ಸಾರಾಂಶ
ಭಾರತ ನಡೆಸಿದ ‘ಆಪರೇಷನ್ ಸಿಂದೂರ’ದಿಂದ ಕಂಗೆಟ್ಟು ಹತಾಶವಾಗಿ ಪ್ರತಿದಾಳಿ ನಡೆಸುತ್ತಿರುವ ಪಾಕಿಸ್ತಾನ ಶುಕ್ರವಾರ ರಾತ್ರಿ ಕೂಡ ಡ್ರೋನ್ ಕಾಶ್ಮೀರದಿಂದ ಗುಜರಾತ್‌ವರೆಗೆ 4 ರಾಜ್ಯಗಳಲ್ಲಿ ದಾಳಿ ಮುಂದುವರಿಸಿದೆ
ನವದೆಹಲಿ : ಭಾರತ ನಡೆಸಿದ ‘ಆಪರೇಷನ್ ಸಿಂದೂರ’ದಿಂದ ಕಂಗೆಟ್ಟು ಹತಾಶವಾಗಿ ಪ್ರತಿದಾಳಿ ನಡೆಸುತ್ತಿರುವ ಪಾಕಿಸ್ತಾನ ಶುಕ್ರವಾರ ರಾತ್ರಿ ಕೂಡ ಡ್ರೋನ್ ಕಾಶ್ಮೀರದಿಂದ ಗುಜರಾತ್‌ವರೆಗೆ 4 ರಾಜ್ಯಗಳಲ್ಲಿ ದಾಳಿ ಮುಂದುವರಿಸಿದೆ. ಇದರ ಪರಿಣಾಮ ಜಮ್ಮು-ಕಾಶ್ಮೀರ, ರಾಜಸ್ಥಾನ, ಗುಜರಾತ್ ಹಾಗೂ ಪಂಜಾಬ್‌ನ ಸುಮಾರು 26ಕ್ಕೂ ಹೆಚ್ಚು ಸ್ಥಳಗಳು ದಾಳಿಗೀಡಾಗಿವೆ. ಈ ಭಾಗಗಳಲ್ಲಿ ಕತ್ತಲು ಆವರಿಸಿದ್ದು, ಸೈರನ್ ಹಾಗೂ ಸ್ಫೋಟದ ಶಬ್ದಗಳು ಮಾರ್ದನಿಸಿವೆ.
ವಿಶೇಷವಾಗಿ ಶ್ರೀನಗರ ಏರ್‌ಪೋರ್ಟ್ ಹಾಗೂ ಕಾಶ್ಮೀರದ ಅವಂತಿಪೋರಾ ವಾಯುನೆಲೆ ಮೇಲೂ ದಾಳಿ ಯತ್ನ ನಡೆದಿದೆ.
ಆದರೆ, ಬರಾಕ್-8, ಎಸ್-400 ಹಾಗೂ ಆಕಾಶ್ ವಾಯುರಕ್ಷಣಾ ವ್ಯವಸ್ಥೆ ಬಳಸಿ ಡ್ರೋನ್‌ಗಳನ್ನು ಬಹುತೇಕ ನಿಷ್ಕ್ರಿಯಗೊಳಿಸಲಾಗಿದೆ. ಆದರೆ ಪಂಜಾಬ್‌ನ ಫಿರೋಜ್‌ಪುರದಲ್ಲಿ ಮನೆಯೊಂದರ ಮೇಲೆ ಡ್ರೋನ್ ಬಿದ್ದಿದ್ದು, ಮನೆ ಹಾಗೂ ಕಾರುಗಳು ಬೆಂಕಿಗೆ ಆಹುತಿಯಾಗಿವೆ ಹಾಗೂ 3 ಮಂದಿ ಗಾಯಗೊಂಡಿದ್ದಾರೆ. ಹಾಲಿ ಭಾರತ-ಪಾಕ್ ಸಮರ ಆರಂಭಗೊಂಡ ಬಳಿಕ ಪಾಕ್ ನಡೆಸಿದ ಡ್ರೋನ್ ದಾಳಿಯಲ್ಲಿ ಗಾಯದ ಘಟನೆ ಸಂಭವಿಸುತ್ತಿರುವುದು ಇದೇ ಮೊದಲು. ಮನೆಗೆ ಹಾಗೂ ಕಾರಿಗೆ ಬೆಂಕಿ ಹೊತ್ತಿ ಧಗಧಗಿಸುವ ದೃಶ್ಯಗಳ ವಿಡಿಯೋಗಳು ವೈರಲ್ ಆಗಿವೆ.
ಪಾಕಿಸ್ತಾನ ಗುರುವಾರ 400 ಡ್ರೋನ್ ಬಳಸಿ ಭಾರತದ 36 ಸ್ಥಳಗಳ ಮೇಲೆ ದಾಳಿ ಮಾಡಿತ್ತು. ಶುಕ್ರವಾರ 26 ಸ್ಥಳ ಆಗಿರುವ ಕಾರಣ ಡ್ರೋನ್ ಸಂಖ್ಯೆ ಇನ್ನೂ ಹೆಚ್ಚಿರಬಹುದು ಎಂದು ಅಂದಾಜಿಸಲಾಗಿದೆ.
26 ಊರಿನ ಮೇಲೆ ಡ್ರೋನ್, ಹಲವೆಡೆ ಸ್ಫೋಟ:
ಜಮ್ಮು-ಕಾಶ್ಮೀರದ ಜಮ್ಮು, ನಗ್ರೋಟಾ, ಶ್ರೀನಗರ, ಅವಂತಿಪೋರಾ, ರಜೌರಿ, ಸಾಂಬಾ. ಪೂಂಛ್, ಬಾರಾಮುಲ್ಲಾ, ಕುಪ್ವಾರಾ, ರಾಜಸ್ಥಾನದ ಪೋಖ್ರಣ್, ಶ್ರೀಗಂಗಾನಗರ, ಬಾಢ್ಮೇರ್, ಉತ್ತರಲೈ, ಫಲೋಡಿ, ಜೈಸಲ್ಮೇರ್, ಪಂಜಾಬ್‌ನ ಪಠಾಣ್‌ಕೋಟ್, ಅಮೃತಸರ, ಕಪೂರ್ತಲಾ, ಜಲಂಧರ್, ಲುಧಿಯಾನಾ, ಆದಂಪುರ, ಚಂಡೀಗಢ, ನಾಲ್ ಹಾಗೂ ಫಿರೋಜ್‌ಪುರ ಮತ್ತು ಗುಜರಾತ್‌ನ ಭುಜ್ ಮೇಲೆ ರಾತ್ರಿ 8ರ ಸುಮಾರಿಗೆ ಡ್ರೋನ್ ದಾಳಿಗೆ ಯತ್ನ ನಡೆದಿದೆ.
ಇದೇ ವೇಳೆ, ಜಮ್ಮು, ಶ್ರೀನಗರ, ಪೂಂಛ್, ಬಾಢ್ಮೇರ್, ಅವಂತಿಪೋರಾ ವಾಯುನೆಲೆ ಮತ್ತು ಪೋಖ್ರಣ್‌ಗಳಲ್ಲಿ ಸ್ಫೋಟಗಳ ಶಬ್ದ ಕೇಳಿಬಂದಿದೆ.
ಶ್ರೀನಗರ ಏರ್‌ಪೋರ್ಟ್ ಹಾಗೂ ಅವಂತಿಪೋರಾ ವಾಯುನೆಲೆಗಳ ಮೇಲೆ ಡ್ರೋನ್ ದಾಳಿಗೆ ಯತ್ನ ನಡೆದಿದೆ. ಈ ವೇಳೆ ಹಾರಿ ಬಂದ 8 ಡ್ರೋನ್‌ಗಳನ್ನು ವಾಯುರಕ್ಷಣಾ ವ್ಯವಸ್ಥೆ ಬಳಸಿ ಆಗಸದಲ್ಲೇ ನಿಷ್ಕ್ರಿಯಗೊಳಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಡ್ರೋನ್ ದಾಳಿ ಬೆನ್ನಲ್ಲೇ ಜಮ್ಮು, ಶ್ರೀನಗರ ಮತ್ತು ರಾಜಸ್ಥಾನದ ಉತ್ತರ ಭಾಗದ ಶ್ರೀಗಂಗಾನಗರದ ಎಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಂಡಿತು. ಶ್ರೀನಗರದಲ್ಲಿ ಮೌಲ್ವಿಗಳು ಮಸೀದಿಗಳ ಮೈಕ್ ಬಳಸಿ ‘ವಿದ್ಯುತ್ತನ್ನು ಸ್ವಯಂಪ್ರೇರಿತರಾಗಿ ಆರಿಸಿ’ ಎಂದು ಜನರಲ್ಲಿ ಕೇಳಿಕೊಂಡರು. ಆದರೆ ಮಧ್ಯರಾತ್ರಿ ವೇಳೆ ದಾಳಿ ನಿಯಂತ್ರಣಕ್ಕೆ ಬಂದ ಬಳಿಕ ವಿದ್ಯುತ್ ಸಂಪರ್ಕ ಸಹಜ ಸ್ಥಿತಿಗೆ ಮರಳಿದೆ.
ಸ್ಫೋಟದ ಶಬ್ದ ಕೇಳುತ್ತಿದೆ- ಸಿಎಂ ಆತಂಕ:
ಈ ನಡುವೆ, ಮೊನ್ನೆಯ ದಾಳಿಯ ಸಂತ್ರಸ್ತರನ್ನು ಭೇಟಿಯಾಗಲು ಜಮ್ಮುವಿನಲ್ಲಿ ತಂಗಿದ್ದ ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಈ ಬಗ್ಗೆ ಟ್ವೀಟ್ ಮಾಡಿ ‘ಜಮ್ಮುವಿನಲ್ಲಿ ಈಗ ಬ್ಲ್ಯಾಕೌಟ್ ಆಗಿದೆ. ನಗರದಾದ್ಯಂತ ಸೈರನ್‌ಗಳು ಕೇಳಿಬರುತ್ತಿವೆ. ಸ್ಫೋಟದ ಶಬ್ದ, ಗುಂಡಿನ ಶಬ್ದಗಳು ಈಗ ನಾನು ಇರುವ ಸ್ಥಳದಿಂದ ಕೇಳಿಬರುತ್ತಿದೆ’ ಎಂದು ಹೇಳಿದ್ದಾರೆ.
ಇದಲ್ಲದೆ, ‘ಜಮ್ಮು ಮತ್ತು ಸುತ್ತಮುತ್ತಲಿನ ಎಲ್ಲರಿಗೂ ನನ್ನ ಪ್ರಾಮಾಣಿಕ ಮನವಿ ಎಂದರೆ ದಯವಿಟ್ಟು ಬೀದಿಗಿಳಿಯಬೇಡಿ, ಮನೆಯಲ್ಲಿಯೇ ಇರಿ ಅಥವಾ ಮುಂದಿನ ಕೆಲವು ಗಂಟೆಗಳ ಕಾಲ ನೀವು ಇರುವ ಸ್ಥಳದಲ್ಲೇ ಇರಿ. ವದಂತಿಗಳನ್ನು ನಿರ್ಲಕ್ಷಿಸಿ’ ಎಂದೂ ಕೇಳಿಕೊಂಡಿದ್ದಾರೆ.
ಈ ನಡುವೆ, ಜಮ್ಮು ಸ್ಥಳೀಯ ನಿವಾಸಿಗಳು ಮಾತನಾಡಿ, ‘ರಾತ್ರಿ 8 ಗಂಟೆಯ ನಂತರ ವಿದ್ಯುತ್ ಕಡಿತಗೊಳಿಸಲಾಗಿದೆ. ಆತಂಕದ ಸ್ಥಿತಿ ಇದೆ’ ಎಂದು ಹೇಳಿದ್ದಾರೆ.
ಪಾಕ್ ವಿರುದ್ಧ ಕಠಿಣ ಕ್ರಮಕ್ಕೆ ರಾಜನಾಥ್ ಖಡಕ್ ಸೂಚನೆ
ನವದೆಹಲಿ: ಸತತ 3 ದಿನ ಡ್ರೋನ್ ದಾಳಿಗಳ ಮೂಲಕ ಭಾರತದ ಜನವಸತಿ ಪ್ರದೇಶಗಳಲ್ಲಿನ ಅಮಾಯಕ ನಾಗರಿಕನ್ನು ಗುರಿಯಾಗಿಸಿಕೊಂಡಿರುವ ಪಾಕಿಸ್ತಾನ ಸೇನೆಯ ವಿರುದ್ಧ ಕಠಿಣ ಹಾಗೂ ಬಲವಾದ ಕ್ರಮ ಕೈಗೊಳ್ಳುವಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾರತೀಯ ಸೇನೆಗೆ ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಶುಕ್ರವಾರ ಅವರು ಸೇನೆಯ ಮೂರು ವಿಭಾಗಗಳ ಮುಖ್ಯಸ್ಥರು ಮತ್ತು ಸಶಸ್ತ್ರ ಪಡೆಗಳ ಮುಖ್ಯಸ್ಥರ ಜೊತೆ ಸಭೆಯಲ್ಲಿ ಈ ಸೂಚನೆ ನೀಡಿದ್ದಾರೆ.