ಸಾರಾಂಶ
ಈಶಾನ್ಯ ರಾಜ್ಯ ಮಣಿಪುರಕ್ಕೆ, ಹಿಂಸೆ ಆರಂಭವಾದ ಬಳಿಕ ಶನಿವಾರ ಮೊದಲ ಬಾರಿ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ‘ಆದ ಗಾಯಗಳನ್ನು ಗುಣಪಡಿಸಲು ಹಾಗೂ ರಾಜ್ಯದಲ್ಲಿ ಶಾಂತಿ ಮತ್ತು ಸಮೃದ್ಧಿ ಮತ್ತು ಆತ್ಮವಿಶ್ವಾಸವನ್ನು ಪುನಃಸ್ಥಾಪಿಸಲು ತಮ್ಮ ಸರ್ಕಾರ ಬದ್ಧವಾಗಿದೆ’ ಎಂದು ತಿಳಿಸಿದ್ದಾರೆ.
ಚುರಾಚಾಂದ್‌ಪುರ/ ಇಂಫಾಲ್ (ಮಣಿಪುರ) : ಕಳೆದೆರಡು ವರ್ಷಗಳಿಂದ ಜನಾಂಗೀಯ ಸಂಘರ್ಷದಿಂದ ನಲುಗಿರುವ ಈಶಾನ್ಯ ರಾಜ್ಯ ಮಣಿಪುರಕ್ಕೆ, ಹಿಂಸೆ ಆರಂಭವಾದ ಬಳಿಕ ಶನಿವಾರ ಮೊದಲ ಬಾರಿ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ‘ಆದ ಗಾಯಗಳನ್ನು ಗುಣಪಡಿಸಲು ಹಾಗೂ ರಾಜ್ಯದಲ್ಲಿ ಶಾಂತಿ ಮತ್ತು ಸಮೃದ್ಧಿ ಮತ್ತು ಆತ್ಮವಿಶ್ವಾಸವನ್ನು ಪುನಃಸ್ಥಾಪಿಸಲು ತಮ್ಮ ಸರ್ಕಾರ ಬದ್ಧವಾಗಿದೆ’ ಎಂದು ತಿಳಿಸಿದ್ದಾರೆ.
ಭೇಟಿಯ ವೇಳೆ ರಾಜಧಾನಿ ಇಂಫಾಲ್‌ನಲ್ಲಿ ಸುಮಾರು 1,200 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾದ 17 ಯೋಜನೆಗಳಿಗೆ ಚಾಲನೆ ನೀಡಿದರು. ಜೊತೆಗೆ, ಚುರಾಚಾಂದ್‌ಪುರ ಜಿಲ್ಲೆಯಲ್ಲಿ 7,300 ಕೋಟಿ ರು.ಗೂ ಅಧಿಕ ಮೊತ್ತದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದರು. ಬಳಿಕ ಉಭಯ ನಗರಗಳಲ್ಲಿ ಪ್ರತ್ಯೇಕವಾಗಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು ಶಾಂತಿ ಸ್ಥಾಪನೆಗೆ ಕರೆ ನೀಡಿದರು.
‘ಕೆಲವೇ ಸಮಯದ ಹಿಂದೆ, ಹಿಂಸಾಚಾರದಿಂದ ಸಂತ್ರಸ್ತರಾದ ಜನರನ್ನು ನಿರಾಶ್ರಿತರ ಶಿಬಿರದಲ್ಲಿ ಭೇಟಿಯಾದೆ. ಅವರನ್ನು ಕಂಡ ಬಳಿಕ, ಮಣಿಪುರದಲ್ಲಿ ಭರವಸೆ ಮತ್ತು ನಂಬಿಕೆಯ ಹೊಸ ಉದಯವಾಗುತ್ತಿದೆ ಎಂದು ನಾನು ಆತ್ಮವಿಶ್ವಾಸದಿಂದ ಹೇಳಬಲ್ಲೆ. ಅಭಿವೃದ್ಧಿ ಎಲ್ಲಿಯಾದರೂ ಬೇರೂರಲು ಶಾಂತಿ ಅತ್ಯಗತ್ಯ. ಕಳೆದ 11 ವರ್ಷಗಳಲ್ಲಿ, ಈಶಾನ್ಯದಲ್ಲಿ ಅನೇಕ ಸಂಘರ್ಷಗಳು ಮತ್ತು ವಿವಾದಗಳನ್ನು ಪರಿಹರಿಸಲಾಗಿದೆ. ಜನರು ಶಾಂತಿಯ ಮಾರ್ಗವನ್ನು ಆರಿಸಿಕೊಂಡಿದ್ದಾರೆ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ’ ಎಂದರು.
‘ಮಣಿಪುರದ ಬೆಟ್ಟಗಳ ಜನರು ಮತ್ತು ಕಣಿವೆಯ ಜನರ ನಡುವೆ ‘ವಿಶ್ವಾಸ’ದ ಬಲವಾದ ಸೇತುವೆಯನ್ನು ನಿರ್ಮಿಸಬೇಕು’ ಎನ್ನುವ ಮೂಲಕ ಮೈತೇಯಿ ಹಾಗೂ ಕುಕಿಗಳ ನಡುವಿನ ಸಂಘರ್ಷ ಅಂತ್ಯಗೊಳ್ಳಬೇಕು ಎಂದು ಕರೆ ನೀಡಿದರು. ಮೈತೇಯಿ ಸಮುದಾಯದ ಜನರು ಇಂಫಾಲ್ ಕಣಿವೆಯಲ್ಲಿ ವಾಸಿಸುತ್ತಿದ್ದರೆ, ಕುಕಿಗಳು ಪಕ್ಕದ ಬೆಟ್ಟಗಳಲ್ಲಿ ವಾಸಿಸುತ್ತಾರೆ.
‘ಮಣಿಪುರವು ‘ಭಾರತ ಮಾತೆ’ಯ ಕಿರೀಟವನ್ನು ಅಲಂಕರಿಸುವ ‘ರತ್ನ’ವಾಗಿದೆ. ಇಲ್ಲಿ ಯಾವುದೇ ರೀತಿಯ ಹಿಂಸಾಚಾರ ಖಂಡನೀಯ. ಇದು ದುರದೃಷ್ಟಕರ ಮಾತ್ರವಲ್ಲದೆ ನಮ್ಮ ಪೂರ್ವಜರು ಮತ್ತು ನಮ್ಮ ಭವಿಷ್ಯದ ಪೀಳಿಗೆಗೆ ಗಂಭೀರ ಅನ್ಯಾಯವಾಗಿದೆ. ಒಟ್ಟಾಗಿ, ನಾವು ಮಣಿಪುರವನ್ನು ಶಾಂತಿ ಮತ್ತು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಸಬೇಕು. 21ನೇ ಶತಮಾನವು ಮಣಿಪುರಕ್ಕೆ ಸೇರಿದೆ’ ಎಂದು ಅವರು ಹೇಳಿದರು.
ಕಾಂಗ್ರೆಸ್‌ಗೆ ಟಾಂಗ್:
ಸಂಘರ್ಷದಿಂದ ನಲುಗಿರುವ ಮಣಿಪುರಕ್ಕೆ ಮೋದಿ ಭೇಟಿ ನೀಡುತ್ತಿಲ್ಲ ಎಂದು ನಿರಂತರವಾಗಿ ಆರೋಪಿಸುತ್ತಾ ಬಂದಿದ್ದ ವಿಪಕ್ಷ ಕಾಂಗ್ರೆಸ್‌ಗೆ ಟಾಂಗ್ ನೀಡಿದ ಮೋದಿ, ‘ಇತ್ತೀಚೆಗೆ ಬೆಟ್ಟ ಮತ್ತು ಕಣಿವೆಗಳಲ್ಲಿ ವಿವಿಧ ಗುಂಪುಗಳೊಂದಿಗೆ ಒಪ್ಪಂದದ ಮಾತುಕತೆಗಳು ನಡೆದಿವೆ. ಇವು ಚರ್ಚೆ, ಗೌರವ ಮತ್ತು ಪರಸ್ಪರ ತಿಳುವಳಿಕೆಗೆ ಪ್ರಾಮುಖ್ಯ ನೀಡುತ್ತಾ ಶಾಂತಿಯನ್ನು ಸ್ಥಾಪಿಸಲು ಭಾರತ ಸರ್ಕಾರ ಕೈಗೊಂಡ ಪ್ರಯತ್ನಗಳ ಭಾಗವೇ ಆಗಿವೆ’ ಎಂದರು.
ಶಾಂತಿಯ ಹಾದಿಗೆ ಬನ್ನಿ:
ಪರಸ್ಪರ ಹಿಂಸಾಚಾರದಲ್ಲಿ ತೊಡಗಿರುವ ಮಣಿಪುರದ ಸಂಘಟನೆಗಳಿಗೆ ಶಾಂತಿಯ ಕರೆ ನೀಡಿದ ಪ್ರಧಾನಿ, ‘ಶಾಂತಿಯ ಹಾದಿಯಲ್ಲಿ ಮುಂದುವರಿಯಲು ಮತ್ತು ಕನಸುಗಳನ್ನು ನನಸಾಗಿಸಲು ನಾನು ಎಲ್ಲಾ ಸಂಸ್ಥೆಗಳಿಗೆ ಮನವಿ ಮಾಡುತ್ತೇನೆ. ನಾನು ನಿಮ್ಮೊಂದಿಗಿದ್ದೇನೆ. ಭಾರತ ಸರ್ಕಾರ ಮಣಿಪುರದ ಜನರೊಂದಿಗಿದೆ. ಮಣಿಪುರವನ್ನು ಶಾಂತಿ, ಸಮೃದ್ಧಿ ಮತ್ತು ಪ್ರಗತಿಯ ಸಂಕೇತವನ್ನಾಗಿ ಮಾಡುವ ಗುರಿಯತ್ತ ನಾವು ಕೆಲಸ ಮಾಡುತ್ತಿದ್ದೇವೆ’ ಎಂದರು.
ಸರ್ಕಾರದ ಅಭಿವೃದ್ಧಿ ಕಾರ್ಯಗಳ ಸ್ಮರಣೆ:
ಮಣಿಪುರದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳನ್ನು ಉಲ್ಲೇಖಿಸಿದ ಮೋದಿ, ‘ಹಿಂದೆ, ಮಣಿಪುರದಲ್ಲಿ ಉತ್ತಮ ಶಾಲೆಗಳು ಮತ್ತು ಆಸ್ಪತ್ರೆಗಳು ಕೇವಲ ಕನಸಾಗಿದ್ದವು. ಇಂದು ಕೇಂದ್ರದ ಪ್ರಯತ್ನಗಳಿಂದ ಈ ಪರಿಸ್ಥಿತಿ ಬದಲಾಗುತ್ತಿದೆ. ಸ್ವಾತಂತ್ರ್ಯ ಬಂದು ದಶಕಗಳೇ ಕಳೆದರೂ ಮಣಿಪುರ ಒಂದೇ ಒಂದು ವೈದ್ಯಕೀಯ ಕಾಲೇಜನ್ನು ಹೊಂದಿರಲಿಲ್ಲ. ಈ ಅಗತ್ಯವನ್ನು ಪೂರೈಸಿದ್ದು ನಮ್ಮ ಸರ್ಕಾರ. ಆಯುಷ್ಮಾನ್ ಭಾರತ್ ಯೋಜನೆಯ ಮೂಲಕ ಕೇಂದ್ರವು 5 ಲಕ್ಷ ರು.ಗಳವರೆಗೆ ಉಚಿತ ಚಿಕಿತ್ಸೆಯನ್ನು ನೀಡುತ್ತಿದೆ. ಮಣಿಪುರದಲ್ಲಿಯೇ, ಈ ಯೋಜನೆಯಡಿಯಲ್ಲಿ 2.5 ಲಕ್ಷಕ್ಕೂ ಹೆಚ್ಚು ರೋಗಿಗಳು ಉಚಿತ ಚಿಕಿತ್ಸೆ ಪಡೆದಿದ್ದಾರೆ’ ಎಂದು ಹೇಳಿದರು.
‘ಮಣಿಪುರದಲ್ಲಿ ಸಾವಿರಾರು ಕುಟುಂಬಗಳಿಗೆ ಶಾಶ್ವತ ಮನೆಗಳನ್ನು ನಿರ್ಮಿಸಿದ್ದೇವೆ. ರಾಜ್ಯದಲ್ಲಿ ಏಳೆಂಟು ವರ್ಷಗಳ ಹಿಂದೆ, ಕೇವಲ 25,000-30,000 ಮನೆಗಳಿಗೆ ಮಾತ್ರ ಪೈಪ್‌ಗಳ ಮೂಲಕ ನೀರು ಸರಬರಾಜಾಗುತ್ತಿತ್ತು. ಇಂದು 3.5 ಲಕ್ಷಕ್ಕೂ ಹೆಚ್ಚು ಮನೆಗಳು ನೀರಿನ ಸೌಲಭ್ಯ ಪಡೆದಿವೆ. ಹಿಂಸಾಚಾರದಿಂದ ಸ್ಥಳಾಂತರಗೊಂಡ ಕುಟುಂಬಗಳಿಗೆ 7,000 ಹೊಸ ಮನೆಗಳನ್ನು ನಿರ್ಮಿಸಲು ಕೇಂದ್ರ ಸಹಾಯ ಮಾಡುತ್ತಿದೆ’ ಎಂದರು.
‘ಸುಮಾರು 3,000 ಕೋಟಿ ರು.ಗಳ ವಿಶೇಷ ಪ್ಯಾಕೇಜ್ ಅನ್ನು ಇತ್ತೀಚೆಗೆ ಅನುಮೋದಿಸಲಾಗಿದೆ. ಮಣಿಪುರದ ಅಭಿವೃದ್ಧಿ, ಪುನರ್ವಸತಿ ಮತ್ತು ಶಾಂತಿಗಾಗಿ, ಭಾರತ ಸರ್ಕಾರವು ಮಣಿಪುರ ಸರ್ಕಾರವನ್ನು ಸಾಧ್ಯವಿರುವ ಎಲ್ಲ ರೀತಿಯಲ್ಲಿ ಬೆಂಬಲಿಸುತ್ತದೆ’ ಎಂದು ಭರವಸೆ ನೀಡಿದರು.
)
;Resize=(128,128))
;Resize=(128,128))
;Resize=(128,128))
;Resize=(128,128))