ಸಾರಾಂಶ
ವಿಶ್ವದ ನಂ.1 ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಒಡೆತನದ ವಿಶ್ವವಿಖ್ಯಾತ ಎಲೆಕ್ಟ್ರಿಕ್ ಕಾರು ಕಂಪನಿಯಾದ ಟೆಸ್ಲಾ ಸಂಸ್ಥೆಯು ಭಾರತದಲ್ಲಿ ಅಧಿಕೃತವಾಗಿ ತನ್ನ ಕಾರ್ಯಾಚರಣೆಯನ್ನು ಮಂಗಳವಾರದಿಂದ ಆರಂಭಿಸಿದೆ.
ಮುಂಬೈ: ವಿಶ್ವದ ನಂ.1 ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಒಡೆತನದ ವಿಶ್ವವಿಖ್ಯಾತ ಎಲೆಕ್ಟ್ರಿಕ್ ಕಾರು ಕಂಪನಿಯಾದ ಟೆಸ್ಲಾ ಸಂಸ್ಥೆಯು ಭಾರತದಲ್ಲಿ ಅಧಿಕೃತವಾಗಿ ತನ್ನ ಕಾರ್ಯಾಚರಣೆಯನ್ನು ಮಂಗಳವಾರದಿಂದ ಆರಂಭಿಸಿದೆ. ಸಂಸ್ಥೆಯ ಮೊದಲ ಎಕ್ಸ್‌ಪೀರಿಯನ್ಸ್ ಕೇಂದ್ರಕ್ಕೆ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನ ಮೇಕರ್ ಮ್ಯಾಕ್ಸಿಟಿ ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಚಾಲನೆ ನೀಡಿದರು.
ಟೆಸ್ಲಾ ತನ್ನ ವೈ ಮಾದರಿಯ ಇ-ಕಾರುಗಳನ್ನು ಭಾರತದಲ್ಲಿ ಮೊದಲಿಗೆ ಬಿಡುಗಡೆ ಮಾಡಲಿದ್ದು, ಇದು ಡೈಮಂಡ್ ಬ್ಲ್ಯಾಕ್, ಗ್ಲೇಸಿಯರ್ ಬ್ಲೂ, ಅಲ್ಟ್ರಾ ರೆಡ್ ಸೇರಿ ಆರು ಬಣ್ಣಗಳಲ್ಲಿ ಲಭ್ಯವಿರಲಿದೆ. ಭಾರತದಲ್ಲಿ ಆನ್‌ರೋಡ್ ಬೆಲೆ 61 ಲಕ್ಷ ರು. ಎಂದು ಹೇಳಲಾಗಿದೆ. ಒಮ್ಮೆ ಚಾರ್ಜ್ ಮಾಡಿದರೆ 500 ಕಿ.ಮೀ. ಸಂಚರಿಸಬಲ್ಲ ಈ ಕಾರಿನ ಡೆಲಿವರಿ ಈ ವರ್ಷದ 3ನೇ ತ್ರೈಮಾಸಿಕದಿಂದ ಆರಂಭವಾಗಲಿದೆ. ಈ ಕಾರನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ ಎನ್ನಲಾಗಿದೆ.
ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ವೈ ಮಾದರಿಯ ಟೆಸ್ಲಾ ಕಾರು ಭಾರತದಲ್ಲೇ ದುಬಾರಿಯಾಗಿದೆ. ಅಮೆರಿಕದಲ್ಲಿ 37 ಲಕ್ಷ ರು. ಹಾಗೂ ಚೀನಾದಲ್ಲಿ 39 ಲಕ್ಷ ರು. ಬೆಲೆ ಈ ಕಾರಿಗೆ ಇದೆ. ಆದರೆ ಭಾರತದಲ್ಲಿ ತೆರಿಗೆ ಅಧಿಕವಾಗಿರುವ ಕಾರನ ತೆರಿಗೆ ಸೇರಿ ಇದರ ಬೆಲೆ 61 ಲಕ್ಷ ರು. ಆಗಿದೆ.
ಸಂಶೋಧನಾ ಕೇಂದ್ರ ತೆರೆವ ವಿಶ್ವಾಸ:
ಟೆಸ್ಲಾ ಎಕ್ಸ್‌ಪೀರಿಯನ್ಸ್ ಸೆಂಟರ್ ಉದ್ಘಾಟನೆ ಬಳಿಕ ಮಾತನಾಡಿದ ಮುಖ್ಯಮಂತ್ರಿ ಫಡ್ನವೀಸ್, ಟೆಸ್ಲಾ ಕಂಪನಿ ತನ್ನ ಸಂಶೋಧನೆ, ಅಭಿವೃದ್ಧಿ ಹಾಗೂ ಉತ್ಪಾದನಾ ಘಟಕವನ್ನು ಭಾರತದಲ್ಲಿ ತೆರೆಯಬೇಕು. ಸಂಸ್ಥೆ ಈ ಕುರಿತು ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂಬ ವಿಶ್ವಾಸವಿದೆ. ಭಾರತದಲ್ಲಿನ ಟೆಸ್ಲಾ ಪಯಣದ ಸಹಯೋಗಿ ರಾಷ್ಟ್ರವನ್ನಾಗಿ ಮಹಾರಾಷ್ಟ್ರವನ್ನು ಪರಿಗಣಿಸುವಂತೆ ಇದೇ ವೇಳೆ ಆಹ್ವಾನ ನೀಡಿದರು.
ಟೆಸ್ಲಾ ಸಂಸ್ಥೆ ತನ್ನ ಮೊದಲ ಎಕ್ಸ್‌ಪೀರಿಯನ್ಸ್ ಕೇಂದ್ರವನ್ನು ಮಹಾರಾಷ್ಟ್ರದಲ್ಲಿ ಆರಂಭಿಸುತ್ತಿರುವುದು ರಾಜ್ಯ ಮತ್ತು ನಗರದ ಮೇಲೆ ಸಂಸ್ಥೆಗಿರುವ ವಿಶ್ವಾಸ ತೋರಿಸುತ್ತದೆ ಎಂದರು.