ಸಾರಾಂಶ
ರಾಂಚಿ: ಗಣಿ ಶ್ರೀಮಂತ ರಾಜ್ಯವಾದ ಜಾರ್ಖಂಡ್ ದೇಶದಲ್ಲೇ ಮೊದಲ ಬಾರಿ ಗಣಿಗಾರಿಕಾ ಪ್ರವಾಸೋದ್ಯಮ ಆರಂಭಕ್ಕೆ ಮುಂದಾಗಿದೆ. ಈ ಕುರಿತು ಜಾರ್ಖಂಡ್ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಸೆಂಟ್ರಲ್ ಕೋಲ್‌ಫೀಲ್ಡ್ಸ್ ಲಿಮಿಟೆಡ್ (ಸಿಸಿಎಲ್) ಜತೆ ಒಪ್ಪಂದ ಮಾಡಿಕೊಂಡಿದೆ.
ಏನಿದು ಯೋಜನೆ?:
ಸದ್ಯಕ್ಕೆ ರಾಮಗಢ ಜಿಲ್ಲೆಯ ಉತ್ತರ ಉರಿಮರಿ (ಬಿರ್ಸಾ) ಕಲ್ಲಿದ್ದಲು ಗಣಿಯಲ್ಲಿ ಯೋಜನೆಯನ್ನು ಆರಂಭಿಸಲಾಗಿದೆ. ನಂತರ ಇತರ ಗಣಿಗಳಿಗೂ ವಿಸ್ತರಿಸಲಾಗುತ್ತದೆ. ವಾರಕ್ಕೆ 2 ಸಲ ಪ್ರವಾಸವಿದ್ದು, ಪ್ರತಿ ತಂಡದಲ್ಲಿ 10-20 ಜನರಿಗೆ ಅವಕಾಶವಿರುತ್ತದೆ. 2 ಮಾರ್ಗಗಳ ಮೂಲಕ ಗಣಿ ತಲುಪಲಾಗುತ್ತದೆ. ರಜರಪ್ಪಾ ಮಾರ್ಗವನ್ನು ಆಯ್ದುಕೊಂಡರೆ ಪ್ರತಿ ವ್ಯಕ್ತಿಗೆ 2,800 ರು., ಪತರಾತೂ ಮಾರ್ಗವಾದರೆ 2,500 ಶುಲ್ಕವಿರುತ್ತದೆ.
ಪ್ರವಾಸಿಗರಿಗೆ ಖನಿಜಗಳನ್ನು ಹೊರತೆಗೆಯುವುದರಿಂದ ಹಿಡಿದು ಅವುಗಳನ್ನು ಶುದ್ಧೀಕರಿಸಿ ಅಂತಿಮ ಸ್ವರೂಪ ನೀಡುವವರೆಗಿನ ಎಲ್ಲ ಹಂತಗಳನ್ನು ವೀಕ್ಷಿಸಲು ಅವಕಾಶ ಸಿಗಲಿದೆ. ಹಳೆ ಮತ್ತು ಸಕ್ರಿಯ ಎರಡೂ ರೀತಿಯ ಗಣಿಗಳ ಒಳಗೆ ತೆರಳಲು ಪ್ರವಾಸಿಗರಿಗೆ ಗೈಡ್ ಮೂಲಕ ಅವಕಾಶ ಕಲ್ಪಿಸಲಾಗುವುದು. ಸಾಂಪ್ರದಾಯಿಕವಾಗಿ ಗಣಿಗಾರಿಕೆ ಮಾಡುತ್ತಿರುವ ಸಮುದಾಯಗಳ ಸಂಸ್ಕೃತಿಯ ಪರಿಚಯ ಮಾಡಿಕೊಡಲಾಗುತ್ತದೆ. ಪ್ರವಾಸದುದ್ದಕ್ಕೂ ಮೋಜಿನ ಜತೆಗೆ ಮಾಹಿತಿಯೂ ಸಿಗುವಂತೆ ಯೋಜನೆ ಸಿದ್ಧಪಡಿಸಲಾಗುತ್ತದೆ. ಸ್ಥಳೀಯರಿಗೆ ಉದ್ಯೋಗಾವಕಾಶ, ಗಣಿಪ್ರದೇಶಗಳ ಅಭಿವೃದ್ಧಿಯ ಗುರಿಯನ್ನೂ ಹಾಕಿಕೊಳ್ಳಲಾಗಿದೆ.