ಸಾರಾಂಶ
ಉಕ್ರೇನ್ ಜೊತೆಗಿನ ಸಂಘರ್ಷದಲ್ಲಿ ರಷ್ಯಾದ ಜೊತೆಗೆ ಅದರ ಹಲವು ಮಿತ್ರ ದೇಶಗಳು ನೇರವಾಗಿ ಭಾಗಿಯಾಗಿರುವುದನ್ನು ವಿಶ್ವದ ಮೂರನೇ ಮಹಾಯುದ್ಧ ಆರಂಭವಾಗಿದೆ ಎಂದು ಹೇಳಲು ಕಾರಣವಾಗಬಲ್ಲದು ಎಂದು ಉಕ್ರೇನ್ ಸೇನೆಯ ನಿವೃತ್ತ ಮುಖ್ಯಸ್ಥ ಹಾಗೂ ದೇಶದ ಬ್ರಿಟನ್‌ನಲ್ಲಿನ ರಾಯಭಾರಿ ವಲೇರಿ ಝಲೂಜ್ನಿ ಹೇಳಿದ್ದಾರೆ.
ಕೀವ್: ಉಕ್ರೇನ್ ಜೊತೆಗಿನ ಸಂಘರ್ಷದಲ್ಲಿ ರಷ್ಯಾದ ಜೊತೆಗೆ ಅದರ ಹಲವು ಮಿತ್ರ ದೇಶಗಳು ನೇರವಾಗಿ ಭಾಗಿಯಾಗಿರುವುದನ್ನು ವಿಶ್ವದ ಮೂರನೇ ಮಹಾಯುದ್ಧ ಆರಂಭವಾಗಿದೆ ಎಂದು ಹೇಳಲು ಕಾರಣವಾಗಬಲ್ಲದು ಎಂದು ಉಕ್ರೇನ್ ಸೇನೆಯ ನಿವೃತ್ತ ಮುಖ್ಯಸ್ಥ ಹಾಗೂ ದೇಶದ ಬ್ರಿಟನ್‌ನಲ್ಲಿನ ರಾಯಭಾರಿ ವಲೇರಿ ಝಲೂಜ್ನಿ ಹೇಳಿದ್ದಾರೆ.
ಹಾಲಿ ಬ್ರಿಟನ್‌ನಲ್ಲಿ ಉಕ್ರೇನ್ ರಾಯಭಾರಿಯಾಗಿರುವ ವಲೇರಿ ಸಭೆಯೊಂದರಲ್ಲಿ ಮಾತನಾಡಿ, ‘ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಚೀನಾ ನಿರ್ಮಿತ ಶಸ್ತ್ರಾಸ್ತ್ರ ಬಳಕೆಯಾಗುತ್ತಿದೆ. ಉತ್ತರ ಕೊರಿಯಾದ ಸಾವಿರಾರು ಯೋಧರು ಉಕ್ರೇನ್ ವಿರುದ್ಧ ಮುಂಚೂಣಿಯಲ್ಲಿ ನಿಂತು ರಷ್ಯಾ ಪರವಾಗಿ ಹೋರಾಡುತ್ತಿದ್ದಾರೆ. ಇರಾನ್‌ನ ‘ಶಹೇದಿಗಳು’ ಉಕ್ರೇನ್‌ನಲ್ಲಿ ಅಮಾಯಕ ನಾಗರಿಕರನ್ನು ನಾಚಿಕೆ ಇಲ್ಲದೆಯೇ ಹತ್ಯೆ ಮಾಡುತ್ತಿದ್ದಾರೆ. ಈ ಎಲ್ಲಾ ವಿಷಯಗಳು ಯುದ್ಧದ ವ್ಯಾಪ್ತಿ ವಿಸ್ತಾರವಾಗಿದೆ ಎಂಬುದಕ್ಕೆ ಉದಾಹರಣೆ. ಇದನ್ನು ನೋಡಿದರೆ ವಿಶ್ವದ ಮೂರನೇ ಮಹಾಯುದ್ಧ ಆರಂಭವಾಗಿದೆ ಎಂದು ಹೇಳಬಹುದು’ ಎಂದರು.ಇದೇ ವೇಳೆ, ‘ಉಕ್ರೇನಿನ ಮಿತ್ರ ದೇಶಗಳು ಈ ಸಂಘರ್ಷ ದೇಶದ ಗಡಿಯಾಚೆ ದಾಟದಂತೆ ನೋಡಿಕೊಳ್ಳಲು ನಿರ್ಣಾಯಕ ಕ್ರಮ ಕೈಗೊಳ್ಳಬೇಕು. ಈಗಲೂ ಇದನ್ನು ಮಾಡಲು ಸಾಧ್ಯವಿದೆ. ಆದರೆ ಕೆಲವೊಂದು ಕಾರಣಗಳಿಗಾಗಿ ನಮ್ಮ ಮಿತ್ರರು ಇದನ್ನು ಅರ್ಥ ಮಾಡಿಕೊಳ್ಳಲು ಬಯಸುತ್ತಿಲ್ಲ. ಈಗಾಗಲೇ ನಾವು ಸಾಕಷ್ಟು ಶತ್ರುಗಳನ್ನು ಹೊಂದಿದ್ದೇವೆ ಎಂಬುದು ಬಹಿರಂಗ ಸತ್ಯ’ ಎಂದರು.