37ನೇ ವಯಸ್ಸಿನಲ್ಲಿ ಮಿಜೋರಂನ ರಾಜ್ಯಪಾಲರಾಗಿ ದೇಶದ ಕಿರಿಯ ರಾಜ್ಯಪಾಲ ಎಂಬ ಖ್ಯಾತಿಗೆ ಪಾತ್ರರಾಗಿದ್ದ, ಕೇಂದ್ರದ ಮಾಜಿ ಸಚಿವೆ ದಿ. ಸುಷ್ಮಾ ಸ್ವರಾಜ್ ಅವರ ಪತಿ, ಸ್ವರಾಜ್ ಕೌಶಲ್ (73) ಅವರು ಗುರುವಾರ ನಿಧನರಾದರು.
ನವದೆಹಲಿ: 37ನೇ ವಯಸ್ಸಿನಲ್ಲಿ ಮಿಜೋರಂನ ರಾಜ್ಯಪಾಲರಾಗಿ ದೇಶದ ಕಿರಿಯ ರಾಜ್ಯಪಾಲ ಎಂಬ ಖ್ಯಾತಿಗೆ ಪಾತ್ರರಾಗಿದ್ದ, ಕೇಂದ್ರದ ಮಾಜಿ ಸಚಿವೆ ದಿ. ಸುಷ್ಮಾ ಸ್ವರಾಜ್ ಅವರ ಪತಿ, ಸ್ವರಾಜ್ ಕೌಶಲ್ (73) ಅವರು ಗುರುವಾರ ನಿಧನರಾದರು. ಸ್ವರಾಜ್ ಅವರಿಗೆ ಮಧ್ಯಾಹ್ನದ ವೇಳೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ತಂದೆಯ ಅಗಲುವಿಕೆ ಬಗ್ಗೆ ಪುತ್ರಿ, ನವದೆಹಲಿ ಬಿಜೆಪಿ ಸಂಸದೆ ಬಾನ್ಸುರಿ ಸ್ವರಾಜ್ ಅವರು ಭಾವನಾತ್ಮಕ ಪೋಸ್ಟ್ ಬರೆದಿದ್ದು, ‘ಅಮ್ಮನೊಂದಿಗೆ ಮತ್ತೆ ಸೇರಿಕೊಂಡರು’ ಎಂದು ಕಂಬನಿ ಮಿಡಿದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯಾದಿಯಾಗಿ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಪಾಕ್ ಪರ ಬೇಹುಗಾರಿಕೆ: ಓರ್ವ ಸೈನಿಕ, ಮಹಿಳೆ, ಶಂಕಿತ ಉಗ್ರನ ಬಂಧನ
ನವದೆಹಲಿ: ಪಾಕಿಸ್ತಾನದ ಪರ ಸೇನೆಯ ರಹಸ್ಯ ಮಾಹಿತಿಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇರೆಗೆ ಗುಜರಾತ್‌ನ ಭಯೋತ್ಪಾದನಾ ನಿಗ್ರಹ ಪಡೆ (ಎಟಿಎಸ್) ಗುರುವಾರ ಗೋವಾದಲ್ಲಿ ಓರ್ವ ಸೈನಿಕ ಮತ್ತು ಈತನೊಂದಿಗೆ ಲಿಂಕ್ ಹೊಂದಿದ್ದ ಮಹಿಳೆಯನ್ನು ದಮನ್‌ನಲ್ಲಿ ಬಂಧಿಸಿದೆ. ಸುಬೇದಾರ್ ಎ.ಕೆ.ಸಿಂಗ್ ಬಂಧಿತ ಸೈನಿಕ ಮತ್ತು ಆತನ ಸಹಚರೆ ರಶ್ಮಣಿ ಪಾಲ್, ಸೇನೆಯ ಮಾಹಿತಿಗಳನ್ನು ರಹಸ್ಯವಾಗಿ ಕದ್ದು, ಪಾಕಿಸ್ತಾನದೊಂದಿಗೆ ಹಂಚಿಕೊಳ್ಳುತ್ತಿದ್ದರು. ಇದರ ಜಾಲ ಹುಡುಕಿದ ಎಟಿಎಸ್ ಇಬ್ಬರನ್ನು ಬಂಧಿಸಿದೆ. ಮತ್ತೊಂದು ಘಟನೆಯಲ್ಲಿ ಹರ್ಯಾಣದಲ್ಲಿ ಪಾಕ್‌ನ ಐಎಸ್‌ಐ ಪರ ಬೇಹುಗಾರಿಕೆ ಜೊತೆಗೆ ಉಗ್ರ ಕೃತ್ಯಕ್ಕೆ ಹಣ ಕೊಡುತ್ತಿದ್ದ ರಿಜ್ವಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಮಾಜಿ ಪ್ರಧಾನಿ ಜಿಯಾ ಸ್ಥಿತಿ ಗಂಭೀರ: ಬ್ರಿಟನ್, ಚೀನಿ ವೈದ್ಯರ ಚಿಕಿತ್ಸೆ
ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ (80) ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಲಂಡನ್‌ಗೆ ಕರೆದೊಯ್ಯಲು ತಯಾರಿ ಆರಂಭವಾಗಿದೆ. ಇದೇ ವೇಳೆ ಬುಧವಾರ 4 ಚೀನಿ ವೈದ್ಯರ ತಂಡ ಢಾಕಾಗೆ ಆಗಮಿಸಿದ್ದು, ಬ್ರಿಟನ್‌ನ ತಜ್ಞರೊಂದಿಗೆ ಜಿಯಾ ಅವರ ಆರೋಗ್ಯ ಸ್ಥಿತಿ ವಿಚಾರಿಸಿದೆ. ಇದೇ ವೇಳೆ ಬುಧವಾರ ಬಾಂಗ್ಲಾದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನಸ್ ಸಹ ಜಿಯಾ ಅವರನ್ನು ಭೇಟಿಯಾಗಿದ್ದರು.
ಛತ್ತೀಸ್‌ಗಢ: ಮತ್ತೆ 6 ನಕ್ಸಲರ ಶವ ಪತ್ತೆ, ಒಟ್ಟು ಸಂಖ್ಯೆ 18ಕ್ಕೆ
ಬಿಜಾಪುರ: ಇಲ್ಲಿ ಬುಧವಾರ ಭದ್ರತಾಪಡೆ ನಡೆಸಿದ ಕಾರ್ಯಾಚರಣೆ ಸ್ಥಳದಲ್ಲಿ ಮತ್ತೆ 6 ನಕ್ಸಲರ ಶವ ಪತ್ತೆಯಾಗಿದೆ. ಇದರೊಂದಿಗೆ ಬಲಿಯಾದ ನಕ್ಸಲರ ಸಂಖ್ಯೆ 18ಕ್ಕೆ ಏರಿದೆ. ಬುಧವಾರ ಬೆಳಗ್ಗೆಯಿಂದ ಸಂಜೆವರೆಗೆ 12 ಗಂಟೆಗಳ ಕಾಲ ನಡೆದ ಗುಂಡಿನ ಚಕಮಕಿಯ ಬಳಿಕ 12 ನಕ್ಸಲರ ಶವ ಪತ್ತೆಯಾಗಿತ್ತು. ಜೊತೆಗೆ ಅಪಾರ ಶಸ್ತ್ರಾಸ್ತ್ರಗಳು ವಶಪಡಿಸಿಕೊಳ್ಳಲಾಗಿತ್ತು. ಗುರುವಾರವೂ ಸಹ ಹುಡುಕಾಟ ನಡೆಯಿತು. 18 ಜನರ ಸಾವಿನಿಂದಾಗಿ ಛತ್ತೀಸ್‌ಗಢದಲ್ಲಿ ಈ ವರ್ಷ ಹತ್ಯೆಯಾದ ನಕ್ಸಲರ ಸಂಖ್ಯೆ 281ಕ್ಕೆ ಏರಿದ್ದು, 23 ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ.
ಇಡೀ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ದೇಗುಲ ಸಂಖ್ಯೆ ಕೇವಲ 37!
ಇಸ್ಲಾಮಾಬಾದ್: ಸದಾ ಅಲ್ಪಸಂಖ್ಯಾತ ವಿರೋಧಿ ನಿಲುವು ಪ್ರದರ್ಶಿಸುವ ಪಾಕಿಸ್ತಾನದಲ್ಲಿ ಪ್ರಸಕ್ತ ಕೇವಲ 37 ಅಲ್ಪಸಂಖ್ಯಾತರ ಪ್ರಾರ್ಥನಾ ಸ್ಥಳ ಮಾತ್ರ ಬಳಕೆಯಲ್ಲಿದೆ ಎಂಬ ಅಚ್ಚರಿಯ ಅಂಕಿ ಅಂಶವೊಂದು ಹೊರಬಿದ್ದಿದೆ. ಇಡೀ ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತರಿಗೆ ಸೇರಿದ 1817 ಪ್ರಾರ್ಥನಾ ಮಂದಿರಗಳ ಪೈಕಿ ಕೇವಲ 37 ಪೂಜಾ ಸ್ಥಳಗಳು ಮಾತ್ರ ಬಳಕೆಯಲ್ಲಿದೆ ಎಂದು ಅಲ್ಪಸಂಖ್ಯಾತ ಕೂಟದ ಸಂಸದೀಯ ಸಮಿತಿ ಸರ್ಕಾರಕ್ಕೆ ಮಾಹಿತಿ ನೀಡಿದೆ. 1817 ಪೂಜಾ ಸ್ಥಳಗಳ ಪೈಕಿ 1285 ಹಿಂದೂ ಪೂಜಾ ಸ್ಥಳ, 532 ಗುರುದ್ವಾರಗಳಿವೆ.
