ಮಹಿಳೆಯರಿಗೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇ.33 ಮೀಸಲಾತಿ ನೀಡುವ 2023ರ ನಾರಿ ಶಕ್ತಿ ವಂದನ ಅಧಿನಿಯಮಕ್ಕೆ ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಕೇಂದ್ರ ಸರ್ಕಾರ ತರಾತುರಿಯಲ್ಲಿ ಅಧಿಸೂಚನೆ ಹೊರಡಿಸಿದೆ.
- ಲೋಕಸಭಾ ಸ್ಥಾನಗಳು 850ಕ್ಕೆ ಏರಿದ ನಂತರವಷ್ಟೇ ಜಾರಿ-ತಿದ್ದುಪಡಿಗೂ ಮುನ್ನ ಕಾಯ್ದೆ ಜಾರಿಯಾಗುವುದು ಅಗತ್ಯ
- ಹಾಗಾಗಿ ಸಂಸತ್ ಚರ್ಚೆ ನಡುವೆಯೇ ತುರ್ತಾಗಿ ಜಾರಿನವದೆಹಲಿ: ಮಹಿಳೆಯರಿಗೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇ.33 ಮೀಸಲಾತಿ ನೀಡುವ 2023ರ ನಾರಿ ಶಕ್ತಿ ವಂದನ ಅಧಿನಿಯಮಕ್ಕೆ ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಕೇಂದ್ರ ಸರ್ಕಾರ ತರಾತುರಿಯಲ್ಲಿ ಅಧಿಸೂಚನೆ ಹೊರಡಿಸಿದೆ.ಈ ಪ್ರಕಾರ, ಲೋಕಸಭಾ ಸ್ಥಾನಗಳು 850ಕ್ಕೆ ಏರಿಕೆ ಆದ ನಂತರವಷ್ಟೇ ಮೀಸಲು ಜಾರಿಗೆ ಬರಬೇಕು ಎಂಬ ನಿಯಮವಿದೆ. ಅಂದರೆ ಕ್ಷೇತ್ರ ಮರುವಿಂಗಡಣೆ ಆಗದ ಹೊರತು ಇದು ಜಾರಿಗೆ ಬಾರದು.
ಅದಕ್ಕೆ ತಿದ್ದುಪಡಿ ತರಬೇಕಾದರೆ, ಮೊದಲು ಕಾನೂನಾಗಿ ಜಾರಿಗೆ ಬಂದಿರುವುದು ಅಗತ್ಯ. ಹಾಗಾಗಿ ಕಾಯಿದೆಗೆ ತಿದ್ದುಪಡಿ ತರುವ ಮಸೂದೆಗಳನ್ನು ಸಂಸತ್ತಿನಲ್ಲಿ ಚರ್ಚಿಸುತ್ತಿರುವಾಗಲೇ, ಏ.16ರಿಂದ ಜಾರಿಗೆ ಬರುವಂತೆ ಕಾನೂನು ಸಚಿವಾಲಯ ಅಧಿಸೂಚನೆ ಹೊರಡಿಸಿದೆ.‘2023ರಲ್ಲಿ ಸಂಸತ್ತು ಅಂಗೀಕರಿಸಿದ ಮಹಿಳಾ ಮೀಸಲು ಮಸೂದೆ ಕಾನೂನಾಗಿ ಅಂಗೀಕೃತವಾಗಿದ್ದರೂ, ಅದನ್ನು ಸಂವಿಧಾನದ ಭಾಗವಾಗಿ ಮಾಡಲು ಇದುವರೆಗೆ ಅಧಿಸೂಚನೆ ಹೊರಡಿಸಿರಲಿಲ್ಲ. ಆದರೆ ಯಾವುದೇ ಕಾಯಿದೆಯನ್ನು ಅಧಿಸೂಚನೆ ಹೊರಡಿಸಿ ಜಾರಿಗೆ ತರದಿದ್ದರೆ ಅದಕ್ಕೆ ತಿದ್ದುಪಡಿ ತರುವುದು ಸಾಧ್ಯವಿಲ್ಲ. ಹೀಗಾಗಿ ಈಗ ಅಧಿಸೂಚನೆ ಹೊರಡಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.2023ರ ಕಾಯ್ದೆಯ ಅನ್ವಯ ಮುಂದಿನ ಜನಗಣತಿ ನಂತರ ಕ್ಷೇತ್ರ ಮರುವಿಂಗಡಣೆ ನಡೆದ ನಂತರವೇ ಮಹಿಳಾ ಮೀಸಲಾತಿ ಜಾರಿಗೆ ಬರಬೇಕಿತ್ತು. ಅಂದರೆ 2034ರವರೆಗೂ ಕಾಯಬೇಕಿತ್ತು. ಆದರೆ ಇದೀಗ ಸರ್ಕಾರ ಈ ಕಾನೂನಿಗೆ ತಿದ್ದುಪಡಿ ತಂದು ಹಿಂದಿನ ಜನಗಣತಿ ಅನ್ವಯ, 2029ರಿಂದಲೇ ಜಾರಿಗೆ ತರಲು 3 ಹೊಸ ಮಸೂದೆಗಳನ್ನು ಲೋಕಸಭೆಯಲ್ಲಿ ಚರ್ಚಿಸುತ್ತಿದೆ. ಇದು ಸಾಧ್ಯವಾಗಬೇಕಾದರೆ ಹಿಂದಿನ ಕಾಯ್ದೆ ಜಾರಿಯಾಗಬೇಕಿತ್ತು. ಆದ್ದರಿಂದ ಅದನ್ನೀಗ ತುರ್ತಾಗಿ ಜಾರಿಗೆ ತಂದಿದೆ.
ವಿಪಕ್ಷಗಳ ಪ್ರಶ್ನೆ: ಲೋಕಸಭೆಯಲ್ಲಿ ವಿಪಕ್ಷಗಳಾದ ಕಾಂಗ್ರೆಸ್‌ನ ಕೆ.ಸಿ. ವೇಣುಗೋಪಾಲ್ ಮತ್ತು ಡಿಎಂಕೆಯ ಕನಿಮೊಳಿ ಸರ್ಕಾರದ ಈ ನಡೆಯನ್ನು ಪ್ರಶ್ನಿಸಿದ್ದಾರೆ.‘ಪ್ರಧಾನ ಕಾಯಿದೆಯನ್ನು ಜಾರಿಗೆ ತರದೆ ಅದಕ್ಕೆ ತಿದ್ದುಪಡಿ ಮಸೂದೆ ತರುವುದು ಹೇಗೆ ಸಾಧ್ಯ?’ ಎಂದು ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರಿಂದ ಸ್ಪಷ್ಟೀಕರಣ ಕೇಳಿದ್ದಾರೆ.
ಆದರೆ ಅಧಿಕಾರಿಯೊಬ್ಬರು ಈ ಬಗ್ಗೆ ಸ್ಪಷ್ಟನೆ ನೀಡಿ, ‘ಅಧಿಸೂಚನೆ ಜಾರಿಯಾಗದೇ ಹಾಲಿ ಕಾಯ್ದೆಯನ್ನು ತಿದ್ದುಪಡಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ಅಧಿಸೂಚನೆ ಹೊರಡಿಸಲಾಗಿದೆ’ ಎಂದಿದ್ದಾರೆ.