ಅಮೆರಿಕದೊಂದಿಗೆ ವ್ಯಾಪಾರ ಸಂಬಂಧ : ಚೀನಾ ಮೇಲೆ ಅಮೆರಿಕದ 90 ದಿನ ತೆರಿಗೆ ತಡೆ ಏಕಿಲ್ಲ?

| N/A | Published : Apr 11 2025, 12:34 AM IST / Updated: Apr 11 2025, 04:43 AM IST

ಸಾರಾಂಶ

ಅಮೆರಿಕದೊಂದಿಗೆ ವ್ಯಾಪಾರ ಸಂಬಂಧ ಹೊಂದಿರುವ ಎಲ್ಲಾ ದೇಶಗಳ ಮೇಲೆ ತೆರಿಗೆ ಹೇರಿದ್ದ ಟ್ರಂಪ್‌, ಅದು ಜಾರಿಗೆ ಬರಬೇಕಿದ್ದ ದಿನವೇ ತೆರಿಗೆಯನ್ನು 90 ದಿನಗಳ ಮಟ್ಟಿಗೆ ತಡೆಹಿಡಿದು 75 ದೇಶಗಳು ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ. ಆದರೆ ಚೀನಾಗೆ ಮಾತ್ರ ಈ ವಿನಾಯಿತಿ ನೀಡದೆ, ಶೇ.125 ತೆರಿಗೆ ವಿಧಿಸಲಾಗಿದೆ.

ವಾಷಿಂಗ್ಟನ್‌: ಅಮೆರಿಕದೊಂದಿಗೆ ವ್ಯಾಪಾರ ಸಂಬಂಧ ಹೊಂದಿರುವ ಎಲ್ಲಾ ದೇಶಗಳ ಮೇಲೆ ತೆರಿಗೆ ಹೇರಿದ್ದ ಟ್ರಂಪ್‌, ಅದು ಜಾರಿಗೆ ಬರಬೇಕಿದ್ದ ದಿನವೇ ತೆರಿಗೆಯನ್ನು 90 ದಿನಗಳ ಮಟ್ಟಿಗೆ ತಡೆಹಿಡಿದು 75 ದೇಶಗಳು ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ. ಆದರೆ ಚೀನಾಗೆ ಮಾತ್ರ ಈ ವಿನಾಯಿತಿ ನೀಡದೆ, ಶೇ.125 ತೆರಿಗೆ ವಿಧಿಸಲಾಗಿದೆ.  

ಈ ಬಗ್ಗೆ ತಮ್ಮ ಟ್ರುಥ್‌ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿರುವ ಟ್ರಂಪ್‌, ‘ಚೀನಾ ಜಾಗತಿಕ ಮಾರುಕಟ್ಟೆಗೆ ಅಗೌರವ ತೋರಿದೆ. ಅವರು ಪ್ರತಿತೆರಿಗೆಯ ಸೇಡು ತೀರಿಸಿಕೊಳ್ಳಲು ನಮ್ಮ ಮೇಲೆ ಶೇ.84ರಷ್ಟು ತೆರಿಗೆ ವಿಧಿಸಿದರು. ಮುಂದಿನ ದಿನಗಳಲ್ಲಿ, ಅಮೆರಿಕ ಹಾಗೂ ಅನ್ಯ ದೇಶಗಳನ್ನು ಆರ್ಥಿಕವಾಗಿ ಶೋಷಿಸುವುದು ಸ್ವೀಕಾರಾರ್ಹವಲ್ಲ ಎಂಬುದು ಚೀನಾಗೆ ಅರಿವಾದೀತು’ ಎಂದಿದ್ದಾರೆ. 

ಚೀನಾ ಮೇಲಿನ ತೆರಿಗೆ ಹೆಚ್ಚಳಕ್ಕೆ, ಅದನ್ನು ಆರ್ಥಿಕವಾಗಿ ಪ್ರತ್ಯೇಕಿಸುವುದರ ಜೊತೆಗೆ, ಕೆಲ ವೈಯಕ್ತಿಕ ಹಾಗೂ ವ್ಯೂಹಾತ್ಮಕ ಕಾರಣಗಳೂ ಇವೆ. ಅಂತೆಯೇ, ಚೀನಾ ಅಮೆರಿಕದಲ್ಲಿ ತನ್ನ ಕಡಿಮೆ ಬೆಲೆಯ ವಸ್ತುಗಳನ್ನು ರಾಶಿ ಹಾಕುವುದು, ದೇಶದ ಬೌದ್ಧಿಕ ಆಸ್ತಿಯನ್ನು ದೋಚುವುದು ಟ್ರಂಪ್‌ಗೆ ಹಿಡಿಸದು. ಇದರಿಂದ ಅಮೆರಿಕದ ಕಂಪನಿಗಳನ್ನು ರಕ್ಷಿಸುವುದು ಮತ್ತು ಮಾತುಕತೆಗೆ ಬರುವಂತೆ ಚೀನಾವನ್ನು ಒತ್ತಾಯಿಸುವುದೂ ತೆರಿಗೆ ಹೆಚ್ಚಳದ ಉದ್ದೇಶವಾಗಿದೆ.

ಬ್ಲ್ಯಾಕ್‌ಮೇಲ್‌ಗೆ ನಾವು ಹೆದರಲ್ಲ: ಅಮೆರಿಕಕ್ಕೆ ಚೀನಾ ತಿರುಗೇಟು 

ತೈಪೆ: ತನ್ನ ಉತ್ಪನ್ನಗಳ ಮೇಲೆ ಶೇ.125ರಷ್ಟು ತೆರಿಗೆ ಹಾಕಿರುವ ಅಮೆರಿಕದ ಕ್ರಮದ ಬಗ್ಗೆ ಬಗ್ಗೆ ಕಿಡಿಕಾರಿರುವ ಚೀನಾ, ಇಂಥ ಬೆದರಿಕೆ, ಬ್ಲ್ಯಾಕ್‌ಮೇಲ್‌ ತಂತ್ರಗಳಿಗೆಲ್ಲಾ ನಾವು ಹೆದರುವುದಿಲ್ಲ. ಅಮೆರಿಕದ ಜೊತೆಗೆ ಮಾತುಕತೆಗೆ ನಾವು ಸಿದ್ಧ. ಆದರೆ ಇಂಥ ಮಾತುಕತೆ ಸಮಾನ ನೆಲೆಯಲ್ಲಿ ಮತ್ತು ಪರಸ್ಪರ ಗೌರವದ ರೀತಿಯಲ್ಲಿ ರೀತಿಯಲ್ಲಿ ಇರಬೇಕು. 

ಅಮೆರಿಕ ವ್ಯಾಪಾರ ಯುದ್ಧ ನಡೆಸಲು ನಿರ್ಧರಿಸಿದರೆ, ಚೀನಾ ಕೊನೆಯವರೆಗೂ ಹೋರಾಡುತ್ತದೆ ಎಂದು ಹೇಳಿದೆ.

ಇನ್ನೊಂದೆಡೆ ಅಮೆರಿಕದ ವಿರುದ್ಧ ಜಂಟಿ ಹೋರಾಟ ಸಂಘಟಿಸುವ ಭಾಗವಾಗಿ ಚೀನಾ ಅನ್ಯ ದೇಶಗಳೊಂದಿಗೆ ಮಾತುಕತೆಗೆ ಮುಂದಾಗಿದೆ. ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ಅವರೊಂದಿಗೆ ಪ್ರಧಾನಿ ಲಿ ಕಿಯಾಂಗ್‌ ದೂರವಾಣಿಯಲ್ಲಿ ಮಾತನಾಡಿದ್ದು, ‘ಚೀನಾ ಮತ್ತು ಯುರೋಪಿಯನ್ ಒಕ್ಕೂಟದ ನಾಯಕರ ನಡುವಿನ ಒಮ್ಮತದ ನಿರ್ಧಾರಗಳನ್ನು, ಸಂವಹನ ಮತ್ತು ವಿನಿಮಯವನ್ನು ಬಲಪಡಿಸಲು, ವ್ಯಾಪಾರ, ಹೂಡಿಕೆ ಮತ್ತು ಕೈಗಾರಿಕಾ ಸಹಕಾರವನ್ನು ಗಾಢವಾಗಿಸಲು ಯುರೋಪಿಯನ್ ಒಕ್ಕೂಟದೊಂದಿಗೆ ಕೆಲಸ ಮಾಡಲು ಚೀನಾ ಸಿದ್ಧವಾಗಿದೆ’ ಎಂದಿರುವುದಾಗಿ ವರದಿಯಾಗಿದೆ. ಬುಧವಾರವಷ್ಟೇ, ‘ಭಾರತ ಮತ್ತು ಚೀನಾ ಟ್ರಂಪ್‌ ವಿರುದ್ಧ ನಿಲ್ಲಬೇಕು’ ಎಂದು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಆಗ್ರಹಿಸಿದ್ದರು.