ಪ್ರಗತಿ ಕಾಣದಿದ್ದರೆ ರಷ್ಯಾ - ಉಕ್ರೇನ್‌ ಮಧ್ಯಸ್ಥಿಕೆ ರದ್ದು : ಅಮೆರಿಕ ಬೆದರಿಕೆ

| N/A | Published : Apr 19 2025, 12:46 AM IST / Updated: Apr 19 2025, 06:09 AM IST

 US President Donald Trump (File photo/ANI)

ಸಾರಾಂಶ

ತಾವು ಅಮೆರಿಕ ಅಧ್ಯಕ್ಷರಾಗಿ ಅಧಿಕಾರಕ್ಕೇರುತ್ತಿದ್ದಂತೆ ರಷ್ಯಾ-ಉಕ್ರೇನ್‌ ಯುದ್ಧವನ್ನು ಮೇ ವೇಳೆಗೆ ಕೊನೆಗಾಣಿಸುವುದಾಗಿ ಘೋಷಿಸಿದ್ದ ಡೊನಾಲ್ಡ್‌ ಟ್ರಂಪ್‌, ಪುಟಿನ್‌-ಜೆಲೆನ್ಸ್‌ಕಿ ಬಡಿದಾಟದಿಂದ ಬೇಸತ್ತುಹೋದಂತಿದೆ.

ವಾಷಿಂಗ್ಟನ್‌: ತಾವು ಅಮೆರಿಕ ಅಧ್ಯಕ್ಷರಾಗಿ ಅಧಿಕಾರಕ್ಕೇರುತ್ತಿದ್ದಂತೆ ರಷ್ಯಾ-ಉಕ್ರೇನ್‌ ಯುದ್ಧವನ್ನು ಮೇ ವೇಳೆಗೆ ಕೊನೆಗಾಣಿಸುವುದಾಗಿ ಘೋಷಿಸಿದ್ದ ಡೊನಾಲ್ಡ್‌ ಟ್ರಂಪ್‌, ಪುಟಿನ್‌-ಜೆಲೆನ್ಸ್‌ಕಿ ಬಡಿದಾಟದಿಂದ ಬೇಸತ್ತುಹೋದಂತಿದೆ.

‘ಶಾಂತಿ ಸ್ಥಾಪನೆಯಲ್ಲಿ ಪ್ರಗತಿಯ ಲಕ್ಷಣಗಳು ಕಂಡುಬರದೇ ಹೋದಲ್ಲಿ ಅಧ್ಯಕ್ಷ ಟ್ರಂಪ್‌ ಅವರು ಅದರ ಯತ್ನವನ್ನೇ ಕೈಬಿಡುತ್ತಾರೆ’ ಎಂದು ಅಮೆರಿಕದ ವಿದೇಶಾಂಗ ಖಾತೆ ಉಪ ಸಚಿವ ಮಾರ್ಕೋ ರುಬಿಯೋ ಹೇಳಿದ್ದಾರೆ.

ಯುರೋಪ್‌ ಹಾಗೂ ಉಕ್ರೇನ್‌ ನಾಯಕರೊಂದಿನ ಭೇಟಿಯ ಬಳಿಕ ಪ್ಯಾರಿಸ್‌ನಲ್ಲಿ ಮಾತನಾಡಿದ ರುಬಿಯೋ, ‘ಶಾಂತಿ ಸ್ಥಾಪನೆ ಯತ್ನದಲ್ಲಿ ನಾವು ತಿಂಗಳುಗಳ ಕಾಲ ತೊಡಗಿರಲು ಸಾಧ್ಯವಿಲ್ಲ. ಅಮೆರಿಕಕ್ಕೆ ಇನ್ನೂ ಅನೇಕ ಆದ್ಯತೆಗಳಿವೆ. ಇನ್ನು ಕೆಲ ವಾರಗಳಲ್ಲಿ ಯುದ್ಧ ನಿಲ್ಲುವುದಾದರೆ ನಾವು ಅದಕ್ಕೆ ಯತ್ನಿಸುತ್ತೇವೆ. ಇಲ್ಲದಿದ್ದರೆ ಅದರಿಂದ ಹಿಂದೆ ಸರಿಯುತ್ತೇವೆ’ ಎಂದು ಹೇಳಿದ್ದಾರೆ.

ರಷ್ಯಾ ಭರವಸೆ:

‘ಇಷ್ಟು ದಿನ ಅಮೆರಿಕದ ಅಧಿಕಾರಿಗಳೊಂದಿಗೆ ನಡೆದ ಮಾತುಕತೆಗಳು ಫಲ ನೀಡಲಿಲ್ಲವಾದರೂ ನಾವು ಅದನ್ನು ಮುಂದುವರೆಸಲು ಸಿದ್ಧರಿದ್ದೇವೆ’ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲ್ಯಾವ್ರೋವ್‌ ಹೇಳಿದ್ದಾರೆ.