ಸಾರಾಂಶ
ಆಪರೇಷನ್ ಸಿಂದೂರ ಸಮಯದಲ್ಲಿ ಭಾರತ ಹಾರಿಸಿದ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯು ಪರಮಾಣು ಸಿಡಿತಲೆ ಹೊಂದಿದೆಯೇ ಎಂದು ನಿರ್ಧರಿಸಲು ಪಾಕ್ ಸೇನೆಗೆ ಕೇವಲ 30 ರಿಂದ 45 ಸೆಕೆಂಡ್ ಕಾಲಾವಕಾಶ ಮಾತ್ರ ಇತ್ತು. ಅದು ಕ್ಲಿಷ್ಟಕರ ಸಮಯವಾಗಿತ್ತು - ರಾಣಾ ಸನಾವುಲ್ಲಾ
ನವದೆಹಲಿ: ಆಪರೇಷನ್ ಸಿಂದೂರ ಸಮಯದಲ್ಲಿ ನೂರ್ ಖಾನ್ ವಾಯುನೆಲೆ ಮೇಲೆ ಭಾರತ ಹಾರಿಸಿದ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯು ಪರಮಾಣು ಸಿಡಿತಲೆ ಹೊಂದಿದೆಯೇ ಎಂದು ನಿರ್ಧರಿಸಲು ಪಾಕ್ ಸೇನೆಗೆ ಕೇವಲ 30 ರಿಂದ 45 ಸೆಕೆಂಡ್ ಕಾಲಾವಕಾಶ ಮಾತ್ರ ಇತ್ತು. ಅದು ಕ್ಲಿಷ್ಟಕರ ಸಮಯವಾಗಿತ್ತು ಎಂದು ಪ್ರಧಾನಿ ಶೆಹಬಾಜ್ ಷರೀಫ್ ಅವರ ಸಲಹೆಗಾರ ರಾಣಾ ಸನಾವುಲ್ಲಾ ಹೇಳಿದ್ದಾರೆ.
ಈ ಮೂಲಕ ಪಾಕಿಸ್ತಾನ ಸೇನೆ ವೈರಿ ದಾಳಿಯ ನಿಖರತೆ ಅರಿಯುವಲ್ಲಿ ಹಿಂದಿದೆ ಎಂದು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
ಶುಕ್ರವಾರ ಮಾತನಾಡಿದ ಅವರು, ‘ಭಾರತ ಪರಮಾಣು ಸಿಡಿತಲೆ ಬಳಸದೆ ಒಳ್ಳೆಯದನ್ನು ಮಾಡಿತು ಎಂದು ನಾನು ಹೇಳುತ್ತಿಲ್ಲ, ಆದರೆ ಅದೇ ಸಮಯವನ್ನು ಪಾಕ್ ಜನರು ಇದು ಜಾಗತಿಕ ಪರಮಾಣು ಯುದ್ಧಕ್ಕೆ ನಾಂದಿ ಹಾಡಬಹುದು ಎಂದು ತಪ್ಪಾಗಿ ಅರ್ಥೈಸುವ ಸಾಧ್ಯತೆ ಇತ್ತು’ ಎಂದರು.
ಪಾಕ್‌ನ ಸಾಮಾಜಿಕ ಮಾಧ್ಯಮ ಖಾತೆಗಳ ಮೇಲೆ ಮತ್ತೆ ನಿರ್ಬಂಧ
ನವದೆಹಲಿ: ಪಾಕಿಸ್ತಾನದ ಪ್ರಭಾವಿಗಳು, ನಾಯಕರು, ತಾರೆಯರು, ಸುದ್ದಿ ಸಂಸ್ಥೆಗಳ ಸಾಮಾಜಿಕ ಮಾಧ್ಯಮ ಖಾತೆಗಳ ಮೇಲೆ ಮತ್ತೆ ನಿರ್ಬಂಧ ಹೇರಲಾಗಿದೆ. ಬುಧವಾರವಷ್ಟೇ ಈ ಖಾತೆಗಳು ಭಾರತೀಯರಿಗೆ ಲಭ್ಯವಾಗಿದ್ದವು. ಆದರೆ ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಮತ್ತೆ ನಿರ್ಬಂಧಿಸಲಾಗಿದೆ.‘ನಿರ್ಬಂಧ ತೆರವು ಉದ್ದೇಶಪೂರ್ವಕವಲ್ಲ. ತಾಂತ್ರಿಕ ದೋಷದಿಂದಾಗಿ ಹಾಗಾಗಿತ್ತು’ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ಪಹಲ್ಗಾಂ ನರಮೇಧದ ಬಳಿಕ ಪಾಕಿಸ್ತಾನಕ್ಕೆ ವಿವಿಧ ವಿಧಗಳಲ್ಲಿ ಏಟು ನೀಡಿದ್ದ ಭಾರತ, ಸುಳ್ಳು ಸುದ್ದಿ ಹರಡುವಿಕೆಯನ್ನು ನಿಲ್ಲಿಸಲು ಮತ್ತು ಪಾಕಿಗಳ ಪ್ರಭಾವ ದೇಶದ ಮೇಲೆ ಬೀಳದಂತೆ ತಡೆಯಲು ಕೆಲ ಜನಪ್ರಿಯ ವ್ಯಕ್ತಿಗಳ ಎಕ್ಸ್, ಇನ್ಸ್‌ಟಾಗ್ರಾಂ ಖಾತೆ, ಸುದ್ದಿ ಸಂಸ್ಥೆಗಳ ವೆಬ್‌ಸೈಟ್ ಮತ್ತು ಯೂಟ್ಯೂಬ್ ಚಾನಲ್‌ಗಳ ಮೇಲೆ ನಿರ್ಬಂಧ ಹೇರಿತ್ತು. ಇದನ್ನು ಇದ್ದಕ್ಕಿದ್ದಂತೆ ತೆಗೆದುಹಾಕಿದ ಕಾರಣ, ಭಾರತೀಯರಿಂದ ಟೀಕೆಗಳು ವ್ಯಕ್ತವಾಗಿದ್ದವು. ಪರಿಣಾಮವಾಗಿ ನಿರ್ಬಂಧ ಮರುಜಾರಿಯಾಗಿದೆ.
ಅಮೆರಿಕಕ್ಕೆ ಈಗ ಪಾಕ್ ವಾಯುಸೇನಾ ಮುಖ್ಯಸ್ಥ ಭೇಟಿ
ಇಸ್ಲಾಮಾಬಾದ್: ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಂ ಮುನೀರ್ ಬೆನ್ನಲ್ಲೇ ಇದೀಗ, ವಾಯು ಸೇನಾ ಮುಖ್ಯಸ್ಥ ಜಹೀರ್ ಅಹಮದ್ ಬಾಬರ್ ಸಿಧು ಅಮೆರಿಕ ಪ್ರವಾಸ ಆರಂಭಿಸಿದ್ದಾರೆ. ಅಲ್ಲಿನ ಸೇನೆ ಮತ್ತು ರಾಜಕೀಯ ನಾಯಕರ ಜತೆಗೆ ದ್ವಿಪಕ್ಷೀಯ ರಕ್ಷಣಾ ಒಪ್ಪಂದ ಸೇರಿ ವಿವಿಧ ವಿಚಾರಗಳ ಕುರಿತು ಸಮಾಲೋಚನೆ ನಡೆಸಿದ್ದಾರೆ. ಪಾಕ್ ಸೇನಾ ಪ್ರಮುಖರ ಈ ಅಮೆರಿಕ ಭೇಟಿ ತೀವ್ರ ಕುತೂಹಲ ಮೂಡಿಸಿದೆ.
ಪಾಕ್ ವಾಯು ಸೇನಾ ಮುಖ್ಯಸ್ಥರೊಬ್ಬರು ಇತ್ತೀಚಿನ ದಶಕಗಳಲ್ಲಿ ಅಮೆರಿಕಕ್ಕೆ ಕೈಗೊಂಡಿರುವ ಮೊದಲ ಅಧಿಕೃತ ಪ್ರವಾಸ ಇದಾಗಿದೆ. ಇದು ಪಾಕಿಸ್ತಾನ ಮತ್ತು ಅಮೆರಿಕ ನಡುವಿನ ಸೇನಾ ಸಂಬಂಧವೃದ್ಧಿಯ ಸ್ಪಷ್ಟ ಸಂಕೇತವಾಗಿದೆ. ಎರಡೂ ದೇಶಗಳ ನಡುವೆ ದ್ವಿಪಕ್ಷೀಯ ರಕ್ಷಣಾ ಸಹಕಾರ ಮತ್ತು ಹಿತಾಸಕ್ತಿಗಳ ವೃದ್ಧಿ ಈ ಭೇಟಿಯ ಸ್ಪಷ್ಟ ಉದ್ದೇಶವಾಗಿದೆ ಎಂದು ಪಾಕ್ ಸೇನೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.ಪೆಂಟಗನ್‌ನಲ್ಲಿ ಅಂತಾರಾಷ್ಟ್ರೀಯ ವ್ಯವಹಾರಗಳ ಕುರಿತ ಅಮೆರಿಕದ ಏರ್‌ಫೋರ್ಸ್‌ನ ಕಾರ್ಯದರ್ಶಿ ಕೆಲ್ಲಿ ಎಲ್. ಸೀಬಾಲ್ಟ್ ಮತ್ತು ಏರ್‌ಫೋರ್ಸ್ ಮುಖ್ಯಸ್ಥ ಡೇವಿಡ್ ಡಬ್ಲ್ಯು.ಎಲಾನ್ ಅವರನ್ನು ಸಿಧು ಭೇಟಿಯಾಗಿದ್ದು, ಈ ವೇಳೆ ದ್ವಿಪಕ್ಷೀಯ ಮಿಲಿಟರಿ ಸಹಕಾರ, ಜಂಟಿ ತರಬೇತಿ ಮತ್ತು ತಂತ್ರಜ್ಞಾನ ವರ್ಗಾವಣೆ ಸೇರಿ ಹಲವು ವಿಚಾರಗಳ ಕುರಿತಾಗಿ ಚರ್ಚೆ ನಡೆಯಿತು ಎಂದು ಹೇಳಲಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಾಕ್ ಸೇನಾ ಮುಖ್ಯಸ್ಥ ಮುನೀರ್ ಅವರಿಗೆ ಇತ್ತೀಚೆಗಷ್ಟೇ ಔತಣಕೂಟ ಏರ್ಪಡಿಸಿದ್ದರು.
ಕ್ಷಿಪಣಿ ಸೇರಿ ₹1 ಲಕ್ಷ ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ಅಸ್ತು
ನವದೆಹಲಿ: ಕ್ಷಿಪಣಿ ಸೇರಿದಂತೆ ಸುಮಾರು 1.05 ಲಕ್ಷ ಕೋಟಿ ರು. ಮೌಲ್ಯದ ಶಸ್ತ್ರಾಸ್ತ್ರಗಳ ಖರೀದಿಗೆ ರಕ್ಷಣಾ ಸಚಿವಾಲಯ ಗುರುವಾರ ಅನುಮೋದನೆ ನೀಡಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನೇತೃತ್ವದ ಮಂಡಳಿ ಇದಕ್ಕೆ ಒಪ್ಪಿಗೆ ನೀಡಿದೆ.
ಇದರಡಿಯಲ್ಲಿ, ಶಸ್ತ್ರಸಜ್ಜಿತ ವಾಹನಗಳನ್ನು ಕೊಂಡೊಯ್ದು ರಿಪೇರಿ ಮಾಡುವ ಸೇನಾ ವಾಹನ, ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆ, 3 ಪಡೆಗಳ ಸಂಯೋಜಿತ ದಾಸ್ತಾನು ನಿರ್ವಹಣಾ ವ್ಯವಸ್ಥೆ ಮತ್ತು ನೆಲದಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿಗಳ ಖರೀದಿಗೆ ಡಿಎಸಿ ಅನುಮೋದನೆ ನೀಡಿದೆ. ಇದು, ಸಶಸ್ತ್ರ ಪಡೆಗಳ ಚಲನಶೀಲತೆ, ಪರಿಣಾಮಕಾರಿ ವಾಯು ರಕ್ಷಣೆ, ಉತ್ತಮ ಪೂರೈಕೆ ಸರಪಳಿ ನಿರ್ವಹಣೆ ಮತ್ತು ಕಾರ್ಯಾಚರಣೆಯ ಸನ್ನದ್ಧತೆಯನ್ನು ಹೆಚ್ಚಿಸಲಿದೆ.ಇವುಗಳೊಂದಿಗೆ, ನೀರಿನಾಳದಲ್ಲಿರುವ ಸ್ಫೋಟಕ ಪತ್ತೆ ಮಾಡುವ ಹಡಗುಗಳು, ಕ್ಷಿಪ್ರ ಗನ್ ಮೌಂಟ್ ಮತ್ತು ಸಬ್ಮರ್ಸಿಬಲ್ ಸ್ವಾಯತ್ತ ಹಡಗುಗಳ ಖರೀದಿಗೂ ಅನುಮೋದನೆಗಳನ್ನು ನೀಡಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.