ಸಾರಾಂಶ
ಶಿವಮೊಗ್ಗ: ರಾಜ್ಯದಲ್ಲಿ ಖಾಸಗಿ ಮೈಕ್ರೋ ಫೈನಾನ್ಸ್‌ಗಳು ರೈತರ ಜೀವ ಹಿಂಡುತ್ತಿವೆ. ಇದಕ್ಕೆ ಕಡಿವಾಣ ಹಾಕಲೇಬೇಕಿದೆ. ಆದ್ದರಿಂದ, ಜ.29 ರಂದು ಬೆಳಗ್ಗೆ 11ಕ್ಕೆ ಬೆಂಗಳೂರಿನ ನೃಪತುಂಗ ರಸ್ತೆಯಲಿರುವ ರಿಸರ್ವ್ ಬ್ಯಾಂಕ್ ಕಚೇರಿ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ ಹೇಳಿದರು.
ಶಿವಮೊಗ್ಗ: ರಾಜ್ಯದಲ್ಲಿ ಖಾಸಗಿ ಮೈಕ್ರೋ ಫೈನಾನ್ಸ್‌ಗಳು ರೈತರ ಜೀವ ಹಿಂಡುತ್ತಿವೆ. ಇದಕ್ಕೆ ಕಡಿವಾಣ ಹಾಕಲೇಬೇಕಿದೆ. ಆದ್ದರಿಂದ, ಜ.29 ರಂದು ಬೆಳಗ್ಗೆ 11ಕ್ಕೆ ಬೆಂಗಳೂರಿನ ನೃಪತುಂಗ ರಸ್ತೆಯಲಿರುವ ರಿಸರ್ವ್ ಬ್ಯಾಂಕ್ ಕಚೇರಿ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ ಹೇಳಿದರು.
ಶನಿವಾರ ಏರ್ಪಡಿಸಿದ್ದ ರಾಜ್ಯ ರೈತ ಸಂಘ ಮತ್ತು ಶಿವಮೊಗ್ಗ ಜಿಲ್ಲಾ ಸಹಕಾರಿ ಯೂನಿಯನ್ ವತಿಯಿಂದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಾಜ್ಯದ ನಬಾರ್ಡ್ ಬ್ಯಾಂಕಿಗೆ ಕೊಡಬೇಕಾದ ಧನ ಸಹಾಯ, ಸಾಲದ ಅನುದಾನವನ್ನು ಶೇ.58 ರಷ್ಟು ಕಡಿತಗೊಳಿಸಿದೆ. ಇದು ರೈತ ವಿರೋಧಿ ಮತ್ತು ಗ್ರಾಮೀಣ ಅಭಿವೃದ್ಧಿ ವಿರೋಧಿ ನೀತಿ ಎಂದು ದೂರಿದರು.ಮೈಕ್ರೋ ಪೈನಾನ್ಸ್ ಸಂಸ್ಥೆಗಳು ಜನ ಸಾಮಾನ್ಯರಿಗೆ ಸಾಲ ನೀಡಿ ನಿಷ್ಕರುಣೆಯಿಂದ ಸುಲಿಗೆ ಮಾಡುತ್ತಿರುವುದನ್ನು ಹಾಗೂ ಸಾಲಗಾರರಿಗೆ ನೀಡುತ್ತಿರುವ ಕಿರುಕುಳ ನಿಲ್ಲಿಸಬೇಕು. ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಉದ್ದೇಶಗಳಿಗಾಗಿಯೇ 1982ರಲ್ಲಿ ನಬಾರ್ಡ್ ಬ್ಯಾಂಕ್ ಸ್ಥಾಪಿಸಲಾಗಿದೆ. ಕೃಷಿಕರಿಗೆ, ಕೃಷಿ ಅಭಿವೃದ್ಧಿಗಾಗಿ ವಾಣಿಜ್ಯ ಬ್ಯಾಂಕುಗಳು ಸಾಲ ನೀಡದೆ ಇದ್ದಾಗ, ಬೆಳೆ ಸಾಲ, ಮಧ್ಯಮಾವಧಿ ಸಾಲ ಹಾಗೂ ದೀರ್ಘಾವಧಿ ಸಾಲಗಳನ್ನು ರೈತರಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಸಹಕಾರ ಬ್ಯಾಂಕುಗಳ ಮೂಲಕ ಸಾಲ ಸೌಲಭ್ಯ ಕಲ್ಪಿಸಲಾಗುತ್ತಿತ್ತು. ಆದರೆ, ರಾಜ್ಯದ ನಬಾರ್ಡ್ ಬ್ಯಾಂಕಿಗೆ ಈ ಸಾರಿ ಕೇಂದ್ರ ಸರ್ಕಾರವು ಅರ್ಧಕ್ಕಿಂತಲೂ ಹೆಚ್ಚು ಅನುದಾನ/ಸಾಲದ ಹಣವನ್ನು ಕಡಿತಗೊಳಿಸಿದೆ. ಅಂದರೆ, 5,600 ಕೋಟಿಯಿಂದ 2,340 ಕೋಟಿಗೆ ಕಡಿತಗೊಳಿಸಲಾಗಿದೆ. ಇದು ಬೇಸರದ ಸಂಗತಿ ಎಂದರು.ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಡಿ.ವಸಂತ್‌ಕುಮಾರ್ ಮಾತನಾಡಿ, ಸ್ಥಳೀಯ ಸಹಕಾರ ಸಂಘಗಳನ್ನು ಮತ್ತು ಕೃಷಿ ಅಭಿವೃದ್ಧಿ ಬ್ಯಾಂಕ್‌ಗಳನ್ನು ದುರ್ಬಲಗೊಳಿಸಿ ಖಾಸಗಿ ಪೈನಾನ್ಸ್ ಸಂಸ್ಥೆಗಳು ಹಾಗೂ ಶ್ರೀಮಂತರ ಬ್ಯಾಂಕ್‌ಗಳನ್ನು ರೈತರು ಅನಿವಾರ್ಯವಾಗಿ ಅವಲಂಬಿಸುವಂತೆ ಮಾಡುವ ಹುನ್ನಾರ ನಡೆಯುತ್ತಿದೆ. ಇದರಿಂದ ಕೃಷಿಕರು ಮತ್ತು ಕೃಷಿ ಕ್ಷೇತ್ರವನ್ನು ಕಾರ್ಪೋರೇಟ್ ಕಂಪನಿಗಳಿಗೆ ಒತ್ತೆಯಿಡುವ ಹುನ್ನಾರ ನಡೆಯುತ್ತಿದೆ ಎಂದು ದೂರಿದರು.ಈ ರೈತ ವಿರೋಧ ನೀತಿಯನ್ನು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಜಿಲ್ಲಾ ಸಹಕಾರಿ ಯೂನಿಯನ್ ಖಂಡಿಸುತ್ತದೆ. ನಬಾರ್ಡ್ ಬ್ಯಾಂಕ್ ಉಳಿದರೆ ಮಾತ್ರ ಕೃಷಿ ಕ್ಷೇತ್ರ ಉಳಿಯುತ್ತದೆ. ಆದ್ದರಿಂದ ಕೇಂದ್ರ ಸರ್ಕಾರ ನಬಾರ್ಡ್ ಬ್ಯಾಂಕಿಗೆ ಹೆಚ್ಚಿನ ಅನುದಾನ, ಧನ ಸಹಾಯ ಮಾಡಬೇಕು ಎಂದು ಆಗ್ರಹಿಸಿದರು.ಜಿಲ್ಲಾ ಸಹಕಾರಿ ಯುನಿಯನ್ ಅಧ್ಯಕ್ಷ ವಾಟಗೋಡು ಸುರೇಶ್ ಮಾತನಾಡಿ, ಜನ ಸಾಮಾನ್ಯರು, ಬಡವರಿಗೆ ದುಬಾರಿ ಬಡ್ಡಿ ದರದಲ್ಲಿ ಸಾಲ ನೀಡಿ ಅವರ ಜೀವ ಹಿಂಡುತ್ತಿರುವ, ನೂರಾರು ಜನರ ಆತ್ಮಹತ್ಯೆ ಮತ್ತು ವಲಸೆಗೆ ಕಾರಣವಾಗಿರುವ ಖಾಸಗಿ ಮೈಕ್ರೋ ಪೈನಾನ್ಸ್‌ಗಳ ಕಿರುಕುಳವನ್ನು ತಪ್ಪಿಸಲೇಬೇಕಾಗಿದೆ. ಇದಕ್ಕೇ ಕೇಂದ್ರ ರಿಸರ್ವ್ ಬ್ಯಾಂಕ್ ನಿಯಂತ್ರಣ ತರುವ ಹಣಕಾಸಿನ ನೀತಿಯನ್ನು ತಕ್ಷಣ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಪ್ರಗತಿಪರ ಒಕ್ಕೂಟದ ಎಚ್.ಬಿ.ರಾಘವೇಂದ್ರ ಮಾತಾನಾಡಿ, ಜನಸಾಮಾನ್ಯರಿಗೆ ಬಡವರಿಗೆ ದುಬಾರಿ ಬಡ್ಡಿ ದರದಲ್ಲಿ ಸಾಲ ನೀಡಿ ಅವರ ಜೀವ ಹಿಂಡುತ್ತಿರುವ ನೂರಾರು ಜನರ ಆತ್ಮಹತ್ಯೆಗೆ ಮತ್ತು ವಲಸಿಗೆ ಕಾರಣವಾಗಿರುವ ಖಾಸಗಿ ಮೈಕ್ರೋ ಫೈನಾನ್ಸ್‌ಗಳ ಕಿರುಕುಳವನ್ನು ತಪ್ಪಿಸಬೇಕಾಗಿದೆ ಇದಕ್ಕಾಗಿ ಕೇಂದ್ರ ರಿಸರ್ವ್ ಬ್ಯಾಂಕ್ ನಿಯಂತ್ರಣ ತರುವ ಹಣಕಾಸಿನ ನೀತಿಯನ್ನು ತಕ್ಷಣ ಜಾರಿಗೊಳಿಸಬೇಕು ಮತ್ತು ಇದರ ವಿರುದ್ಧ ಹೋರಾಟ ಆಗಬೇಕು ಪ್ರಗತಿಪರರು ಈ ಹೋರಾಟದಲ್ಲಿ ಪಾಲ್ಗೊಳ್ಳುತ್ತಾರೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಸತೀಶ್ ಅಂಗಡಿ, ಜಿಲ್ಲಾ ಮಹಿಳಾ ಸಂಚಾಲಕಿ ಭಾಗ್ಯ ಪಿ.ಗೌಡ ಇದ್ದರು.