ಪ್ರಸ್ತಾವಿತ ಆರ್‌ಆರ್‌ಆರ್ ಯೋಜನೆಯಡಿ ನಿರ್ಮಾಣವಾಗುತ್ತಿರುವ ಗ್ರೀನ್‌ಫೀಲ್ಡ್ ರೇಡಿಯಲ್ ರಸ್ತೆಗೆ ಭಾರತದ ಹೆಮ್ಮೆಯ ಉದ್ಯಮಿ, ಟಾಟಾ ಗ್ರೂಪ್‌ನ ಮಾಜಿ ಅಧ್ಯಕ್ಷ ದಿ. ರತನ್ ಟಾಟಾ ಅವರ ಹೆಸರಿಡಲು ನಿರ್ಧರಿಸಿದ್ದಾಗಿ ತೆಲಂಗಾಣ ಸರ್ಕಾರ ಭಾನುವಾರ ಘೋಷಿಸಿದೆ.
ಹೈದರಾಬಾದ್ : ಪ್ರಸ್ತಾವಿತ ಆರ್‌ಆರ್‌ಆರ್ ಯೋಜನೆಯಡಿ ನಿರ್ಮಾಣವಾಗುತ್ತಿರುವ ಗ್ರೀನ್‌ಫೀಲ್ಡ್ ರೇಡಿಯಲ್ ರಸ್ತೆಗೆ ಭಾರತದ ಹೆಮ್ಮೆಯ ಉದ್ಯಮಿ, ಟಾಟಾ ಗ್ರೂಪ್‌ನ ಮಾಜಿ ಅಧ್ಯಕ್ಷ ದಿ. ರತನ್ ಟಾಟಾ ಅವರ ಹೆಸರಿಡಲು ನಿರ್ಧರಿಸಿದ್ದಾಗಿ ತೆಲಂಗಾಣ ಸರ್ಕಾರ ಭಾನುವಾರ ಘೋಷಿಸಿದೆ.
ಇನ್ನೊಂದು ಪ್ರಸ್ತಾವದಂತೆ, ಹೈದರಾಬಾದ್‌ನಲ್ಲಿ ಅಮೆರಿಕ ದೂತಾವಾಸ ಕಚೇರಿ ಪಕ್ಕದ ರಸ್ತೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರಿಡಲು ನಿರ್ಧರಿಸಲಾಗಿದೆ. ಜೊತೆಗೆ ಹೈದ್ರಾಬಾದ್‌ನಲ್ಲಿ ಅಮೆರಿಕ ಹೊರತುಪಡಿಸಿದ ವಿಶ್ವದ ಅತಿದೊಡ್ಡ ಗೂಗಲ್ ಕ್ಯಾಂಪಸ್ ಆರಂಭವಾಗುತ್ತಿರುವ ರಸ್ತೆಗೆ ಗೂಗಲ್ ಹೆಸರಿಡಲು ನಿರ್ಧರಿಸಲಾಗಿದೆ. ಗೂಗಲ್ ಮತ್ತು ಗೂಗಲ್ ಮ್ಯಾಪ್‌ಗಳು ಜಾಗತಿಕವಾಗಿ ಬೀರಿದ ಪರಿಣಾಮವನ್ನು ಶ್ಲಾಘಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ. ಮುಂದಿನ ದಿನಗಳಲ್ಲಿ ವಿಪ್ರೋ ಮತ್ತು ಮೈಕ್ರೋಸಾಫ್ಟ್ ಹೆಸರನ್ನೂ ಬೇರೆ ಬೇರೆ ಕಡೆ ಇಡುವ ಪ್ರಸ್ತಾವ ಇದೆ.
ಈ ಕುರಿತಾಗಿ ಶೀಘ್ರದಲ್ಲೇ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಅಮೆರಿಕ ರಾಯಭಾರ ಕಚೇರಿಗೆ ಪತ್ರ ಬರೆಯಲಿದೆ. ತೆಲಂಗಾಣವನ್ನು ನಾವೀನ್ಯತೆ-ಚಾಲಿತ ಅಭಿವೃದ್ಧಿಯ ಕೇಂದ್ರವಾಗಿರಿಸುವ ಉಪಕ್ರಮದ ಭಾಗವಾಗಿ ಈ ಪ್ರಸ್ತಾವನೆಗಳು ಬಂದಿವೆ.
ಖಾಸಗಿ ಸಂಸ್ಥೆಗಳು ನಡೆಸುವ ಆಧಾರ್ ದೃಢೀಕರಣಕ್ಕೆ ಹೊಸ ನೀತಿ
ನವದೆಹಲಿ: ಹೊಟೆಲ್‌ಗಳು, ಕಾರ್ಯಕ್ರಮ ಆಯೋಜಕರು ಮುಂತಾದವರು ಗ್ರಾಹಕರ ಆಧಾರ್ ಕಾರ್ಡ್‌ನ ಫೋಟೋಕಾಪಿ ತೆಗೆದುಕೊಂಡು ದಾಖಲಿಸಿಟ್ಟುಕೊಳ್ಳುವ ಪದ್ಧತಿಯನ್ನು ಸಂಪೂರ್ಣ ನಿಲ್ಲಿಸಲು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಶೀಘ್ರದಲ್ಲೇ ಹೊಸ ನಿಯಮ ಜಾರಿಗೊಳಿಸಲಿದೆ.ಈ ಕುರಿತು ಮಾತನಾಡಿದ ಯುಐಡಿಎಐ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಭುವನೇಶ್ ಕುಮಾರ್, ‘ಆಧಾರ್ ಕಾಯ್ದೆಯ ಪ್ರಕಾರ, ಹೊಟೆಲ್ ಮೊದಲಾದೆಡೆ ಗ್ರಾಹಕರ ಆಧಾರ್ ಕಾರ್ಡ್ ಪಡೆದುಕೊಳ್ಳುವುದು ಕಾನೂನುಬಾಹಿರ. ಇದನ್ನು ತಪ್ಪಿಸಲು ಹೊಸ ತಂತ್ರಜ್ಞಾನವನ್ನು ಜಾರಿಗೊಳಿಸುತ್ತಿದ್ದೇವೆ. ಇದರಿಂದ ಕ್ಯೂಆರ್ ಕೋಡ್ ಸ್ಕ್ಯಾನ್ ಅಥವಾ ಆಧಾರ್ ಆ್ಯಪ್‌ನ ಮೂಲಕ ಗ್ರಾಹಕರ ಗುರುತು ಪರಿಶೀಲನೆ ಸಾಧ್ಯವಾಗಲಿದೆ. ಕಾಗದರಹಿತ ಪರಿಶೀಲನೆಯಿಂದ ಗ್ರಾಹಕರ ಖಾಸಗಿತನವೂ ಉಳಿಯುತ್ತದೆ, ಆಧಾರ್ ಮಾಹಿತಿ ಸೋರಿಕೆಯಾಗುವ ಅಪಾಯವೂ ಇಲ್ಲ’ ಎಂದರು.
ಹೊಸ ನಿಯಮದ ಮುಖ್ಯ ಅಂಶಗಳು:
ಹೊಟೇಲ್, ಈವೆಂಟ್ ಆಯೋಜಕರು ಇತ್ಯಾದಿ ಸಂಸ್ಥೆಗಳು ಆಧಾರ್ ಮೂಲಕ ಗುರುತು ಪರಿಶೀಲನೆ ಮಾಡಬೇಕಾದರೆ ಕಡ್ಡಾಯವಾಗಿ ಯುಐಡಿಎಐನಲ್ಲಿ ನೋಂದಾಯಿಸಿಕೊಳ್ಳಬೇಕು. ನೋಂದಣಿಯಾದ ಸಂಸ್ಥೆಗಳಿಗೆ ಹೊಸ ತಂತ್ರಜ್ಞಾನ (ಎಪಿಐ) ಸಿಗಲಿದೆ. ಗ್ರಾಹಕರ ಆಧಾರ್‌ನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಅಥವಾ ಹೊಸ ಆಧಾರ್ ಆ್ಯಪ್ ಮೂಲಕ ಪರಿಶೀಲನೆ ಮಾಡಬಹುದು. ಕಾಗದ ಬಳಸುವ ಅಗತ್ಯವಿಲ್ಲ. ಈ ಹೊಸ ಆ್ಯಪ್ ಆಫ್‌ಲೈನ್‌ನಲ್ಲೂ ಕೆಲಸ ಮಾಡಲಿದೆ. ಸರ್ವರ್ ಡೌನ್ ಆದರೂ ಪರಿಶೀಲನೆಗೆ ತೊಂದರೆ ಆಗುವುದಿಲ್ಲ. ವಿಮಾನ ನಿಲ್ದಾಣಗಳಂತಹ ಸ್ಥಳಗಳಲ್ಲೂ ಈ ವ್ಯವಸ್ಥೆ ಉಪಯುಕ್ತ.