ಸಾರಾಂಶ
ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಳೆದೊಂದು ವರ್ಷದಿಂದ ದೆಹಲಿ ಹೊರವಲಯದಲ್ಲಿ ಪ್ರತಿಭಟಿಸುತ್ತಿರುವ ರೈತರೊಂದಿಗಿನ ಸಂಧಾನಕ್ಕೆ ಕೇಂದ್ರ ಹಾಗೂ ಪಂಜಾಬ್ ಸರ್ಕಾರಗಳು ಮುಂದಾಗಿದ್ದು, ಅದರ ಹೊಣೆಯನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ವಹಿಸಲಾಗಿದೆ.
ಚಂಡೀಗಢ : ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಲು ಕಾನೂನು ರೂಪಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಳೆದೊಂದು ವರ್ಷದಿಂದ ದೆಹಲಿ ಹೊರವಲಯದಲ್ಲಿ ಪ್ರತಿಭಟಿಸುತ್ತಿರುವ ರೈತರೊಂದಿಗಿನ ಸಂಧಾನಕ್ಕೆ ಕೇಂದ್ರ ಹಾಗೂ ಪಂಜಾಬ್ ಸರ್ಕಾರಗಳು ಮುಂದಾಗಿದ್ದು, ಅದರ ಹೊಣೆಯನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ವಹಿಸಲಾಗಿದೆ. ಮೊದಲ ಸಂಧಾನ ಯತ್ನವು ಸಕಾರಾತ್ಮಕವಾಗಿ ಮುಗಿದಿದ್ದು, ಮುಂದಿನ ಹಂತದ ಮಾತುಕತೆ ಫೆ.22ರಂದು ನಿಗದಿಯಾಗಿದೆ.
‘ರೈತರ ಬೇಡಿಕೆಗಳನ್ನು ಏಕೆ ಆಲಿಸುತ್ತಿಲ್ಲ’ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ಜನವರಿಯಲ್ಲಿ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಇದರ ಭಾಗವಾಗಿ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವ ಜೋಶಿ, ಪಂಜಾಬ್‌ನ ಕೃಷಿ ಮಂತ್ರಿ ಸೇರಿ ಇಬ್ಬರು ಸಚಿವರು ಶುಕ್ರವಾರ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕಿಸಾನ್ ಮಜ್ದೂರ್ ಮೋರ್ಚಾದ 28 ರೈತ ಮುಖಂಡರೊಂದಿಗೆ ಇಲ್ಲಿನ ಮಹಾತ್ಮ ಗಾಂಧಿ ರಾಜ್ಯ ಸಾರ್ವಜನಿಕ ಆಡಳಿತ ಸಂಸ್ಥೆಯಲ್ಲಿ 2 ತಾಸು ಮಾತುಕತೆ ನಡೆಸಿದರು.
ಈ ವೇಳೆ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ಸೇರಿದಂತೆ ಹಲವು ಬೇಡಿಕೆಗಳ ಕುರಿತು ಚರ್ಚಿಸಲಾಯಿತು.
ಈ ವೇಳೆ ಮಾತನಾಡಿದ ಪ್ರಹ್ಲಾದ ಜೋಶಿ, ‘2014ರಿಂದ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ಶೇ.58ರಷ್ಟು ಏರಿಸಿದೆ. ನಿಮ್ಮ ಬೇಡಿಕೆಗಳನ್ನು ಸರ್ಕಾರ ಪರಿಶೀಲಿಸಲಿದೆ’ ಎಂದರು. ಆದರೆ ಇದಕ್ಕೆ ತಿರುಗೇಟು ನೀಡಿದ ರೈತ ನಾಯಕ ಸರ್ವಣ್ ಸಿಂಗ್ ಪಂಧೇರ್, ‘ನೀವು ಶೇ.58ರಷ್ಟು ಬೆಂಬಲ ಬೆಲೆ ಏರಿಸಿದ್ದರೂ ಹಣದುಬ್ಬರ ಶೇ.59ರಷ್ಟು ಹೆಚ್ಚಿದೆ. ಕನಿಷ್ಠ ಬೆಂಬಲ ಬೆಲೆಗೆ ಕಾಯ್ದೆ ರೂಪ ನೀಡುವವರೆಗೆ ನಾವು ಮುಷ್ಕರ ನಿಲ್ಲಿಸಲ್ಲ’ ಎಂದು ಪಟ್ಟು ಹಿಡಿದರು.
ಬಳಿಕ ಪ್ರತಿಕ್ರಿಯಿಸಿದ ಜೋಶಿ, ‘ರೈತರ ಬೇಡಿಕೆಗಳನ್ನು ಸರ್ಕಾರ ಸಹಾನುಭೂತಿಯಿಂದ ಪರಿಶೀಲಿಸಲಿದೆ. ಫೆ.22ರಂದು ಮುಂದಿನ ಸಂಧಾನ ಸಭೆ ಕೇಂದ್ರ ಕೃಷಿ ಸಚಿವ ಶಿವರಾಜ ಸಿಂಗ್ ಚೌಹಾಣ್ ನೇತೃತ್ವದಲ್ಲಿ ನಡೆಯಲಿದೆ. ಅಂದಿನ ಸಭೆಯಲ್ಲಿ ನಾನೂ ಪಾಲ್ಗೊಳ್ಳುವೆ’ ಹೇಳಿದರು.
ರೈತ ನಾಯಕರು ಮಾತನಾಡಿ, ‘ಸಭೆ ಸಕಾರಾತ್ಮಕ ವಾತಾವರಣದಲ್ಲಿ ನಡೆದಿದೆ. ಫೆ.22ರ ಸಭೆಯಲ್ಲಿ ಭಾಗಿಯಾಗಲಿದ್ದೇವೆ’ ಎಂದರು.
ಉಪವಾಸ ನಿರತ ದಲ್ಲೇವಾಲ್ ಭಾಗಿ
ರೈತರ ಬೇಡಿಕೆ ಈಡೇರಿಕೆಗಾಗಿ ಕಳೆದ ವರ್ಷ ನ.26ರಿಂದ ಅನಿರ್ದಿಷ್ಟಾವಧಿ ಉಪವಾಸ ಕೈಗೊಂಡಿರುವ ಕಿಸಾನ್ ಮೋರ್ಚಾದ ಸಂಚಾಲಕ ಜಗಜೀತ್ ಸಿಂಗ್ ದಲ್ಲೇವಾಲ್ ಕೂಡ ಸಭೆಯಲ್ಲಿ ಭಾಗವಹಿಸಿದ್ದು, ಅವರನ್ನು ಆ್ಯಂಬುಲೆನ್ಸ್‌ನಲ್ಲಿ ಕರೆತರಲಾಯಿತು.
ರೈತರ ಬೇಡಿಕೆ ಏನು?
ಬೆಳೆಗಳಿಗೆ ಎಂಎಸ್‌ಪಿ ಖಾತರಿ ಕಾಯ್ದೆ, ಸಾಲ ಮನ್ನಾ, ರೈತರು ಹಾಗೂ ಕೃಷಿ ಕಾರ್ಮಿಕರಿಗೆ ಪಿಂಚಣಿ, ವಿದ್ಯುತ್ ದರ ಏರಿಕೆಗೆ ತಡೆ, 2021ರ ಲಖೀಂಪುರ್ ಖೇರಿ ಹಿಂಸಾಚಾರದ ಸಂತ್ರಸ್ತರ ಮೇಲಿನ ಪ್ರಕರಣ ರದ್ದುಪಡಿಸಿಗೆ ನ್ಯಾಯ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು 2024ರ ಫೆ.13ರಿಂದ ಶಂಭು ಗಡಿ ಹಾಗೂ ಖನೌರಿ ಗಡಿಯಲ್ಲಿ ರೈತರ ಪ್ರತಿಭಟನೆ ಶುರುವಾಗಿದ್ದು, ಈವರೆಗೆ ನಡೆದ ಹಲವು ಮಾತುಕತೆಗಳು ವಿಫಲವಾಗಿವೆ.
- 28 ರೈತ ನಾಯಕರ ಜತೆ ನಿನ್ನೆ ಮೊದಲ ಸುತ್ತಿನ ಸಭೆ- ಸಕಾರಾತ್ಮಕ ಸ್ಪಂದನೆ । 22ರಂದು ಮತ್ತೆ ಸಭೆ
- ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ 2024ರ ಫೆ.13ರಿಂದ ದಿಲ್ಲಿ ಗಡಿಯ ಶಂಭು, ಖನೌರಿ ಗಡಿಯಲ್ಲಿ ರೈತರ ಪ್ರತಿಭಟನೆ- ಕಳೆದ ವರ್ಷ ನ.26ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ರೈತ ನಾಯಕ ದಲ್ಲೇವಾಲ್- ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿದರೂ ಹೋರಾಟ ಹಿಂಪಡೆದಿರಲಿಲ್ಲ ಪಂಜಾಬ್, ಹರ್ಯಾಣ ರೈತರು- ರೈತರ ಬೇಡಿಕೆಗಳನ್ನು ಆಲಿಸುವಂತೆ ಸರ್ಕಾರಗಳಿಗೆ ಕಟ್ಟುನಿಟ್ಟಿನ ತಾಕೀತು ಮಾಡಿದ ಸರ್ವೋಚ್ಚ ನ್ಯಾಯಾಲಯ- ಇದೀಗ ಕೇಂದ್ರ ಸರ್ಕಾರದಿಂದ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದ ತಂಡಕ್ಕೆ ಹೊಣೆಗಾರಿಕೆ. ನಿನ್ನೆ ಮೊದಲ ಸಭೆ