ಸಾರಾಂಶ
ಪಹಲ್ಗಾಂ ನರಮೇಧ ವಿಷಯದಲ್ಲಿ ಪಾಕಿಸ್ತಾನದ ವಿರುದ್ಧ ಕೆಂಡಕಾರುತ್ತಿರುವ ಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ, ‘ನಾವು ಪಿಒಕೆಗೆ ಹೋಗಿ ಅವರನ್ನು ಹೊಡೆಯುತ್ತೇವೆ ಎನ್ನುವ ಬದಲು ಅಲ್ಲಿಗೆ ಹೋಗಿ ಆ ಸ್ಥಳ ವಶಪಡಿಸಿಕೊಂಡು ಅಲ್ಲೇ ಇರಬೇಕು’ ಎಂದು ಸಲಹೆ ನೀಡಿದ್ದಾರೆ.
ನವದೆಹಲಿ : ಪಹಲ್ಗಾಂ ನರಮೇಧ ವಿಷಯದಲ್ಲಿ ಪಾಕಿಸ್ತಾನದ ವಿರುದ್ಧ ಕೆಂಡಕಾರುತ್ತಿರುವ ಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ, ‘ನಾವು ಪಿಒಕೆಗೆ ಹೋಗಿ ಅವರನ್ನು ಹೊಡೆಯುತ್ತೇವೆ ಎನ್ನುವ ಬದಲು ಅಲ್ಲಿಗೆ ಹೋಗಿ ಆ ಸ್ಥಳ ವಶಪಡಿಸಿಕೊಂಡು ಅಲ್ಲೇ ಇರಬೇಕು’ ಎಂದು ಸಲಹೆ ನೀಡಿದ್ದಾರೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಒವೈಸಿ, ‘ಬಿಜೆಪಿಯವರು ಪ್ರತಿಸಲ ಮನೆಗೆ ನುಗ್ಗಿ ಹೊಡೆಯುತ್ತೇವೆ ಎನ್ನುತ್ತಾರೆ. ಈಗಾಗಲೇ ಪಾಕ್ ಪಡೆಗಳು ತಮ್ಮ ಪೋಸ್ಟ್‌ಗಳನ್ನು ಖಾಲಿ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ಆ ಪೋಸ್ಟ್ ವಶಪಡಿಸಿಕೊಳ್ಳಬೇಕು. ಜೊತೆಗೆ ಅಲ್ಲಿಯೇ ಇರಬೇಕು. ಪಿಒಕೆ ನಮ್ಮದು ಎಂದು ಸಂಸತ್ತಿನಲ್ಲಿ ನಿರ್ಣಯ ಅಂಗೀಕಾರವಾಗಿದೆ. ಹೀಗಾಗಿ ಪಾಕ್ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದರು.
ಬೈಸರನ್ ಜೊತೆಗೆ ಇನ್ನೂ ಮೂರು ಪ್ರದೇಶಗಳ ಪರಿಶೀಲಿಸಿದ್ದ ಉಗ್ರರು
ನವದೆಹಲಿ: ಪಹಲ್ಗಾಂನ ಬೈಸರನ್ ಪ್ರದೇಶದಲ್ಲಿ ದಾಳಿಗೂ ಮುನ್ನ ಭಯೋತ್ಪಾದಕರು 2 ದಿನಗಳ ಹಿಂದೆ ಬೈಸರನ್ ಕಣಿವೆ ಜೊತೆಗೆ ಇನ್ನು ಮೂರು ಸ್ಥಳಗಳ ದಾಳಿಗೆ ಸಂಚು ರೂಪಿಸಿದ್ದರು. ಆದರೆ ಅದು ವಿಫಲವಾಗಿತ್ತು ಎನ್ನುವುದು ಎನ್‌ಐಎ ತನಿಖೆಯಲ್ಲಿ ಬಯಲಾಗಿದೆ.
ಪಹಲ್ಗಾಂ ದಾಳಿಯ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಕೈಗೊಂಡಿದ್ದು, ಈ ವೇಳೆ ಹಲವು ಸ್ಫೋಟಕ ಸತ್ಯಗಳು ಬಯಲಾಗಿವೆ. ಮೂಲಗಳ ಪ್ರಕಾರ, ಭಯೋತ್ಪಾದಕರು ಬೈಸರನ್ ಕಣಿವೆ ಜೊತೆಗೆ ಅರು ಕಣಿವೆ, ಅಮ್ಯೂಸ್‌ಮೆಂಟ್ ಪಾರ್ಕ್ ಮತ್ತು ಬೇತಾಬ್ ಕಣಿವೆಯಲ್ಲಿಯೂ ದಾಳಿಗೆ ಸಂಚು ರೂಪಿಸಿದ್ದರು. ಆದರೆ ಆ ಸ್ಥಳಗಳಲ್ಲಿ ಭದ್ರತೆಯಿದ್ದ ಕಾರಣಕ್ಕೆ ಅವರ ಪ್ಲ್ಯಾನ್ ವಿಫಲಗೊಂಡಿತ್ತು. ಜೊತೆಗೆ ದಾಳಿಗೂ ಎರಡು ದಿನಗಳ ಮೊದಲೇ ಭಯೋತ್ಪಾದಕರು ಬೈಸರನ್ ಕಣಿವೆಯಲ್ಲಿದ್ದರು. ಸ್ಥಳ್‍ಗಳ ಹುಡುಕಾಟಕ್ಕೆ ಇವರಿಗೆ ನಾಲ್ವರು ಭೂಗತ ಕಾರ್ಮಿಕರು ನೆರವು ನೀಡಿದ್ದರು ಎನ್ನುವುದು ಬಯಲಾಗಿದೆ.
ತನಿಖೆ ಭಾಗವಾಗಿ ಇದುವರೆಗೆ 20 ಭೂಗತ ಕಾರ್ಮಿಕರನ್ನು ಪತ್ತೆಹಚ್ಚಿದ್ದು ಕೆಲವರನ್ನು ಬಂಧಿಸಲಾಗಿದೆ. ಜೊತೆಗೆ 186 ಕಾರ್ಮಿಕರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ.
ಸೋನ್ಮಾರ್ಗ್ ಸುರಂಗ ಹತ್ಯೆಯಲ್ಲೂ ಪಹಲ್ಗಾಂ ಉಗ್ರರು
ನವದೆಹಲಿ: ಪಹಲ್ಗಾಂನಲ್ಲಿ 26 ಪ್ರವಾಸಿಗರ ನರಮೇಧಕ್ಕೆ ಕಾರಣವಾದ ಭಯೋತ್ಪಾದಕರ ಅಟ್ಟಹಾಸದ ಮತ್ತೊಂದು ಸತ್ಯ ಹೊರಬಿದ್ದಿದೆ. 2024ರಲ್ಲಿ ಝಡ್ ಮೋರ್ಹ್ ಸುರಂಗ ದಾಳಿಯಲ್ಲಿ 7 ಜನರ ಹತ್ಯೆ ನಡೆದಿದ್ದ ದಾಳಿಯಲ್ಲಿ ಪಹಲ್ಗಾಂ ನರಮೇಧಕ್ಕೆ ಕಾರಣವಾಗಿರುವ ಹಲವು ಉಗ್ರರು ಭಾಗಿಯಾಗಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.
2024ರ ಅಕ್ಟೋಬರ್‌ನಲ್ಲಿ ಸೋನ್ಮಾರ್ಗ್ ಝಡ್ ಮೋರ್ಹ್ ಸುರಂಗ ಯೋಜನೆಯ ಬಳಿ ಖಾಸಗಿ ಕಂಪನಿಯ ಕಾರ್ಮಿಕರು ಕೆಲಸದಲ್ಲಿ ತೊಡಗಿದ್ದಾಗ ದಾಳಿ ನಡೆದಿತ್ತು. ಇದರಲ್ಲಿ 6 ಕಾರ್ಮಿಕರು ಮತ್ತು ಓರ್ವ ವೈದ್ಯ ಸಾವನ್ನಪ್ಪಿದ್ದರು. ದಾಳಿ ಹೊಣೆಯನ್ನುಲಷ್ಕರ್- ಎ- ತೈಬಾ(ಎಲ್‌ಇಟಿ) ಹೊತ್ತಿತ್ತು. ಇದೀಗ ಪಹಲ್ಗಾಂ ದಾಳಿಯ ಹಿಂದೆಯೂ ಇದೆ ಸಂಘಟನೆಯ ಕೈವಾಡವಿದೆ. ಮಾತ್ರವಲ್ಲದೇ ಆ ದಾಳಿಯಲ್ಲಿ ಭಾಗಿಯಾಗಿದ್ದ ಉಗ್ರರು ಈ ದಾಳಿಯಲ್ಲಿಯೂ ಭಾಗಿಯಾಗಿದ್ದಾರೆ.
ಪಹಲ್ಗಾಂ ದಾಳಿಯಲ್ಲಿ ಭಾಗಿಯಾಗಿರುವ ಉಗ್ರ ಪಾಕಿಸ್ತಾನ ಸೇನೆಯ ವಿಶೇಷ ಪಡೆಗಳ ಮಾಜಿ ಸೈನಿಕ ಹಾಶಿಮ್ ಮೂಸಾ ಅಲಿಯಾಸ್ ಸುಲೇಮಾನ್ ಕೈವಾಡ ಕೂಡ ಇದೆ ಎನ್ನುವುದನ್ನು ಗುಪ್ತಚರ ಇಲಾಖೆ ದೃಢಪಡಿಸಿದೆ.
ಭಾರತವನ್ನು ಕಂಡ್ರೆ ಪಾಕ್‌ಗೆ ಭಯ:
ನವದೆಹಲಿ: 26 ಮಂದಿಯನ್ನು ಬಲಿಪಡೆದ ಪಹಲ್ಗಾಂ ಉಗ್ರ ದಾಳಿಯ ಹಿಂದೆ ಪಾಕಿಸ್ತಾನ ತನ್ನದೇನೂ ಪಾತ್ರ ಇಲ್ಲ ಎಂದು ಹೇಳುತ್ತಿದ್ದರೂ, ನೆರೆಯ ದೇಶವು ಉಗ್ರರನ್ನು ಛೂಬಿಟ್ಟು ಭಾರತದ ಜತೆಗೆ ಛದ್ಮಸಮರಕ್ಕಿಳಿಯುವ ಸಾಧ್ಯತೆಯನ್ನು ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ 30 ವರ್ಷಗಳ ಹಿಂದೆಯೇ ಅಂದಾಜಿಸಿತ್ತು.
ಇದಕ್ಕೆಲ್ಲ ಕಾರಣ ಭಾರತ ಕುರಿತು ಪಾಕಿಸ್ತಾನಕ್ಕಿರುವ ಆತಂಕ. ಈ ಕಾರಣಕ್ಕೆ ಮೂವತ್ತು ವರ್ಷಗಳ ಹಿಂದೆಯೇ ಪಾಕಿಸ್ತಾನ ಉಗ್ರರನ್ನು ಬಳಸಿಕೊಂಡು ಛದ್ಮ ಸಮರದ ಹಾದಿ ಹಿಡಿಯಲು ಆಸಕ್ತಿ ತೋರಿತ್ತು. ಭಾರತದ ವಿರುದ್ಧದ ಅಸ್ತ್ರವನ್ನಾಗಿ ಬಳಸಲೆಂದೇ ಇಸ್ಲಾಂಗೆ ಪ್ರೋತ್ಸಾಹ ನೀಡುವ ಕೆಲಸವನ್ನೂ ಮಾಡುತ್ತಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
1993ರಲ್ಲಿ ಅಂದರೆ ಬಾಬರಿ ಮಸೀದಿ ಕೆಡವಿದ ಬಳಿಕ ಸಿಐಎಯ ಅಧಿಕಾರಿ ಬ್ರೂಸ್ ರಿಡೆಲ್ ಅವರು ಪಾಕಿಸ್ತಾನದ ಕುರಿತಾಗಿ ರಾಷ್ಟ್ರೀಯ ಗುಪ್ತಚರ ಅಂದಾಜು ವರದಿ ಸಿದ್ಧಪಡಿಸಿದ್ದರು. ಇದರಲ್ಲಿ ಭಾರತದ ಕುರಿತ ಪಾಕಿಸ್ತಾನದ ಆತಂಕ, ಭಾರತವನ್ನು ಮಣಿಸಲು ಅದು ಏನೇನು ಮಾಡಬಹುದು ಎಂಬ ಮುನ್ನೋಟವನ್ನು 30 ವರ್ಷಗಳ ಹಿಂದೆಯೇ ನೀಡಿದ್ದರು.
ಭಾರತ ಕಂಡ್ರೆ ಭಯ:
ಪಾಕಿಸ್ತಾನಕ್ಕೆ ಭಾರತವನ್ನು ಕಂಡ್ರೆ ಭಯ. ಈ ಭಯ ಕೇವಲ ಆರ್ಥಿಕ ಮತ್ತು ಮಿಲಿಟರಿ ವಿಚಾರಕ್ಕಷ್ಟೇ ಸೀಮಿತವಾಗಿರಲಿಲ್ಲ, ಬದಲಾಗಿ ತನ್ನ ಅಸ್ವಿತ್ವಕ್ಕೇ ಅಪಾಯ ಬರಬಹುದೆಂಬ ಆತಂಕ ಪಾಕಿಸ್ತಾನಕ್ಕೆ ಹಿಂದಿನಿಂದಲೂ ಇತ್ತು. ಒಂದು ವೇಳೆ ಎರಡೂ ದೇಶಗಳ ನಡುವೆ ಯುದ್ಧ ಸಂಭವಿಸಿದರೆ ಅದು ಕಾಶ್ಮೀರದ ವಿಚಾರವಾಗಿಯೇ ನಡೆಯಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.
ಇದೇ ವೇಳೆ ಎರಡೂ ದೇಶಗಳ ನಡುವಿನ ಯುದ್ಧದ ಸಾಧ್ಯತೆ ಶೇ.20ರಷ್ಟೇ ಇದೆ ಎಂದು ಹೇಳಿರುವ ವರದಿ, ಭಾರೀ ಭಯೋತ್ಪಾದನಾ ದಾಳಿ, ತಪ್ಪು ಅಂದಾಜಿಸಿದ ಮಿಲಿಟರಿ ಕ್ರಮ ಅಥವಾ ದಿಢೀರ್ ಕೋಮು ಗಲಭೆಗಳು ಎರಡೂ ದೇಶಗಳನ್ನು ಪರಸ್ಪರ ಯುದ್ಧಭೂಮಿಗೆ ತಂದು ನಿಲ್ಲಿಸಬಹುದು ಎಂದು ಹೇಳಿದೆ.
ಹಾಗೆ ನೋಡಿದರೆ ಎರಡೂ ದೇಶಗಳಿಗೆ ಯುದ್ಧ ಬೇಕಿಲ್ಲ. ಆದರೆ ಭಾರತದ ಬೆಳವಣಿಗೆಯಿಂದ ಪಾಕ್‌ನ ನಿದ್ದೆ ಹಾಳಾಗಿತ್ತು. ಈ ಆತಂಕದಲ್ಲೇ ಅದು ಕಾಶ್ಮೀರದಲ್ಲಿ ಉಗ್ರರ ಮೂಲಕ ಛದ್ಮ ಸಮರಕ್ಕೆ ಹೊರಳಿತ್ತು. ಜತೆಗೆ ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ಭಾರತ ವಿರೋಧಿ ಉಗ್ರರಿಗೆ ಪಾಕಿಸ್ತಾನ ತರಬೇತಿ ಮತ್ತು ಶಸ್ತ್ರಾಸ್ತ್ರ ನೀಡುವ ಯೋಜನೆಯ ಕುರಿತೂ ಸುಳಿವು ನೀಡಿತ್ತು.
ಒಂದು ವೇಳೆ ದೇಶದ ಆರ್ಥಿಕತೆ ಪತನಗೊಂಡರೆ, ಮಿಲಿಟರಿ ನಿರಂಕುಶವಾದಿ ಅಧಿಕಾರಕ್ಕೆ ಬಂದರೆ ಪಾಕಿಸ್ತಾನ ಉಗ್ರರ ಜತೆ ಸೇರಿಕೊಂಡು ಭಾರತವನ್ನು ಕೆರಳಿಸುವ ಮೂಲಕ ಜನರ ಗಮನ ಬೇರೆಡೆ ಸೆಳೆಯಲು ಯತ್ನಿಸಬಹುದು. ಅಲ್ಲದೆ, ಭಾರತದ ರಾಜಕೀಯವು ಧಾರ್ಮಿಕ ಧ್ರುವೀಕರಣಕ್ಕೆ ಅವಕಾಶ ಮಾಡಿಕೊಟ್ಟರೆ ಕೋಮುದಳ್ಳುರಿಗೆ ಅವಕಾಶ ಮಾಡಿಕೊಡಬಹುದು. ಇದು ಭಾರತದ ಆಂತರಿಕ ವಿಚಾರದಲ್ಲಿ ಮಧ್ಯಪ್ರವೇಶಿಸಲು ಪಾಕಿಸ್ತಾನಕ್ಕೆ ಸಮರ್ಥನೆಯೂ ಕೊಡಬಹುದು ಎಂದು ವರದಿ ಎಚ್ಚರಿಸಿದೆ.