ಸಾರಾಂಶ
ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ 2,700 ದಾಟಿದೆ. ಅವಶೇಷಗಳ ಅಡಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆಯಾದರೂ, ಅವರೆಲ್ಲಾ ಬದುಕಿರುವ ಸಾಧ್ಯತೆ ಕ್ಷಣಕ್ಷಣಕ್ಕೂ ಕ್ಷೀಣಿಸುತ್ತಿದೆ.
ಬ್ಯಾಂಕಾಕ್: ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ 2,700 ದಾಟಿದೆ. ಅವಶೇಷಗಳ ಅಡಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆಯಾದರೂ, ಅವರೆಲ್ಲಾ ಬದುಕಿರುವ ಸಾಧ್ಯತೆ ಕ್ಷಣಕ್ಷಣಕ್ಕೂ ಕ್ಷೀಣಿಸುತ್ತಿದೆ. ಈ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಗಳು ‘2,719 ಸಾವನ್ನಪ್ಪಿದ್ದು, 4,521 ಮಂದಿ ಗಾಯಗೊಂಡಿದ್ದಾರೆ. 441 ಜನ ಕಾಣೆಯಾಗಿದ್ದಾರೆ’ ಎಂದು ಹೇಳಿದ್ದಾರೆ. ಅತ್ತ ಬದುಕುಳಿದವರ ಜೀವನವೂ ಅಸ್ತವ್ಯಸ್ತವಾಗಿದ್ದು, ವಿದ್ಯುತ್, ರಸ್ತೆ, ದೂರವಾಣಿ ಸಂಪರ್ಕ ಕಡಿತಗೊಂಡಿವೆ. ಜನ ಶುದ್ಧ ನೀರು, ಆಹಾರ, ಔಷಧವಿಲ್ಲದೆ ಒದ್ದಾಡುತ್ತಿದ್ದಾರೆ.
ಭೂಕಂಪದ ಚಿತ್ರ ಸೆರೆ ಹಿಡಿದ ಇಸ್ರೋ:ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಚಾರ್ಟೋಸಾಟ್-3 ಉಪಗ್ರಹ ಭೂಕಂಪದಿಂದ ಉಂಟಾದ ಅಪಾರ ಹಾನಿಯ ಚಿತ್ರಗಳನ್ನು ಸೆರೆಹಿಡಿದಿವೆ. ಮಾ.29ರಂದು ಇದನ್ನು ಪಡೆದಿದ್ದು, ಭೂಕಂಪಕ್ಕೂ ಮುನ್ನ ಸೆರೆಹಿಡಿದ ಚಿತ್ರಗಳೊಂದಿಗೆ ಅವುಗಳನ್ನು ಹೋಲಿಸಿ ನೋಡಲಾಗುತ್ತಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಇಸ್ರೋ, ‘ಮ್ಯಾಂಡಲೆ ಸೇರಿ ಹಲವು ನಗರಗಳಲ್ಲಿ ಮೂಲಸೌಕರ್ಯಗಳಿಗೆ ಅಪಾರ ಹಾನಿಯಾಗಿರುವುದು ಕಂಡುಬಂದಿದೆ. ಸಗೈಂಗ್‌ನಲ್ಲಿ ಹಲವು ಕಟ್ಟಡಗಳಿಗೆ ಭಾಗಷಃ ಅಥವಾ ಸಂಪೂರ್ಣ ಹಾನಿಯಾಗಿದೆ’ ಎಂದು ತಿಳಿಸಿದೆ.