ಸಾರಾಂಶ
ಉಪರಾಷ್ಟ್ರಪತಿ ಜಗದೀಪ್ ಧನಕರ್ (74) ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಮುಂಗಾರು ಅಧಿವೇಶನದ ಮೊದಲ ದಿನವಾದ ಸೋಮವಾರ ರಾಜ್ಯಸಭೆಯ ಕಲಾಪಗಳಿಗೆ ಹಾಜರಾಗಿದ್ದ ಧನಕರ್, ಸಂಜೆಯ ವೇಳೆ ವೈದ್ಯಕೀಯ ಕಾರಣ ನೀಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ನವದೆಹಲಿ: ದಿಢೀರ್ ಬೆಳವಣಿಗೆಯೊಂದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನಕರ್ (74) ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಮುಂಗಾರು ಅಧಿವೇಶನದ ಮೊದಲ ದಿನವಾದ ಸೋಮವಾರ ರಾಜ್ಯಸಭೆಯ ಕಲಾಪಗಳಿಗೆ ಹಾಜರಾಗಿದ್ದ ಧನಕರ್, ಸಂಜೆಯ ವೇಳೆ ವೈದ್ಯಕೀಯ ಕಾರಣ ನೀಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. 2027ರವರೆಗೂ ಧನಕರ್ ಅವರ ಉಪರಾಷ್ಟ್ರಪತಿ ಹುದ್ದೆಯ ಅವಧಿ ಇದ್ದು ಅದಕ್ಕೂ ಎರಡು ವರ್ಷ ಮೊದಲೇ ಅವರು ಹುದ್ದೆ ತೊರೆದಿದ್ದಾರೆ. ಇತ್ತೀಚೆಗಷ್ಟೇ ಧನಕರ್ ದೆಹಲಿ ಏಮ್ಸ್‌ನಲ್ಲಿ ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
2022ರಲ್ಲಿ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದ ಧನಕರ್, ಅವಧಿ ಬಾಕಿ ಇದ್ದಾಗಲೇ ರಾಜೀನಾಮೆ ನೀಡಿದ 2ನೇ ವ್ಯಕ್ತಿ ಎನ್ನಿಸಿಕೊಂಡಿದ್ದಾರೆ. 1969ರಲ್ಲಿ ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸುವ ಉದ್ದೇಶದಿಂದ ವಿ.ವಿ. ಗಿರಿ ಅವರು ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿದ್ದರು.
ರಾಜೀನಾಮೆ:
ರಾಷ್ಟ್ರಪತಿಗಳಿಗೆ ರಾಜೀನಾಮೆ ಪತ್ರ ನೀಡಿರುವ ಧನಕರ್, ‘ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು, ವೈದ್ಯಕೀಯ ಸಲಹೆಯನ್ನು ಪಾಲಿಸಲು, ಸಂವಿಧಾನದ 67(ಎ) ವಿಧಿಯಂತೆ ತಕ್ಷಣದಿಂದ ಜಾರಿಗೆ ಬರುವಂತೆ ಉಪರಾಷ್ಟ್ರಪತಿ ಹುದ್ದೆಯನ್ನು ತೊರೆಯುತ್ತಿದ್ದೇನೆ’ ಎಂದು ಬರೆದಿದ್ದಾರೆ.
ಜತೆಗೆ, ತಾವು ಹುದ್ದೆಯಲ್ಲಿದ್ದಷ್ಟು ಸಮಯ ನಿರಂತರ ಬೆಂಬಲ ನೀಡಿ, ಅವಧಿಯುದ್ದಕ್ಕೂ ಒಳ್ಳೆಯ ಸಂಬಂಧ ಕಾಯ್ದುಕೊಂಡದ್ದಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಅಂತೆಯೇ, ಭಾರತ ಅಭಿವೃದ್ಧಿಹೊಂದುತ್ತಿದ್ದ ಸಮಯದಲ್ಲಿ ಅದರ ಭಾಗವಾಗಿದ್ದುದಕ್ಕೆ ಹೆಮ್ಮೆಯಿದೆ ಎಂದಿದ್ದಾರೆ.
ಧನಕರ್ ಅವರು 2022ರಲ್ಲಿ ಕಾಂಗ್ರೆಸ್‌ನ ಮಾರ್ಗರೇಟ್ ಆಳ್ವಾ ಅವರನ್ನು ಮಣಿಸಿ ಉಪರಾಷ್ಟ್ರಪತಿ ಹುದ್ದೆಗೆ ಆಯ್ಕೆಯಾಗಿದ್ದರು.
ಮುಂದೇನು?:
ಹೊಸ ಉಪರಾಷ್ಟ್ರಪತಿ ಆಯ್ಕೆಗೆ ರಾಜೀನಾಮೆಯ 60 ದಿನಗಳೊಳಗಾಗಿ ಚುನಾವಣೆ ನಡೆಯಲಿದೆ. ಇದರಲ್ಲಿ ಉಭಯ ಸದನದ ಎಲ್ಲಾ ಸಂಸದರು ಭಾಗಿಯಾಗಲಿದ್ದಾರೆ. ಅಲ್ಲಿಯವರೆಗೆ, ರಾಜ್ಯಸಭೆಯ ಉಪಸಭಾಪತಿಗಳು ಮೇಲ್ಮನೆಯ ಹಂಗಾಮಿ ಅಧ್ಯಕ್ಷರಾಗಿರಲಿದ್ದಾರೆ. ಇದರಂತೆ, ಧನಕರ್ ಅವರ ಜವಾಬ್ದಾರಿಯನ್ನು ತಾತ್ಕಾಲಿಕವಾಗಿ ಹರಿವಂಶ್ ನಾರಾಯಣ್ ಸಿಂಗ್ ವಹಿಸಿಕೊಳ್ಳಲಿದ್ದಾರೆ.
ಅವಿಶ್ವಾಸ ನಿರ್ಣಯದಿಂದ ಪಾರಾಗಿದ್ದರು:
2024ರ ಡಿಸೆಂಬರ್‌ನಲ್ಲಿ, ಧನಕರ್ ಪಕ್ಷಪಾತ ಮಾಡುತ್ತಿದ್ದಾರೆಂದು ಆರೋಪಿಸಿ ಅವರ ವಿರುದ್ಧ ವಿಪಕ್ಷಗಳು ಅವಿಶ್ವಾಸ ನಿರ್ಣಯವನ್ನು ಮಂಡಿಸಿದ್ದವು. ಆದರೆ ಅದನ್ನು ರಾಜ್ಯಸಭೆಯ ಉಪಸಭಾಪತಿಗಳು ತಿರಸ್ಕರಿಸಿದ್ದರು. ಹೀಗೆ ಹಾಲಿ ಉಪರಾಷ್ಟ್ರಪತಿಯ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿದ್ದು ಅದೇ ದೇಶದ ಇತಿಹಾಸದಲ್ಲೇ ಮೊದಲು.
ರಾಜಕೀಯ ಜೀವನ:
1989ರಲ್ಲಿ ಜನತಾ ದಳ ಸೇರುವ ಮೂಲಕ ರಾಜಕೀಯಕ್ಕೆ ಕಾಲಿಟ್ಟಿದ್ದ ಜಗದೀಪ್ ಧನಕರ್, ರಾಜಸ್ಥಾನದ ಝುಂಝುನು ಕ್ಷೇತ್ರದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಶಾಲಿಯಾಗಿದ್ದರು. ಆ ವೇಳೆ ಇವರು ಸುಪ್ರೀಂ ಕೋರ್ಟ್‌ನಲ್ಲಿ ವಕೀಲರೂ ಆಗಿದ್ದರು.
1990ರಿಂದ 1991ರವರೆಗೆ ಕೇಂದ್ರ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. 1993 ರಿಂದ 1998 ರವರೆಗೆ ರಾಜಸ್ಥಾನದ ವಿಧಾನಸಭೆಯ ಸಂಸದರಾಗಿದ್ದರು.
1991–2003 ಅವಧಿಯಲ್ಲಿ ಕಾಂಗ್ರೆಸ್‌ನಲ್ಲಿದ್ದ ಧನಕರ್, 2003ರಲ್ಲಿ ಬಿಜೆಪಿಗೆ ಸೇರ್ಪಡೆಯಾದರು.
2022ರಲ್ಲಿ ಭಾರತದ ಉಪರಾಷ್ಟ್ರಪತಿಯಾಗುವುದಕ್ಕೂ ಮುನ್ನ ಇವರು (2019-2022) ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದರು.
- ಅನಾರೋಗ್ಯದ ಕಾರಣ ಹುದ್ದೆಗೆ ಗುಡ್‌ಬೈ
- 2 ವರ್ಷ ಅವಧಿ ಇರುವಾಗಲೇ ಪದತ್ಯಾಗ---
- ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿದ 2ನೇ ವ್ಯಕ್ತಿ ಧನಕರ್
- ಈ ಹಿಂದೆ 1969ರಲ್ಲಿ ವಿ.ವಿ. ಗಿರಿ ಹುದ್ದೆಗೆ ರಾಜೀನಾಮೆ ನೀಡಿದ್ದರು
- ಈಗ 60 ದಿನದಲ್ಲಿ ಉಪರಾಷ್ಟ್ರಪತಿಗೆ ಚುನಾವಣೆ ನಡೆಯಬೇಕು
- ಅಲ್ಲಿಯವರೆಗೆ ರಾಜ್ಯದಭೆ ಉಪಸಭಾಪತಿ ಹರಿವಂಶಗೆ ಪಟ್ಟ
- ಸಾಕಷ್ಟು ವಿವಾದಗಳಿಂದ ಸುದ್ದಿ ಆಗಿದ್ದ ಜಗದೀಪ್ ಧನಕರ್