ಸಾರಾಂಶ
ಚೆನ್ನೈ: ತಮಿಳುನಾಡಿನ ಖ್ಯಾತ ಉದ್ಯಮಿ, ಅನ್ನಪೂರ್ಣ ಹೋಟೆಲ್ ಸಮೂಹದ ಮುಖ್ಯಸ್ಥ ಶ್ರೀನಿವಾಸ್ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಲ್ಲಿ ಕ್ಷಮೆಯಾಚಿಸಿದ ಖಾಸಗಿ ಸಂಭಾಷಣೆಯ ವಿಡಿಯೋವೊಂದನ್ನು ಬಿಡುಗಡೆ ಮಾಡುವ ಮೂಲಕ ಬಿಜೆಪಿ ವಿವಾದ ಸೃಷ್ಟಿಸಿದೆ.
ಇತ್ತೀಚೆಗೆ ಕೊಯಮತ್ತೂರಿನಲ್ಲಿ ನಡೆದ ಉದ್ಯಮಿಗಳ ಸಭೆಯಲ್ಲಿ ಹಾಜರಿದ್ದ ನಿರ್ಮಲಾ ಎದುರೇ, ಜಿಟಿಎಸ್ ಸಂಕೀರ್ಣತೆ ಬಗ್ಗೆ ಉದ್ಯಮಿ ಶ್ರೀನಿವಾಸ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ‘ಬನ್‌ಗೆ ಶೂನ್ಯ ಜಿಎಸ್ಟಿ ಇದ್ದರೆ, ಕ್ರೀಮ್‌ಗೆ ಶೇ.5 ಜಿಎಸ್‌ಟಿ ಇದೆ. ಕ್ರೀಮ್ ಬನ್‌ಗೆ ಶೇ.18ರಷ್ಟು ಜಿಎಸ್ಟಿ ಇದೆ. ಜನರು ‘ಬರೀ ಬನ್ ಕೊಡಿ.. ನಾವು ಕ್ರೀಮ್ ಹಚ್ಕೋತೀವಿ’ ಅಂತಾರೆ’ ಎಂದು ಜಿಎಸ್ಟಿಯಲ್ಲಿನ ನ್ಯೂನತೆಗಳ ಬಗ್ಗೆ ಗಮನ ಸೆಳೆದಿದ್ದರು.
ಆದರೆ ಸಭೆಯ ಬಳಿಕ ಬಿಜೆಪಿ ಶಾಸಕಿ ವನತಿ ಸಮ್ಮುಖದಲ್ಲಿ ಖಾಸಗಿಯಾಗಿ ನಿರ್ಮಲಾ ಭೇಟಿಯಾಗಿದ್ದ ಶ್ರೀನಿವಾಸ್, ‘ಸಭೆಯಲ್ಲಿ ಆಡಿದ ಮಾತುಗಳಿಗೆ ನಾನು ಕ್ಷಮೆಯಾಚಿಸುತ್ತೇನೆ. ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ’ ಎಂದು ಹೇಳಿದ್ದರು. ಈ ಖಾಸಗಿ ಭೇಟಿಯ ವಿಡಿಯೋವನ್ನು ತಮಿಳುನಾಡು ಬಿಜೆಪಿ ಘಟಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಇದಕ್ಕೆ ನೆಟ್ಟಿಗರು ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪ್ರತಿಕ್ರಿಯೆ ನೀಡಿರುವ ರಾಹುಲ್, ‘ಸಣ್ಣ ಉದ್ಯಮಿಗಳು ಜನಪ್ರತಿನಿಧಿಗಳ ಬಳಿ ತೆರಿಗೆ ಸರಳೀಕರಣ ಕೋರಿದರೆ ಅವರ ಬೇಡಿಕೆಗೆ ದುರಂಹಕಾರದ ಮೂಲಕ ಪ್ರತಿಕ್ರಿಯೆ ನೀಡಲಾಗುತ್ತಿದೆ ಮತ್ತು ಅವರಿಗೆ ಅಗೌರವ ತೋರಲಾಗುತ್ತಿದೆ. ಮತ್ತೊಂದೆಡೆ ಶ್ರೀಮಂತ ಉದ್ಯಮಿಗಳು ತಮಗೆ ಅನುಕೂಲಕರ ರೀತಿ ಕಾನೂನು ಬದಲಾವಣೆ ಕೋರಿದರೆ ಮೋದಿ ಅವರಿಗೆ ಕೆಂಪು ಹಾಸಿನ ಸ್ವಾಗತ ಕೋರುತ್ತಾರೆ’ ಎಂದಿದ್ದಾರೆ.
ಅಣ್ಣಾಮಲೈ ಕ್ಷಮೆ:
ಶ್ರೀನಿವಾಸ್ ಅವರ ವಿಡಿಯೋ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ ಈ ಕುರಿತು ಕ್ಷಮೆಯಾಚಿಸಿದ್ದಾರೆ. ‘ಶ್ರೀನಿವಾಸ್ ತಮಿಳುನಾಡು ಉದ್ಯಮದ ಆಧಾರ ಸ್ತಂಭ. ಅವರ ವಿಷಯದಲ್ಲಿ ನಾವು ಹೀಗೆ ನಡೆದುಕೊಳ್ಳಬಾರದಿತ್ತು. ಈ ಕುರಿತು ತಾವು ಶ್ರೀನಿವಾಸ್ ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿ ಘಟನೆ ಕುರಿತು ವಿಷಾದ ವ್ಯಕ್ತಪಡಿಸಿದ್ದೇನೆ’ ಎಂದು ಹೇಳಿದ್ದಾರೆ.