ಡಿ.1ರಿಂದ 19ರವೆರೆಗೆ ಸಂಸತ್ತಿನ ಚಳಿಗಾಲ ಅಧಿವೇಶನ

| Published : Nov 09 2025, 02:15 AM IST

ಡಿ.1ರಿಂದ 19ರವೆರೆಗೆ ಸಂಸತ್ತಿನ ಚಳಿಗಾಲ ಅಧಿವೇಶನ
Share this Article
  • FB
  • TW
  • Linkdin
  • Email

ಸಾರಾಂಶ

ಸಂಸತ್ತಿನ ಚಳಿಗಾಲದ ಅಧಿವೇಶನ ಡಿಸೆಂಬರ್ 1 ರಿಂದ 19 ರವರೆಗೆ ನಡೆಯಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಶನಿವಾರ ತಿಳಿಸಿದ್ದಾರೆ.

ಮತಪಟ್ಟಿ ಪರಿಷ್ಕರಣೆ, ಟ್ರಂಪ್‌ ತೆರಿಗೆ ಸದ್ದು ಸಂಭವ

ಪಿಟಿಐ ನವದೆಜಲಿ

ಸಂಸತ್ತಿನ ಚಳಿಗಾಲದ ಅಧಿವೇಶನ ಡಿಸೆಂಬರ್ 1 ರಿಂದ 19 ರವರೆಗೆ ನಡೆಯಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಶನಿವಾರ ತಿಳಿಸಿದ್ದಾರೆ.

‘ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ಕರೆಯುವ ಸರ್ಕಾರದ ಪ್ರಸ್ತಾಪವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮೋದಿಸಿದ್ದಾರೆ’ ಎಂದು ರಿಜಿಜು ಟ್ವೀಟ್‌ ಮಾಡಿದ್ದಾರೆ.

3 ವಾರಗಳ ಈ ಅಧಿವೇಶನದಲ್ಲಿ ಒಟ್ಟು 15 ದಿನ ಕಲಾಪ ನಡೆಯಲಿದೆ. 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ನಡೆಯುತ್ತಿರುವ ಸಮಯದಲ್ಲಿ ಅಧಿವೇಶನ ಬಿರುಗಾಳಿಯಿಂದ ಕೂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಪ್ರಕ್ರಿಯೆಯ ವಿರುದ್ಧ ಹಲವಾರು ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ಕೂಡ ಅಧಿವೇಶನದ ಮೇಲೆ ಪರಿಣಾಮ ಬೀರಲಿದೆ.ಇನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತೆರಿಗೆ ಹೇರಿಕೆ ಕ್ರಮಗಳು ಕೂಡ ಪ್ರತಿಧ್ವನಿಸುವ ಸಂಭವವಿದೆ.

ಕಾಂಗ್ರೆಸ್ ವಿರೋಧ:

ಕಳೆದ ವರ್ಷ, ಅಧಿವೇಶನವು ನ.25 ರಿಂದ ಡಿ. 20 ರವರೆಗೆ ನಡೆದಿತ್ತು. ಇದನ್ನು ಪ್ರಸ್ತಾಪಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ‘ಅಧಿವೇಶನ ಈ ಸಲ ಅಸಾಮಾನ್ಯವಾಗಿ ವಿಳಂಬವಾಗಿದೆ ಮತ್ತು ಮೊಟಕುಗೊಂಡಿದೆ. ಏಕೆಂದರೆ ಸರ್ಕಾರಕ್ಕೆ ಮಾಡಲು ಯಾವುದೇ ಕೆಲಸವಿಲ್ಲ, ಯಾವುದೇ ಮಸೂದೆಗಳನ್ನು ಅಂಗೀಕರಿಸುವ ಅಗತ್ಯವಿಲ್ಲ ಮತ್ತು ವುದೇ ಚರ್ಚೆಗಳಿಗೆ ಅವಕಾಶವಿಲ್ಲ’ ಎಂದು ಕಿಡಿಕಾರಿದ್ದಾರೆ.