ಸಾರಾಂಶ
ನವದೆಹಲಿ: ಪ್ರಾಣಿಪ್ರೇಮವು ಅತಿರೇಕಕ್ಕೆ ಹೋದರೆ ಏನಾಗಬಹುದು ಎಂಬುದನ್ನು ತೋರಿಸುವ ಘಟನೆಯೊಂದು ನಡೆದಿದೆ. ಇದರ ವಿಡಿಯೋ ಎಕ್ಸ್‌ನಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ಘಟನೆ ನಡೆದಿದ್ದೆಲ್ಲಿ ಎಂಬ ಮಾಹಿತಿ ಇಲ್ಲ.
ವಿಡಿಯೋದಲ್ಲಿ, ನಾಯಿಯೊಂದು ಹಸುವಿನ ಬಾಲ ಕಚ್ಚಲು ಯತ್ನಿಸುತ್ತಿರುತ್ತದೆ. ಇದನ್ನು ಕಂಡವನೊಬ್ಬ ಕೋಲು ತೆಗೆದುಕೊಂಡು ಶ್ವಾನಕ್ಕೆ ಮನಸೋ ಇಚ್ಛೆ ಬಾರಿಸಿದ್ದಾನೆ. ಪರಿಣಾಮವಾಗಿ ಆ ನಾಯಿ ಮಲಗಿಬಿಟ್ಟಿದೆ. ಈ ನಡೆಯನ್ನು ಕಂಡ ಕೋಪಗೊಂಡ ಓರ್ವ ವ್ಯಕ್ತಿ, ನಾಯಿಯನ್ನು ಹೊಡೆದವನ ವಾಗ್ವಾದಕ್ಕೆ ಇಳಿಯುತ್ತಾನೆ. ಅಷ್ಟರಲ್ಲಾಗಲೇ ಕೊಂಚ ಚೇತರಿಸಿಕೊಂಡಿದ್ದ ನಾಯಿ ಎದ್ದು, ತನ್ನನ್ನು ಹೊಡೆತದಿಂದ ಬಚಾವ್ ಮಾಡಲು ಬಂದಿದ್ದವನ ಕಾಲಿಗೇ ಕಚ್ಚಿಬಿಡುತ್ತದೆ.
ಇದನ್ನು ನೋಡಿದ ಜನ, ಕಂಡವರ ಮೇಲೆ ದಾಳಿ ಮಾಡುವುದು ಪ್ರಾಣಿಗಳ ಗುಣ. ಹಾಗೆಂದು ಅವುಗಳನ್ನು ಹೊಡೆಯಬಾರದು ಎಂದು ಥಳಿಸಿದ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೆಲವರು, ರಕ್ಷಣೆಗೆ ಬಂದವನಿಗೆ ನಾಯಿ ಒಳ್ಳೆಯ ಬಹುಮಾನ ಕೊಟ್ಟಿತು ಎಂದು ಟೀಕಿಸಿದರೆ, ಅದಕ್ಕೆ ಕೆಲವರು, ಆ ವ್ಯಕ್ತಿಯೇ ತನಗೆ ಹೊಡೆದದ್ದೆಂದು ತಪ್ಪಾಗಿ ಭಾವಿಸಿ ಅದು ಕಚ್ಚಿತು ಎಂದು ಸಮರ್ಥಿಸಿಕೊಂಡಿದ್ದಾರೆ.