ಸಾರಾಂಶ
ಪಿಟಿಐ ನವದೆಹಲಿ
ಲೋಕಸಭೆ ಚುನಾವಣೆ ಘೋಷಣೆಗೆ ದಿನಗಣನೆ ಆರಂಭವಾಗಿರುವ ಸಂದರ್ಭದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಅಡುಗೆ ಅನಿಲ ಸಿಲಿಂಡರ್ ದರವನ್ನು 100 ರು. ಕಡಿತಗೊಳಿಸಿದ್ದಾರೆ.
ಮಹಿಳಾ ದಿನ ಹಾಗೂ ಶಿವರಾತ್ರಿ ಸಂಭ್ರಮದ ದಿನವಾದ ಶುಕ್ರವಾರದಂದೇ ಪ್ರಧಾನಿ ಈ ಘೋಷಣೆ ಮಾಡಿದ್ದಾರೆ. ಕೇಂದ್ರ ಸರ್ಕಾರದ ದರ ಕಡಿತ ನಿರ್ಧಾರದಿಂದಾಗಿ 14.2 ಕೆ.ಜಿ. ತೂಕದ ಅಡುಗೆ ಅನಿಲ ಸಿಲಿಂಡರ್ ಇನ್ನು ಮುಂದೆ 805 ರು.ಗೆ ಲಭ್ಯವಾಗಲಿದೆ.
ಉಜ್ವಲಾ ಫಲಾನುಭವಿಗಳಿಗೆ ಈಗಾಗಲೇ 300 ರು. ಸಬ್ಸಿಡಿ ಇರುವ ಕಾರಣ ಅವರಿಗೆ 505 ರು.ಗೇ ಸಿಲಿಂಡರ್ ದೊರೆಯಲಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಹಾಗೂ ಅನಿಲ ಬೆಲೆ ಇಳಿಕೆಯಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದರ ಕಡಿತ ನಿರ್ಧಾರವನ್ನು ಪ್ರಕಟಿಸಿದೆ ಎಂದು ಹೇಳಲಾಗಿದೆ.
ಆದರೆ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಕಳೆದ 23 ತಿಂಗಳಿನಿಂದ ಈ ಎರಡೂ ಇಂಧನಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.
‘ಇವತ್ತು ಮಹಿಳಾ ದಿನವಾಗಿರುವ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ಎಲ್‌ಪಿಜಿ ಸಿಲಿಂಡರ್ ದರವನ್ನು 100 ರು.ನಷ್ಟು ಕಡಿತ ಮಾಡಲು ನಿರ್ಧರಿಸಿದೆ. ಇದರಿಂದ ಕೋಟ್ಯಂತರ ಕುಟುಂಬಗಳ ಆರ್ಥಿಕ ಹೊರೆ ತಗ್ಗಲಿದೆ.ವಿಶೇಷವಾಗಿ ನಾರಿಶಕ್ತಿಗೆ ಅನುಕೂಲವಾಗಲಿದೆ.
ಅಡುಗೆ ಅನಿಲವನ್ನು ಮತ್ತಷ್ಟು ಕೈಗೆಟಕುವ ದರದಲ್ಲಿ ಸಿಗುವಂತೆ ಮಾಡುವ ಮೂಲಕ ಕುಟುಂಬಗಳ ಏಳ್ಗೆಯನ್ನು ಬೆಂಬಲಿಸುವ ಹಾಗೂ ಆರೋಗ್ಯವಂತ ಸಮಾಜದ ಗುರಿಯನ್ನು ಹೊಂದಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ.