ಹೊಸ ಅಪರಾಧ ಕಾನೂನು ಬಗ್ಗೆ ವಿವಿಗಳಿಂದ ಜಾಗೃತಿ

| Published : Feb 21 2024, 02:03 AM IST / Updated: Feb 21 2024, 08:57 AM IST

ಸಾರಾಂಶ

ಕಾಯ್ದೆಗಳ ಬಗ್ಗೆ ಇರುವ ಮಿಥ್ಯೆ ನಿವಾರಣೆ ಮಾಡುವ ಕೆಲಸವನ್ನು ವಿಶ್ವವಿದ್ಯಾನಿಲಯಗಳು ಮಾಡಬೇಕೆಂದು ವಿರ್ಶವವಿದ್ಯಾನಿಲಯ ಧನಸಹಾಯ ಆಯೋಗ ತಿಳಿಸಿದೆ.

ಪಿಟಿಐ ನವದೆಹಲಿ

ಐಪಿಸಿ, ಸಿಆರ್‌ಪಿಸಿ ಹಾಗೂ ಸಾಕ್ಷ್ಯ ಕಾಯ್ದೆಗೆ ಬದಲಾಗಿ ಅಂಗೀಕರಿಸಲಾಗಿರುವ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, ಭಾರತೀಯ ಸಾಕ್ಷ್ಯ ಸಂಹಿತೆ ಕುರಿತು ಜಾಗೃತಿ ಮೂಡಿಸುವಂತೆ ವಿಶ್ವವಿದ್ಯಾಲಯಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಸೂಚನೆ ನೀಡಿದೆ.

ಹೊಸ ಶಾಸನಗಳ ಕುರಿತು ಸಾಕಷ್ಟು ಮಿಥ್ಯೆಗಳು ಹರಡಿದ್ದು, ಅದನ್ನು ನಿವಾರಿಸಬೇಕು ಎಂದು ನಿರ್ದೇಶನ ನೀಡಲಾಗಿದೆ. ‘ನೂತನ ಕಾಯ್ದೆಗಳಿಂದ ವೈಯಕ್ತಿಕ ಸ್ವಾತಂತ್ರ್ಯ ಹರಣವಾಗುತ್ತದೆ, ಪೊಲೀಸ್‌ ರಾಜ್ಯ ಸ್ಥಾಪನೆಯ ಉದ್ದೇಶವನ್ನು ಹೊಸ ಶಾಸನಗಳು ಹೊಂದಿವೆ. 

ದೇಶದ್ರೋಹ ಕಾಯ್ದೆಯನ್ನು ಉಳಿಸಿಕೊಳ್ಳಲಾಗಿದೆ, ಪೊಲೀಸ್‌ ಟಾರ್ಚರ್‌ ಹೆಚ್ಚಾಗುತ್ತದೆ’ ಎಂಬ ಕಪೋಲಕಲ್ಪಿತ ಸಂಗತಿಗಳು ಹರಡಿವೆ. ಇವನ್ನು ಹೋಗಲಾಡಿಸಬೇಕು ಎಂದು ಯುಜಿಸಿ ಸೂಚಿಸಿದೆ.

ಈ ಸಂಬಂಧ ವಿವಿ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸತ್ಯ ಹಾಗೂ ಮಿಥ್ಯ ಯಾವುದು ಎಂಬುದನ್ನು ವಿವರಿಸುವ ಕರಪತ್ರಗಳನ್ನು ವಿತರಿಸಿದೆ.ಕರಪತ್ರ ವಿತರಿಸುವ ಅಭಿಯಾನ ನಡೆಸಬೇಕು. 

ಫಲಕಗಳನ್ನು ಅಳವಡಿಸಬೇಕು. ವಕೀಲರು ಹಾಗೂ ಹಾಲಿ-ನಿವೃತ್ತ ನ್ಯಾಯಾಧೀಶರು, ಶಿಕ್ಷಣ ಸಂಸ್ಥೆಗಳ ಬೋಧಕರಿಂದ ಈ ಬಗ್ಗೆ ವಿಚಾರ ಸಂಕಿರಣ ಹಾಗೂ ಸಂವಾದ ಆಯೋಜನೆ ಮಾಡಬೇಕು ಎಂಬ ನಿರ್ದೇಶನವನ್ನು ನೀಡಲಾಗಿದೆ.