ವಿಶ್ವಾದ್ಯಂತ ಎಕ್ಸ್‌ ಸರ್ವರ್‌ ಡೌನ್‌ : ಬಳಕೆದಾರರು ಬೇಸ್ತು

| N/A | Published : May 25 2025, 01:04 AM IST / Updated: May 25 2025, 05:15 AM IST

ಸಾರಾಂಶ

ವಿಶ್ವದ ಪ್ರಮುಖ ಸಾಮಾಜಿಕ ಮಾಧ್ಯಮಗಳಲ್ಲಿ ಒಂದಾಗಿರುವ ಎಕ್ಸ್‌ (ಟ್ವೀಟರ್‌) ಶನಿವಾರ ಸಂಜೆ ಕೆಲ ಕಾಲ ಸರ್ವರ್ ಸಮಸ್ಯೆ ಎದುರಿಸಿತು. ಈ ವೇಳೆ ವಿಶ್ವಾದ್ಯಂತ ಬಳಕೆದಾರರು ಕೆಲ ಹೊತ್ತು ಪರದಾಡುವಂತಾಯಿತು.

ವಾಷಿಂಗ್ಟನ್‌: ವಿಶ್ವದ ಪ್ರಮುಖ ಸಾಮಾಜಿಕ ಮಾಧ್ಯಮಗಳಲ್ಲಿ ಒಂದಾಗಿರುವ ಎಕ್ಸ್‌ (ಟ್ವೀಟರ್‌) ಶನಿವಾರ ಸಂಜೆ ಕೆಲ ಕಾಲ ಸರ್ವರ್ ಸಮಸ್ಯೆ ಎದುರಿಸಿತು. ಈ ವೇಳೆ ವಿಶ್ವಾದ್ಯಂತ ಬಳಕೆದಾರರು ಕೆಲ ಹೊತ್ತು ಪರದಾಡುವಂತಾಯಿತು.

ಎಕ್ಸ್‌ ಆ್ಯಪ್ ಮತ್ತು ವೆಬ್‌ಸೈಟನ್ನು ತೆರೆದಾಗ ‘ಸಮ್‌ಥಿಗ್‌ ವೆಂಟ್ ರಾಗ್‌, ಟ್ರೈ ರೀಲೋಡಿಂಗ್‌’ (ಸಮಸ್ಯೆಯಾಗಿದೆ. ಮರುಯತ್ನಿಸಿ) ಕಾಣಿಸಿಕೊಂಡಿತು. ಬಳಿಕ ಸಂಜೆ 6.30ರ ವೇಳೆಗೆ ಎಲ್ಲವೂ ಸರಿಯಾಗಿ ಎಕ್ಸ್‌ ಕಾರ್ಯನಿರ್ವಹಿಸಿತು.

ಶುಕ್ರವಾರವೂ ಸಹ ಎಲಾನ್‌ ಮಸ್ಕ್‌ ಒಡೆತನದ ಎಕ್ಸ್‌ ಸರ್ವರ್‌ ಸಮಸ್ಯೆ ಎದುರಿಸಿತ್ತು.

ಭಾರತಕ್ಕೆ ಬೇಕಿದ್ದ ವಂಚಕ ಅಂಗದ್‌ ಚಂಧೋಕ್‌ ಅಮೆರಿಕದಿಂದ ಗಡೀಪಾರು

ನವದೆಹಲಿ: ಭಾರತದ ವಾಂಟೆಡ್‌ ಲಿಸ್ಟ್‌ನಲ್ಲಿದ್ದ ವಂಚಕ ಅಂಗದ್‌ ಚಂಧೋಕ್‌ ಅಮೆರಿಕದಿಂದ ಭಾರತಕ್ಕೆ ಗಡೀಪಾರು ಆಗಿದ್ದಾನೆ. ಈತನನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದು ಬಂಧಿಸಿದ್ದಾರೆ.ಚಂಧೋಕ್‌ 2014ರಲ್ಲಿ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾಗೆ ವಂಚಿಸಿ 2016ರಲ್ಲಿ ಕುಟುಂಬ ಸಮೇತನಾಗಿ ಅಮೆರಿಕಕ್ಕೆ ಕಾಲ್ಕಿತ್ತಿದ್ದ. 

ಸಾಲದೆ ಅಮೆರಿಕದಲ್ಲಿಯೂ ಸ್ಥಳೀಯ ವಂಚಕರೊಂದಿಗೆ ಕೈಜೋಡಿಸಿ, ಅಲ್ಲಿನ ಹಿರಿಯ ನಾಗರಿಕರ ಬ್ಯಾಂಕ್‌ ಖಾತೆಗಳು, ಸೇರಿ ಅನೇಕ ಪ್ರಕರಣದಲ್ಲಿ ದೋಷಿಯಾಗಿ 2022ರಲ್ಲಿ 6 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ. ಈತನ ಪತ್ತೆಗೆ ಸಿಬಿಐ ಹೊರಡಿಸಿದ್ದ ರೆಡ್‌ ನೋಟಿಸ್‌ಗೆ ಪ್ರತಿಯಾಗಿ ಅಮೆರಿಕ ಚಂಧೋಕ್‌ನನ್ನು ಗಡೀಪಾರು ಮಾಡಿದೆ. ಇದು ಭಾರತಕ್ಕೆ ಬಹುದೊಡ್ಡ ಗೆಲುವಾಗಿದೆ.ಅಮೆರಿಕ ಕೋರ್ಟಿನಲ್ಲಿ ಸಲ್ಲಿಸಲಾಗಿದ್ದ ಆರೋಪಪಟ್ಟಿಯಲ್ಲಿ ಈತ 1.5 ಶತಕೋಟಿ ಡಾಲರ್‌ ವಂಚಿಸಿದ್ದನೆ ಎಂದು ಹೇಳಲಾಗಿದೆ.

ಯೂನಸ್‌ ರಾಜೀನಾಮೆ ಇಲ್ಲ, ಅವರೇ ಮುಂದುವರಿಕೆ: ಬಾಂಗ್ಲಾ ಸಚಿವ

ಢಾಕಾ: ಬಾಂಗ್ಲಾದೇಶದ ಅಸ್ಥಿರತೆಯ ನಡುವೆ ಅಲ್ಲಿನ ಮಧ್ಯಂತರ ಸರ್ಕಾರದ ಪ್ರಧಾನ ಸಲಹೆಗಾರ ಮೊಹಮ್ಮದ್‌ ಯೂನಸ್‌ ಅವರು ಶೀಘ್ರವಾಗಿ ರಾಜೀನಾಮೆ ನೀಡಲಿದ್ದಾರೆ ಎಂಬ ಗುಮಾನಿ ನಡುವೆ ಅವರ ಸಂಪುಟದ ಸದಸ್ಯರೊಬ್ಬರು ಇದಕ್ಕೆ ತಿಲಾಂಜಲಿ ನೀಡಿದ್ದಾರೆ. ಯೂನಸ್‌ ಅವರೇ ಮಧ್ಯಂತರ ಸರ್ಕಾರವನ್ನು ಮುನ್ನಡೆಸಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಶನಿವಾರ ಯೂನಸ್‌ ಅವರು ದಿಢೀರ್‌ ಸಂಪುಟ ಸಭೆ ಕರೆದು ರಾಜಕೀಯ, ರಕ್ಷಣೆ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿದರು. ಸಭೆ ಬಳಿಕ ಮಾತನಾಡಿದ ಸಂಪುಟದ ಸಲಹೆಗಾರ ವಹಿದುದ್ದೀನ್‌ ಮಹ್ಮುದ್‌, ‘ಯೂನಸ್‌ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿಲ್ಲ. ನಮ್ಮ ಅಧಿಕಾರದ ಮಧ್ಯೆ ಬರುತ್ತಿರುವ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿ ನಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೇವೆ ಎಂದು ಹೇಳಿದ್ದರು’ ಎಂದು ತಿಳಿಸಿದರು.ಈ ಮಧ್ಯೆ ಶನಿವಾರ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಬಿಎನ್‌ಪಿ ಪಕ್ಷ ಮತ್ತು ಜಮಾತ್‌ ಎ- ಇಸ್ಲಾಮಿ ಜತೆಗೂ ನೈನಸ್‌ ಸಭೆ ನಡೆಸಿದರು.

ಜಾರ್ಖಂಡ್‌ನಲ್ಲಿ ಕುಖ್ಯಾತ ನಕ್ಸಲ್‌ ಪಪ್ಪು ಸೇರಿ ಇಬ್ಬರ ಹತ್ಯೆ

ಲಾತೇಹಾರ್‌ : ನಕ್ಸಲ್‌ ಮುಕ್ತ ಭಾರತ ನಿಟ್ಟಿನಲ್ಲಿ ಮಾವೋವಾದಿಗಳ ವಿರುದ್ಧದ ಸಮರ ಮುಂದುವರೆದಿದ್ದು, ಜಾರ್ಖಂಡ್‌ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಕ್ಸಲ್ ಸಂಘಟನೆ ಜೆಜೆಎಂಪಿ ಮುಖ್ಯಸ್ಥ ಪಪ್ಪು ಲೋಹರಾ ಸೇರಿ ಇಬ್ಬರನ್ನು ಹತ್ಯೆ ಮಾಡಲಾಗಿದೆ.ಲಾತೇಹಾರ್‌ ಜಿಲ್ಲೆಯಲ್ಲಿ ಪಪ್ಪು ಮತ್ತು ಆತನ ಸಹಚರರು ಅಡಗಿರುವ ಖಚಿತ ಮಾಹಿತಿಯ ಸಿಆರ್‌ಪಿಎಫ್‌ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ಭದ್ರತಾ ಪಡೆ ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ. ಆಗ ಮೋಸ್ಟ್‌ ವಾಂಟೆಡ್‌ ನಕ್ಸಲ್, ಜಾರ್ಖಂಡ್‌ನ ಜನ ಮುಕ್ತಿ ಪರಿಷತ್‌ (ಜೆಜೆಎಂಪಿ) ಮುಖ್ಯಸ್ಥ ಪಪ್ಪು ಲೋಹರಾ ಮತ್ತು ಆತನ ಸಹಚರ ಪ್ರಭಾತ್‌ ಗಂಜು ಬಲಿಯಾಗಿದ್ದಾರೆ.

ಪೊಲೀಸರು ಈ ಇಬ್ಬರು ನಕ್ಸಲರ ತಲೆಗೆ ಈ ಹಿಂದೆ ತಲಾ 10 ಲಕ್ಷ ರು. ಹಾಗೂ 5 ಲಕ್ಷ ರು. ಬಹುಮಾನ ಘೋಷಿಸಿದ್ದರು. ಇನ್ನು ಇದೇ ವೇಳೆ ಪೊಲೀಸರು ಈ ಗುಂಪಿನ ಓರ್ವ ಸದಸ್ಯನನ್ನು ಬಂಧಿಸಿದ್ದು, ಆತನಿಂದ ಐಎನ್ಎಸ್‌ಎಎಸ್‌ ರೈಪಲ್‌ನ್ನು ವಶಪಡಿಸಿಕೊಂಡಿದ್ದಾರೆ.

ಇಪಿಎಫ್ ಮೇಲಿನ ಬಡ್ಡಿದರ ಶೇ8.25ಕ್ಕೆ ಕೇಂದ್ರ ಅನುಮೋದನೆ

ಪಿಟಿಐ ನವದೆಹಲಿ2025ನೇ ಸಾಲಿನ ಹಣಕಾಸು ವರ್ಷದಲ್ಲಿ ನೌಕರರ ಭವಿಷ್ಯ ನಿಧಿ (ಇಪಿಎಫ್‌) ಮೇಲಿನ ಬಡ್ಡಿದರವನ್ನು ಶೇ.8.25ಕ್ಕೆ ಮುಂದುವರೆಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಇದರಿಂದಾಗಿ ಇಪಿಎಫ್‌ನ 7 ಕೋಟಿ ಚಂದಾದಾರರಿಗೆ ಅನುಕೂಲವಾಗಲಿದೆ.

ಈ ವರ್ಷದ ಫೆ.28 ರಂದು ಇಪಿಎಫ್‌, 2024-25ನೇ ಸಾಲಿನ ಹಣಕಾಸು ವರ್ಷಕ್ಕೆ ನೌಕರರ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿದರವನ್ನು, ಹಿಂದಿನ ಸಾಲಿನಂತೆ ಶೇ.8.25ಕ್ಕೇ ಮುಂದುವರಿಸಲು ನಿರ್ಧರಿಸಿತ್ತು ಹಾಗೂ ಹಣಕಾಸು ಸಚಿವಾಲಯದ ಒಪ್ಪಿಗೆಗಾಗಿ ಅನುಮೋದನೆ ಕಳುಹಿಸಲಾಗಿತ್ತು. ಇದೀಗ ಕೇಂದ್ರ ಸರ್ಕಾರವು ಶೇ.8.25 ಬಡ್ಡಿ ದರಕ್ಕೆ ಒಪ್ಪಿಗೆ ನೀಡಿದೆ.

Read more Articles on