20 ಲಕ್ಷ ರು. ವಿಮೆ ಹಣದ ಆಸೆ ಹಾಗೂ ಅಕ್ರಮ ಸಂಬಂಧಕ್ಕೆ ಅಡ್ಡಿಯೆಂಬ ಕಾರಣಕ್ಕೆ, ಮಹಿಳೆಯೊಬ್ಬಳು ಪ್ರಿಯಕರನ ಜತೆ ಸೇರಿ ಗಂಡನಿಗೆ ವಿಷಕಾರಿ ಹಾವಿನಿಂದ ಕಚ್ಚಿಸಿ ಸಾಯಿಸಿರುವ ಆಘಾತಕಾರಿ ಘಟನೆ ಉತ್ತರಪ್ರದೇಶದ ಮೇರಠ್‌ನಲ್ಲಿ ನಡೆದಿದೆ.
ನವದೆಹಲಿ: 20 ಲಕ್ಷ ರು. ವಿಮೆ ಹಣದ ಆಸೆ ಹಾಗೂ ಅಕ್ರಮ ಸಂಬಂಧಕ್ಕೆ ಅಡ್ಡಿಯೆಂಬ ಕಾರಣಕ್ಕೆ, ಮಹಿಳೆಯೊಬ್ಬಳು ಪ್ರಿಯಕರನ ಜತೆ ಸೇರಿ ಗಂಡನಿಗೆ ವಿಷಕಾರಿ ಹಾವಿನಿಂದ ಕಚ್ಚಿಸಿ ಸಾಯಿಸಿರುವ ಆಘಾತಕಾರಿ ಘಟನೆ ಉತ್ತರಪ್ರದೇಶದ ಮೇರಠ್‌ನಲ್ಲಿ ನಡೆದಿದೆ.
ಅತುಲ್ ಹಾಗೂ ದಾಮಿನಿ 2019ರಲ್ಲಿ ಮದುವೆ
ಪರಸ್ಪರ ಪ್ರೀತಿಸುತ್ತಿದ್ದ ಅತುಲ್ ಹಾಗೂ ದಾಮಿನಿ 2019ರಲ್ಲಿ ಮದುವೆಯಾಗಿದ್ದರು. ಕೆಲ ವರ್ಷಗಳ ಸಂಬಂಧ ಹದಗೆಟ್ಟಿತ್ತು. ಅತ್ತ ಅತುಲ್ ಒಡೆತನದ ಶಾಲೆಯಲ್ಲಿ ಬಸ್ ಚಾಲಕನಾಗಿದ್ದ ತುಷಾರ್ ಪ್ರೀತಿ ಬಲೆಗೆ ದಾಮಿನಿ ಬಿದ್ದಿದ್ದಳು. ಹೀಗಾಗಿ ಪ್ರೀತಿಗೆ ಅಡ್ಡಿಯಾಗಿದ್ದ ಅತುಲ್ ಹತ್ಯೆಗೆ ಇಬ್ಬರೂ ಸಂಚು ರೂಪಿಸಿದ್ದರು.
ರಾತ್ರಿ ಮಲಗುವ ಮುನ್ನ ಅತುಲ್‌ಗೆ ನಿದ್ದೆ ಮಾತ್ರೆ ನೀಡಿದ್ದರು
ಅದರಂತೆ ಇತ್ತೀಚೆಗೆ ರಾತ್ರಿ ಮಲಗುವ ಮುನ್ನ ಅತುಲ್‌ಗೆ ನಿದ್ದೆ ಮಾತ್ರೆ ಹಾಲು ಬೆರೆಸಿ ನೀಡಿದ್ದರು. ಅದನ್ನು ಕುಡಿದು ಆತ ಗಾಢನಿದ್ರೆಗೆ ಜಾರುತ್ತಿದ್ದಂತೆ, ಹಾವಾಡಿಗರನ್ನು ಕರೆಸಿ, ಹಾಸಿಗೆಯ ಮೇಲೆ ಉರಗವನ್ನು ಹರಿಸಿ, ಆತನಿಗೆ ಕಚ್ಚಿಸಿದ್ದಳು. ಬಳಿಕ ಇದು ಆಕಸ್ಮಿಕವೆಂಬಂತೆ ಬಿಂಬಿಸಲು ಯತ್ನಿಸಿದ್ದಳು. ಆದರೆ ಅನುಮಾನಗೊಂಡು ತನಿಖೆಗಿಳಿದ ಪೊಲೀಸರು ದಾಮಿನಿಯ ಫೋನ್ ಪರಿಶೀಲಿಸಿದಾಗ ಹಾವಾಡಿಗರ ಜತೆಗಿನ ಸಂಭಾಷಣೆ ಹಾಗೂ ಹಾವಿನ ಪೋಟೋಗಳು ಪತ್ತೆಯಾಗಿವೆ. ಹಾವಿನಿಂದ ಕಚ್ಚಿಸುವುದಕ್ಕಾಗಿ 5 ಲಕ್ಷ ರು.ನ ಆಮಿಷವನ್ನೂ ಒಡ್ಡಲಾಗಿತ್ತೆಂದು ತಿಳಿದುಬಂದಿದೆ. ಇದರ ಬೆನ್ನಲ್ಲೇ ದಾಮಿನಿ, ತುಷಾರ್ ಹಾಗೂ ಇಬ್ಬರು ಹಾವಾಡಿಗರನ್ನು ಪೊಲೀಸರು ಬಂಧಿಸಿದ್ದಾರೆ.

