ಸಾರಾಂಶ
ಚೆನ್ನೈ: ಭಾರತೀಯ ರೈಲ್ವೆಯ ಮೊದಲ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ದೇಶಾದ್ಯಂತ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದರೂ ಈ ರೈಲುಗಳಿಗೆ ಸುರಕ್ಷತೆಯ ಕೊರತೆಗಳಿವೆ ಎಂದು ರೈಲ್ವೆ ಸುರಕ್ಷತಾ ಆಯುಕ್ತರ ವರದಿ ಹೇಳಿದೆ.
‘ವಂದೇ ಭಾರತ್ ರೈಲುಗಳ ಮುಂಬದಿಯು ಸಾಮಾನ್ಯ ರೈಲಿನ ಎಂಜಿನ್‌ಗಿಂತ ಕಡಿಮೆ ಭಾರ ಇದೆ. ಇದು ಸಣ್ಣ ಮಟ್ಟದ ಅಡೆ ತಡೆಗಳನ್ನು ದೊಡ್ಡ ಅಪಘಾತಕ್ಕೆ ಎಡೆಮಾಡಿಕೊಡಲಿದೆ. ವೇಗವಾಗಿ ಹೋಗುವಾಗ ಹಸು ಸಿಕ್ಕರೂ ಹಳಿ ತಪ್ಪುವಿಕೆ ಸೇರಿ ಭಾರಿ ಅನಾಹುತ ಸಂಭವಿಸಬಹುದು’ ಎಂದು ಎಚ್ಚರಿಸಿದೆ.
ಇದರ ಜೊತೆಗೆ ಮುಂಜಾಗ್ರತಾ ಕ್ರಮವಾಗಿ ರೈಲು 160 ಕಿ.ಮೀ. ವೇಗದಲ್ಲಿ ಹೋಗುವ ಮಾರ್ಗದಲ್ಲಿ ಬೇಲಿ ಅಳವಡಿಕೆ, ರೈಲ್ವೆ ಗೇಟ್ ಬದಲು ಸೇತುವೆಗಳ ನಿರ್ಮಾಣ ಸೇರಿ ಇನ್ನಿತರ ಬದಲಾವಣೆಗಳನ್ನು ರೈಲ್ವೆ ಇಲಾಖೆಗೆ ಸೂಚಿಸಿದೆ.
ರೈಲು ಸುರಕ್ಷಿತ- ದಕ್ಷಿಣ ರೈಲ್ವೆ:
ಆದರೆ ಸುರಕ್ಷತಾ ಆಯುಕ್ತರ ವರದಿ ತಳ್ಳಿಹಾಕಿರುವ ದಕ್ಷಿಣ ರೈಲ್ವೆ, ‘ವಂದೇ ಭಾರತ್ ಎಲ್ಲ ರೀತಿಯ ಭದ್ರತೆಗಳನ್ನು ಒಳಗೊಂಡಿದೆ. ಇವುಗಳಲ್ಲಿ ಈ ರೈಲುಗಳು ಕವಚ್ ಇದ್ದು, ಅತ್ಯಾಧುನಿಕ ಬ್ರೇಕಿಂಗ್ ಸಹ ಹೊಂದಿದೆ. ಅಲ್ಲದೇ ಈ ರೈಲುಗಳಿಗೆ ಎಂಜಿನ್ ಇರುವುದಿಲ್ಲ. ಹೀಗಾಗಿ ಸಂಪೂರ್ಣ ರೈಲು ಒಂದೇ ತೂಕದಲ್ಲಿರುತ್ತದೆ. ಇದು ಕೇವಲ ಭಾರತದಲ್ಲಿ ಮಾತ್ರವಲ್ಲ, ಜಗತ್ತಿನಲ್ಲಿ ಎಲ್ಲವೂ ಹೀಗೆ ಇರುತ್ತದೆ. ಭಾರತದಲ್ಲಿನ ಮೆಮು, ಡೆಮು ರೈಲುಗಳು ಇದೇ ಮಾದರಿಯಲ್ಲಿರುತ್ತವೆ’ ಎಂದು ಸ್ಪಷ್ಟಪಡಿಸಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ನಿರ್ಮಾಣವಾಗುವ ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯ ಮಾಜಿ ಪ್ರಧಾನ ಮೆಕಾನಿಕಲ್ ಎಂಜಿನಿಯರ್ ಶುಭ್ರಾಂಶು ಕೂಡ ಇದೇ ಸ್ಪಷ್ಟನೆ ನೀಡಿದ್ದಾರೆ.