ಸಾರಾಂಶ
ಶ್ರೀನಗರ: ಪಹಲ್ಗಾಂ ದಾಳಿ ಬಳಿಕ ಪ್ರಧಾನಿ ನರೇಂದ್ರ ಮೋದಿ ಕಾಣೆಯಾಗಿದ್ದಾರೆ ಎಂಬ ಕಾಂಗ್ರೆಸ್ ಪೋಸ್ಟರ್ ಬಗ್ಗೆ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪೋಸ್ಟರ್ ಬಗ್ಗೆ ಪ್ರತಿಕ್ರಿಯಿಸಿದ ಫಾರೂಕ್ ‘ಅವರು ಎಲ್ಲಿ ಕಾಣೆಯಾಗಿದ್ದಾರೆ? ಅವರು ದೆಹಲಿಯಲ್ಲಿದ್ದಾರೆ ಎನ್ನುವುದು ನನಗೆ ತಿಳಿದಿದೆ’ ಎಂದಿದ್ದಾರೆ. ಮುಂದುವರೆದಂತೆ ‘ಇದು ದೇಶದ ಏಕತೆಯ ವಿಚಾರ. ಈ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ನಾವೂ ಸಂಪೂರ್ಣವಾಗಿ ಬೆಂಬಲಿಸುತ್ತೇವೆ. ನಂತರ ಅವರು ನಮ್ಮನ್ನು ಪ್ರಶ್ನಿಸಬಾರದು. ಅವರಿಗೆ ಅಗತ್ಯವಿರುವ ಕೆಲಸ ಮಾಡಲು ಬಿಡಬೇಕು’ ಎಂದಿದ್ದಾರೆ.
ಉಗ್ರ ಹಫೀಜ್ ಹತ್ಯೆ: ಲಾರೆನ್ಸ್ ಬಿಷ್ಣೋಯಿ ಎಚ್ಚರಿಕೆ
ನವದೆಹಲಿ: ಪಹಲ್ಗಾಂ ಉಗ್ರ ದಾಳಿಗೆ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಬೆಂಬಲಿಗರ ಗುಂಪೊಂದು ಸಂತಾಪ ಸೂಚಿಸಿದ್ದು, 26/11 ದಾಳಿಯ ರೂವಾರಿ ಉಗ್ರ ಹಫೀಜ್ ಸೈಯದ್‌ನನ್ನು ಕೊಲ್ಲುವುದಾಗಿ ಹೇಳಿಕೊಂಡಿದೆ. ಜೈಶ್ರೀರಾಮ್ ಎಂಬ ಫೇಸ್ಬುಕ್ ಖಾತೆಯಲ್ಲಿ ಬೆದರಿಕೆ ಹಾಕಲಾಗಿದೆ.
‘ನೀವು ಭಾರತಕ್ಕೆ ಬಂದು ಅಮಾಯಕರ ಜೀವವನ್ನು ಬಲಿ ಪಡೆದಿದ್ದೀರಿ. ಇದಕ್ಕೆ ಪ್ರತಿಯಾಗಿ ನಾವು ಪಾಕಿಸ್ತಾನಕ್ಕೆ ಬಂದು 1 ಲಕ್ಷ ಜನರಿಗೆ ಸಮನಾದವನನ್ನು ಕೊಂದು ಹಾಕುತ್ತೇವೆ’ ಎಂದು ಹಫೀಜ್ ಚಿತ್ರದೊಂದಿಗೆ ಹಂಚಿಕೊಳ್ಳಲಾಗಿದೆ. ಇದರ ಜೊತೆಗೆ ಲಾರೆನ್ಸ್ ಬಿಷ್ಣೋಯಿ ಗುಂಪು, ಜಿತಂದರ್ ಜೋಗಿ, ಹಶೀಂ ಬಾಬಾ, ಗೋಲ್ಡಿ ಬ್ರಾರ್, ಕಾಲಾ ರಾಣಾ, ರೋಹಿತ್ ಗೊಡಾರಾ ಎಂಬುವರ ಹೆಸರುಗಳನ್ನು ಹಾಕಲಾಗಿದೆ.