ಸಾರಾಂಶ
ಅಮರಾವತಿ: ಆಂಧ್ರ ಪ್ರದೇಶದ ವಿಧಾನಸಭೆ ಚುನಾವಣೆಗೆ ಟಿಡಿಪಿ ಪಕ್ಷದಿಂದ ಸ್ಪರ್ಧೆ ಮಾಡಿರುವ ಡಾ.ಗೊಟ್ಟಿಪತಿ ಲಕ್ಷ್ಮೀ ಎಂಬುವರು ಚುನಾವಣೆ ಪ್ರಚಾರದ ನಡುವೆಯೂ ಗರ್ಭಿಣಿಯೊಬ್ಬರ ತುರ್ತು ಚಿಕಿತ್ಸೆ ಕಾರಣ ತಮ್ಮ ಪ್ರಚಾರವನ್ನು ಅರ್ಧಕ್ಕೆ ನಿಲ್ಲಿಸಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ತಾಯಿ ಮಗುವನ್ನು ರಕ್ಷಿಸಿದ ಘಟನೆ ಶುಕ್ರವಾರ ನಡೆದಿದೆ.
ಲಕ್ಷ್ಮೀ ಅವರ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಡಾ.ಲಕ್ಷ್ಮೀ ಆಂಧ್ರದ ದಾರ್ಸಿ ವಿಧಾನಸಭೆ ಕ್ಷೇತ್ರದ ಟಿಡಿಪಿ ಅಭ್ಯರ್ಥಿಯಾಗಿದ್ದಾರೆ. ಇವರು ಚುನಾವಣೆ ನಿಮಿತ್ತ ಶುಕ್ರವಾರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು.
ಈ ವೇಳೆ ವೆಂಕಟರಮಣ ಎಂಬ ಗರ್ಭಿಣಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬ ಮಾಹಿತಿ ಲಕ್ಷ್ಮೀ ಅವರಿಗೆ ತಿಳಿದುಬಂದಿತು. ಈ ಮಾಹಿತಿ ಪಡೆದ ಲಕ್ಷ್ಮೀ ಅವರು ಕ್ಷಣ ಹೊತ್ತು ತಡ ಮಾಡದೆ ಪ್ರಚಾರವನ್ನು ಅರ್ಧಕ್ಕೆ ನಿಲ್ಲಿಸಿ, ಆಸ್ಪತ್ರೆಗೆ ಧಾವಿಸಿ, ಶಸ್ತ್ರಚಿಕಿತ್ಸೆ ನಡೆಸಿ ಮಗುವನ್ನು ಹೊರತೆಗೆದ್ದಾರೆ. ಅದೃಷ್ಟವಶಾತ್ ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಲಕ್ಷ್ಮೀ ಅವರ ಈ ಮಾನವೀಯ ಹಾಗೂ ಕರ್ತವ್ಯ ಪ್ರಜ್ಞೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.