ಸಾರಾಂಶ
ನವದೆಹಲಿ: ಭಾರತದ ಮುಕುಟದಂತಿರುವ ಪ್ರಾಕೃತಿಕ ಸೌಂದರ್ಯದ ಗಣಿ ಕಾಶ್ಮೀರದಲ್ಲಿ ಇದೀಗ ಸೂತಕದ ಛಾಯೆ ಆವರಿಸಿದೆ. ಕಳೆದ ಕೆಲ ವರ್ಷಗಳಿಂದ ಭಾರೀ ಪ್ರಮಾಣದಲ್ಲಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದ ತಾಣಗಳು ಕಳೆದ 2 ದಿನಗಳಿಂದ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿವೆ.
ಏ.22ರಂದು ಕೆಲವೇ ನಿಮಿಷಗಳಲ್ಲಿ ನಡೆದ ಭೀಕರ ಉಗ್ರದಾಳಿಯಿಂದಾಗಿ, ಕೇವಲ ಎರಡು ದಿನಗಳಲ್ಲಿ ಕಾಶ್ಮೀರದ ಚಿತ್ರಣ ಸಂಪೂರ್ಣವಾಗಿ ಬದಲಾಗಿದೆ. ಅದರಲ್ಲೂ, ಮಿನಿ ಸ್ವಿಜರ್ಲೆಂಡ್ ಎಂದೇ ಖ್ಯಾತವಾಗಿದ್ದ ಪಹಲ್ಗಾಂ ಕಣಿವೆಯಲ್ಲಿ ಸ್ಮಶಾನ ಮೌನ ಆವರಿಸಿದೆ. ದಾಲ್ ಸರೋವರದ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ.
ಪ್ರವಾಸಿಗರನ್ನು ಹೊತ್ತೊಯ್ಯಬೇಕಿದ್ದ ವಿಮಾನಗಳು ಖಾಲಿಯಾಗಿ ಹಾರುತ್ತಿದ್ದು, ಮರಳುವಾಗ ಜೀವಭಯದಿಂದ ಕಾಶ್ಮೀರ ತೊರೆಯುತ್ತಿರುವ ಕುಟುಂಬಗಳನ್ನು ಹೊತ್ತುಬರುತ್ತಿವೆ. ಅನುದಿನ ಅಜಾನ್ ಮೊಳಗುತ್ತಿದ್ದ ಮಸೀದಿಗಳ ಧ್ವನಿವರ್ದಕಗಳಲ್ಲಿ ಬಂದ್‌ಗೆ ಕರೆ ಕೊಡುತ್ತಿವೆ.
ಜನರು, ವರ್ತಕರು, ಪ್ರವಾಸಿಗರಿಂದ ಗಿಜಿಗುಡುತ್ತಿದ್ದ ರಸ್ತೆಗಳಲ್ಲಿ ಖಾಲಿತನ ಆವರಿಸಿದೆ. ಜನರ ಓಡಾಟ ಕಂಡರೂ, ಅದು ಉಗ್ರದಾಳಿ ಖಂಡಿಸಿ, ‘ಹಿಂದೂಸ್ತಾನ್ ಜಿಂದಾಬಾದ್’ ಘೋಷಣೆಯೊಂದಿಗೆ, ಉಗ್ರರ ಸೆದೆಬಡಿವ ಆಗ್ರಹದೊಂದಿಗೆ ನಡೆಯುತ್ತಿರುವ ಪ್ರತಿಭಟನೆಯಾಗಿದೆ.
ಪ್ರವಾಸಿಗರನ್ನೇ ನಂಬಿಕೊಂಡಿದ್ದ ಕಾಶ್ಮೀರದ ಆರ್ಥಿಕತೆಗೆ ದೊಡ್ಡ ಹೊಡೆತ ಬಿದ್ದಿದೆ. ಈ ಬಗ್ಗೆ ಮಾತನಾಡಿರುವ ಪದ್ಮಶ್ರೀ ವಿಜೇತ ಕುಶಲಕರ್ಮಿ ಗುಲಾಂ ರಸೂಲ್ ಖಾನ್, ‘ಇಲ್ಲಿನ ವಾತಾವರಣವನ್ನು ಕೆಡಿಸುತ್ತಿರುವವರನ್ನು ಭದ್ರತಾ ಸಂಸ್ಥೆಗಳು ಪತ್ತೆಹಚ್ಚಬೇಕು. ಇಲ್ಲಿನ ಜನ ಪ್ರವಾಸೋದ್ಯಮದ ಮೇಲೆಯೇ ಅವಲಂಬಿತರಾಗಿದ್ದಾರೆ’ ಎಂದು ದುಃಖದಿಂದ ನುಡಿದಿದ್ದಾರೆ.