ಬಿಜೆಪಿ ಗೆದ್ದಿದ್ದ ಫಲಿತಾಂಶ ರದ್ದು ಮಾಡಿ ಆಪ್‌ಗೆ ಜಯ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ನ್ಯಾಯಾಲಯದಲ್ಲೇ ಮತ ಎಣಿಕೆ ಮಾಡುವ ಮೂಲಕ 8 ವಿಪಕ್ಷ ಮತಗಳ ಅಸಿಂಧುವೇ ಅಕ್ರಮ ಎಂದು ಪ್ರಕಟಿಸಿದೆ. ಅಲ್ಲದೆ ಚುನಾವಣಾಧಿಕಾರಿ ಮೇಲೆ ಕ್ರಮಕ್ಕೆ ಆದೇಶ ನೀಡಿದೆ.

ನವದೆಹಲಿ: ದೇಶದ ನಗರ-ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಎಚ್ಚರಿಕೆ ಸಂದೇಶ ಎನ್ನಬಹುದಾದ ಅತ್ಯಂತ ಮಹತ್ವದ ತೀರ್ಪನ್ನು ಮಂಗಳವಾರ ಸುಪ್ರೀಂ ಕೋರ್ಟ್‌ ಪ್ರಕಟಿಸಿದ್ದು, ಚಂಡೀಗಢ ಮೇಯರ್ ಚುನಾವಣೆಯ ಫಲಿತಾಂಶವನ್ನು ರದ್ದುಗೊಳಿಸಿದೆ ಮತ್ತು ಪರಾಜಿತ ಎಎಪಿ-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಕುಲದೀಪ್ ಕುಮಾರ್ ಅವರನ್ನು ಹೊಸ ನಗರ ಮೇಯರ್ ಆಗಿ ಘೋಷಿಸಿದೆ.

ಇದೇ ವೇಳೆ ಜ.30ರಂದು ನಡೆದ ಚುನಾವಣೆ ವೇಳೆ ವಿಪಕ್ಷಗಳ ಮತಗಳನ್ನು ತಿರುಚಿ ಕುಲಗೆಡಿಸಿದ್ದ ಆರೋಪ ಹೊತ್ತಿದ್ದ ಚುನಾವಣಾಧಿಕಾರಿ ಅನಿಲ್‌ ಮಸೀಹ್‌ ಅವರು ‘ದುರ್ವರ್ತನೆ’ ತೋರಿದ್ದಾರೆ ಎಂದು ಕೋರ್ಟ್‌ ಕಟು ನುಡಿಗಳನ್ನು ಆಡಿದ್ದು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆದೇಶಿಸಿದೆ.

ಅಲ್ಲದೆ, ತಾನು ಇಡೀ ಮೇಯರ್‌ ಚುನಾವಣೆ ಪ್ರಕ್ರಿಯೆಯನ್ನು ರದ್ದುಗೊಳಿಸುತ್ತಿಲ್ಲ. ಮತಗಳನ್ನು ಅಮಾನ್ಯಗೊಳಿಸಿದ್ದೇ ಅಸಿಂಧುವಾಗಿರುವ ಕಾರಣ, ಚುನಾವಣಾಧಿಕಾರಿ ಅಮಾನ್ಯ ಮಾಡಿದ್ದ 8 ಮತಗಳನ್ನು ಮಾನ್ಯ ಎಂದು ಪರಿಗಣಿಸಿ ಕುಲದೀಪ್‌ ಕುಮಾರ್‌ ಅವರನ್ನು ವಿಜಯಿ ಎಂದು ಘೋಷಿಸಲಾಗುತ್ತದೆ ಮುಖ್ಯ ನ್ಯಾಯಾಧೀಶ ನ್ಯಾ। ಡಿ.ವೈ.ಚಂದ್ರಚೂಡ್ ಅವರಿದ್ದ ಪೀಠ ಹೇಳಿದೆ.

ಮಸೀಹ್‌ ಎಂಟು ಮತಪತ್ರಗಳನ್ನು ವಿರೂಪಗೊಳಿಸಲು ಉದ್ದೇಶಪೂರ್ವಕವಾಗಿ ಪ್ರಯತ್ನಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ. 

ಚುನಾವಣಾಧಿಕಾರಿಗೆ ಅಮಾನ್ಯ ಮತ ಪತ್ರದ ಮೇಲೆ ಸಹಿ ಹಾಕುವ ಅಧಿಕಾರವಿದೆಯೇ ವಿನಾ ಅದರ ಮೇಲೆ ಬೇರೆ ಏನೂ ಬರೆಯುವಂತಿಲ್ಲ. ಆದರೆ ‘ಕ್ರಾಸ್‌ ಮಾರ್ಕ್‌’ ಹಾಕುವ ಮೂಲಕ ಮಸೀಹ್‌ ದುರ್ವರ್ತನೆ ತೋರಿದ್ದಾರೆ ಎಂದು ಪೀಠ ಕಿಡಿಕಾರಿದೆ.

ಏನಿದು ವಿವಾದ?
ಜ.30ರಂದು ಚಂಡೀಗಢ ಮೇಯರ್‌ ಚುನಾವಣೆ ನಡೆದಿತ್ತು. ಇಲ್ಲಿ ಬಿಜೆಪಿ ಏಕಾಂಗಿಯಾಗಿ ಹಾಗೂ ಆಪ್‌-ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. 

ಆಗ 8 ಆಪ್‌-ಕಾಂಗ್ರೆಸ್‌ ಮತಗಳನ್ನು ಚುನಾವಣಾಧಿಕಾರಿ ಅಮಾನ್ಯಗೊಳಿದ ಕಾರಣ ಬಿಜೆಪಿಯ ಮನೋಜ್ ಸೋಂಕರ್ ಅವರು 16 ಮತಗಳನ್ನು ಪಡೆದು 12 ಮತ ಪಡೆದ ಕುಲದೀಪ್‌ ಕುಮಾರ್ ಅವರನ್ನು ಸೋಲಿಸಿದ್ದರು. ಆದರೆ ಮತ ಅಸಿಂಧು ಅಕ್ರಮ ಎಂದು ಆಪ್‌ ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು.