ ಜಾಹೀರಾತು ನೀಡಬೇಕು ಮತ್ತು ಡಿ.31ರೊಳಗೆ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು’ ಎಂದು ನಿರ್ದೇಶಿಸಿದೆ. ಈ ಸಂಬಂಧ ಕೆಲ ಸೂಚನೆಗಳನ್ನೂ ನೀಡಿರುವ ಸುಪ್ರೀಂ, ರಾಜ್ಯ ಸರ್ಕಾರ ಮತ್ತು ಆಯೋಗ ಮೇ 31ರೊಳಗೆ ಅಫಿಡವಿಟ್ ಸಲ್ಲಿಸಬೇಕು. ಡಿ. 31ರೊಳಗೆ ನೇಮಕಾತಿ ಪೂರ್ಣಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಜಾಹೀರಾತು ಪ್ರತಿ ಮತ್ತು ವೇಳಾಪಟ್ಟಿಯನ್ನು ಲಗತ್ತಿಸಬೇಕು ಎಂದು ಹೇಳಿದೆ.
ಆದರೆ, ಗ್ರೂಪ್ ಸಿ ಮತ್ತು ಡಿ ನೌಕರರಲ್ಲಿ ಕಳಂಕಿತರ ಸಂಖ್ಯೆ ಅಧಿಕವಿರುವುದರಿಂದ ಅವರಿಗೆ ಈ ಆದೇಶ ಅನ್ವಯಿಸುವುದಿಲ್ಲ ಎಂದೂ ಪೀಠ ತಿಳಿಸಿದೆ. 2016ರಲ್ಲಿ ನಡೆದ ನೇಮಕಾತಿಯಲ್ಲಿ ಹಲವು ಅಕ್ರಮಗಳು ನಡೆದಿದ್ದರಿಂದ 25,753 ಶಿಕ್ಷಕರನ್ನು ವಜಾಗೊಳಿಸುವಂತೆ ಕಲ್ಕತ್ತಾ ಹೈಕೋರ್ಟ್ ಆದೇಶಿಸಿತ್ತು. ಈ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿತ್ತು. ಇದರಿಂದ ಕೆಲಸ ಕಳೆದುಕೊಂಡವರಿಗಷ್ಟೇ ಅಲ್ಲದೆ ಸರ್ಕಾರಿ ಶಾಲೆಗಳಿಗೂ ಸಮಸ್ಯೆಯಾಗಿತ್ತು. ಈ ಸಂಬಂಧ ಮರುಪರಿಶೀಲನೆ ಕೋರಿ ಮಮತಾ ಸರ್ಕಾರ ಸುಪ್ರಿಂ ಮೊರೆಹೋಗಿತ್ತು.