ಸಾರಾಂಶ
ಭಾರತದ ಚುನಾವಣೆ ಸುಧಾರಣೆಗಾಗಿ 180 ಕೋಟಿ ರು. ನೀಡಿದ್ದ ಯುಎಸ್ ಏಡ್ ನಿಧಿಯ ಕುರಿತು ಟ್ರಂಪ್ ಮತ್ತೊಮ್ಮೆ ಕಿಡಿಕಾರಿದ್ದಾರೆ. ‘ನಮ್ಮ ವಸ್ತುಗಳಿಗೆ ಶೇ.200 ತೆರಿಗೆ ಹಾಕುವವರಿಗೆ ಅಷ್ಟು ಹಣ ಯಾಕೆ ಕೊಡಬೇಕು? ಅವರು ನಮ್ಮನ್ನು ಚೆನ್ನಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.
ವಾಷಿಂಗ್ಟನ್ : ಭಾರತದ ಚುನಾವಣೆ ಸುಧಾರಣೆಗಾಗಿ 180 ಕೋಟಿ ರು. ನೀಡಿದ್ದ ಯುಎಸ್ ಏಡ್ ನಿಧಿಯ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಕಿಡಿಕಾರಿದ್ದಾರೆ. ‘ನಮ್ಮ ವಸ್ತುಗಳಿಗೆ ಶೇ.200 ತೆರಿಗೆ ಹಾಕುವವರಿಗೆ ಅಷ್ಟು ಹಣ ಯಾಕೆ ಕೊಡಬೇಕು? ಅವರು ನಮ್ಮನ್ನು ಚೆನ್ನಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.
ಕನ್ಸರ್ವೇಟಿವ್ ಪೊಲಿಟಿಕಲ್ ಆ್ಯಕ್ಷನ್ ಕಾನ್ಫರೆನ್ಸ್ (ಸಿಪಿಎಸಿ)ಯಲ್ಲಿ ಮಾತನಾಡಿದ ಅವರು, ‘ಭಾರತದ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಅಮೆರಿಕದ ಹಿಂದಿನ ಅಧ್ಯಕ್ಷ ಬೈಡನ್ ಅಧಿಕಾರಾವಧಿಯಲ್ಲಿ 180 ಕೋಟಿ ರು. ನೀಡಲಾಗಿದೆ. ನಾವು ಹಳೆಯ ಬ್ಯಾಲೆಟ್ ಪೇಪರ್ ಬಳಸಿಕೊಂಡು, ಅವರ ಚುನಾವಣೆ ಸುಧಾರಣೆಗೆ ನೆರವು ನೀಡುವುದು ಸರಿಯೇ?’ ಎಂದರು.
‘ಅವರಿಗೆ ನಮ್ಮ ಹಣಬೇಕಿಲ್ಲ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ತೆರಿಗೆ ಹಾಕುವ ದೇಶಗಳಲ್ಲೊಂದಾಗಿದೆ. ನಾವೇನಾದರೂ ನಮ್ಮ ವಸ್ತುಗಳನ್ನು ಮಾರಾಟ ಮಾಡಲು ಹೋದರೆ ಅದರ ಮೇಲೆ ಅವರು ಶೇ.200ರಷ್ಟು ತೆರಿಗೆ ಹಾಕುತ್ತಾರೆ. ಆದರೂ ಅವರ ಚುನಾವಣೆಗೆ ನಾವು ಸಾಕಷ್ಟು ಹಣದ ನೆರವು ಕೊಡುತ್ತಿದ್ದೇವೆ’ ಎಂದು ಕಿಡಿಕಾರಿದರು.
ಬಾಂಗ್ಲಾ ವಿರುದ್ಧವೂ ಕಿಡಿ:
ಇದೇ ವೇಳೆ ಬಾಂಗ್ಲಾದೇಶ ವಿರುದ್ಧವೂ ಕಿಡಿಕಾರಿದ ಅವರು, ನಾವು 251 ಕೋಟಿ ರು.ಅನ್ನು ಬಾಂಗ್ಲಾದೇಶದ ರಾಜಕೀಯ ಸುಧಾರಣೆಗೆ ನೀಡಿದ್ದೇವೆ, ಈ ಮೂಲಕ ಅವರು ಮೂಲಭೂತವಾದಿ ಎಡಪಂಥೀಯರಿಗೆ ಮತಹಾಕಲು ಅನುಕೂಲ ಮಾಡಿಕೊಟ್ಟಿದ್ದೇವೆ ಎಂದರು.
ಮೋದಿ ಸ್ಪಷ್ಟನೆಗೆ ಕಾಂಗ್ರಸ್ ಆಗ್ರಹ:
ಪ್ರಧಾನಿ ನರೇಂದ್ರ ಮೋದಿ ಅವರಿಗೆ 180 ಕೋಟಿ ರು. ಚುನಾವಣಾ ಅನುದಾನವನ್ನು ಅಮೆರಿಕ ನೀಡಿತ್ತು ಎಂಬ ಟ್ರಂಪ್ ಶನಿವಾರದ ಹೇಳಿಕೆ ಬಗ್ಗೆ ಮೋದಿ ಹಾಗೂ ಕೇಂದ್ರ ಸರ್ಕಾರ ಮೌನ ಮುರಿದು ಸ್ಪಷ್ಟನೆ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಚುನಾವಣೆಗೆ ಇಲ್ಲ, ಬದಲಾಗಿ 7 ಯೋಜನೆಗೆ ಅಮೆರಿಕದಿಂದ ಹಣ
ನವದೆಹಲಿ: ಭಾರತದಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕೆ 180 ಕೋಟಿ ನೆರವು ನೀಡಲಾಗಿದೆ ಎಂಬ ಆರೋಪದ ನಡುವೆಯೇ 2024ನೇ ಸಾಲಿನಲ್ಲಿ ಬಿಡುಗಡೆಯಾದ ಯುಎಸ್‌ಏಡ್‌ಗೆ ಸಂಬಂಧಿಸಿದ ಹಣಕಾಸು ಸಚಿವಾಲಯದ ವಾರ್ಷಿಕ ವರದಿಯಲ್ಲಿ ಮಾತ್ರ ಅದರ ಯಾವುದೇ ಪ್ರಸ್ತಾಪ ಇಲ್ಲ.ಬದಲಾಗಿ ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಯುಎಸ್‌ಏಡ್‌ನಡಿ 6,498 ಕೋಟಿ ರು. ವೆಚ್ಚದ 7 ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಸಚಿವಾಲಯದ 2023-24ನೇ ಸಾಲಿನ ವಾರ್ಷಿಕ ವರದಿಯಲ್ಲಿ ಹೇಳಲಾಗಿದೆ.
2023-24ನೇ ಹಣಕಾಸು ವರ್ಷದಲ್ಲಿ 7 ಯೋಜನೆಗಳಿಗೆ ಯುಎಸ್‌ಏಡ್‌ನಿಂದ 825 ಕೋಟಿ ರು. ನೆರವು ಹರಿದುಬಂದಿದೆ. ಆ ಹಣಕಾಸು ವರ್ಷದಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕೆ ಸಂಬಂಧಿಸಿ ಯಾವುದೇ ಹಣ ನೀಡಿಲ್ಲ. ಆದರೆ ಕೃಷಿ ಮತ್ತು ಆಹಾರ ಭದ್ರತೆ ಕಾರ್ಯಕ್ರಮಗಳು, ನೀರು, ನೈರ್ಮಲ್ಯ ಮತ್ತು ಶುಚಿತ್ವ, ನವೀಕರಿಸಬಹುದಾದ ಇಂಧನ ಮತ್ತು ವಿಪತ್ತು ನಿರ್ವಹಣೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಯೋಜನೆಗಳಿಗೆ ಹಣ ಒದಗಿಸಲಾಗಿದೆ.ಇದರ ಜತೆಗೆ ಸುಸ್ಥಿರ ಅರಣ್ಯ ಹಾಗೂ ಕ್ಲೈಮ್ಯಾಟ್ ಅಡಾಪ್ಟೇಷನ್ ಪ್ರೋಗ್ರಾಂ, ಇಂಧನ ಕಾರ್ಯಕ್ಷಮತೆ ತಂತ್ರಜ್ಞಾನ ವಾಣಿಜ್ಯೀಕರಣ ಮತ್ತು ಆವಿಷ್ಕಾರ ಯೋಜನೆಗಳಿಗೆ ಸಂಬಂಧಿಸಿಯೂ ಹಣ ಒದಗಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
;Resize=(690,390))
)
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))