ಸಾರಾಂಶ
ಇತ್ತೀಚೆಗಷ್ಟೇ ಪಾಕಿಸ್ತಾನದ ಪ್ರಕ್ಷುಬ್ಧ ಬಲೂಚಿಸ್ತಾನದ ಮಾರುಕಟ್ಟೆಯಲ್ಲಿ ಬಾಂಬ್ ಸ್ಫೋಟದ ಬೆನ್ನಲ್ಲೇ ಮತ್ತೊಂದು ಘಟನೆ ನಡೆದಿದ್ದು, ಶಾಲಾ ಬಸ್ ಮೇಲೆ ಅತ್ಮಾಹುತಿ ಬಾಂಬ್ ದಾಳಿ ನಡೆದಿದೆ.
- ಶಾಲಾ ವಾಹನಕ್ಕೆ ಬಾಂಬ್: ಮೃತರಲ್ಲಿ 3 ಮಕ್ಕಳು
- ದಾಳಿಯಿಂದ ಭಾರತದ ಕೈವಾಡ: ಪಾಕಿಸ್ತಾನ- ಪಾಕ್ ಆರೋಪ ಆಧಾರರಹಿತ: ಭಾರತ
ಇಸ್ಲಾಮಾಬಾದ್: ಇತ್ತೀಚೆಗಷ್ಟೇ ಪಾಕಿಸ್ತಾನದ ಪ್ರಕ್ಷುಬ್ಧ ಬಲೂಚಿಸ್ತಾನದ ಮಾರುಕಟ್ಟೆಯಲ್ಲಿ ಬಾಂಬ್ ಸ್ಫೋಟದ ಬೆನ್ನಲ್ಲೇ ಮತ್ತೊಂದು ಘಟನೆ ನಡೆದಿದ್ದು, ಶಾಲಾ ಬಸ್ ಮೇಲೆ ಅತ್ಮಾಹುತಿ ಬಾಂಬ್ ದಾಳಿ ನಡೆದಿದೆ. ಈ ಸ್ಫೋಟದಲ್ಲಿ 3 ಮಕ್ಕಳು ಸೇರಿದಂತೆ 6 ಮಂದಿ ಸಾವನ್ನಪ್ಪಿದ್ದು, ಸುಮಾರು 38 ಮಂದಿ ಗಾಯಗೊಂಡಿದ್ದಾರೆ.ಇಲ್ಲಿನ ಖುಜ್ದಾರ್ ಜಿಲ್ಲೆಯಲ್ಲಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಶಾಲಾ ವಾಹನವನ್ನು ಗುರಿಯಾಗಿಸಿಕೊಂಡು ದಾಳಿ ನಡೆದಿದೆ. ಸುಧಾರಿತ ಸ್ಫೋಟಕ ಬಳಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಆತ್ಮಾಹುತಿ ಬಾಂಬ್‌ನಿಂದ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ. ಈ ಘಟನೆಯನ್ನು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಖಂಡಿಸಿದ್ದಾರೆ.
ಭಾರತದ ಕೈವಾಡ- ಪಾಕ್ ಆರೋಪ:ಬಲೂಚಿಸ್ತಾನದಲ್ಲಿ ನಡೆದ ಈ ಕೃತ್ಯದ ಹಿಂದೆ ಭಾರತದ ಕೈವಾಡವಿದೆ ಎಂದು ಪಾಕ್ ಆರೋಪಿಸಿದೆ. ಆದರೆ ಭಾರತದ ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್ ಈ ಬಗ್ಗೆ ಸ್ಪಷ್ಟ ಪಡಿಸಿದ್ದು, ‘ಈ ದಾಳಿಯಲ್ಲಿ ಭಾರತದ ಕೈವಾಡವಿದೆ ಎನ್ನುವ ಆಧಾರರಹಿತ ಆರೋಪವನ್ನು ಭಾರತ ನಿರಾಕರಿಸುತ್ತದೆ. ಜಾಗತಿಕ ಭಯೋತ್ಪಾದನೆಯ ಕೇಂದ್ರ ಬಿಂದು ಎನ್ನುವ ಹಣೆಪಟ್ಟಿಯನ್ನು ಪಾಕಿಸ್ತಾನ ಬೇರೆಡೆಗೆ ತಿರುಗಿಸುವ ಪ್ರಯತ್ನವಿದು’ ಎಂದಿದ್ದಾರೆ.