ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಬೆಳೆ ಕಟಾವು ಪ್ರಯೋಗ ಆಧರಿಸಿ ಬೆಳೆ ವಿಮೆ ಕಂಪನಿಗಳು ವಿಮೆ ಮೊತ್ತ ನಿರ್ಧರಿಸುತ್ತವೆ. ಆದರೆ ಸರಿಯಾದ ಸಮಯಕ್ಕೆ ಬೆಳೆ ಕಟಾವಿನ ಮಾಹಿತಿಯನ್ನು ಅಧಿಕಾರಿಗಳು ದಾಖಲಿಸದೆ ನಿರ್ಲಕ್ಷ್ಯ ತೋರುವುದರಿಂದ ರೈತರು ಸಮಸ್ಯೆ ಅನುಭವಿಸುವಂತಾಗಿದೆ. ಈ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಎಚ್ಚರಿಕೆ ನೀಡಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ತ್ರೈಮಾಸಿಕ ಕೃಷಿ ಅಂಕಿ ಅಂಶಗಳ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಬೆಳೆ ಕಟಾವು ಪ್ರಯೋಗ ಆಧಾರ
‘ಬೆಳೆ ವಿಮೆ ನಿಗದಿಗೆ ಸ್ಥಳೀಯವಾಗಿ ನಡೆಸಿದ ಬೆಳೆ ಕಟಾವು ಪ್ರಯೋಗವೇ ಆಧಾರ. ಇದರಲ್ಲಿ ಯಾವುದೇ ರೀತಿಯ ತಪ್ಪು ಉಂಟಾಗಬಾರದು. ತಂತ್ರಾಂಶದಲ್ಲಿ ಅಂಕಿ ಅಂಶಗಳು ತಪ್ಪಾಗದಂತೆ ಪ್ರಯೋಗದ ವಿವರಗಳನ್ನು ಭರ್ತಿ ಮಾಡಬೇಕು. ಬೆಳೆ ಕಟಾವು ಮಾಡಲು ನಿಯೋಜಿಸಿದ ಅಧಿಕಾರಿ ಹಾಗೂ ನೌಕರರೇ ಖುದ್ದಾಗಿ ರೈತರ ಜಮೀನಿಗೆ ತೆರಳಿ ಕಟಾವು ಪ್ರಯೋಗ ಕೈಗೊಳ್ಳಬೇಕು’ ಎಂದು ಸೂಚಿಸಿದರು.ಬೆಳೆ ಕಟಾವು ಹಾಗೂ ನೋಂದಣಿಯಲ್ಲಿ ಅಕ್ರಮಗಳು ಆಗದಂತೆ ರೈತರ ಫ್ರೂಟ್ ಐಡಿ ಆಧರಿಸಿ ಬೆಂಬಲ ಬೆಲೆ ಅಡಿ ಸರ್ಕಾರದಿಂದ ಬೆಳೆ ಖರೀದಿಸಲಾಗುತ್ತದೆ. ಆದ್ದರಿಂದ ಬೆಳೆ ಖರೀದಿ ಪ್ರಕ್ರಿಯಲ್ಲಿ ಫ್ರೂಟ್ ಐಡಿ ತಿದ್ದುವ ಕೆಲಸ ಮಾಡಬಾರದು. ಬೆಳೆ ಕಟಾವು ಪ್ರಯೋಗ ಪಾರದರ್ಶಕವಾಗಿ ನಡೆಯಲು ವಿಮಾ ಕಂಪನಿಯ ಅಧಿಕಾರಿಗಳು ಸಹ ಬೆಳೆ ಕಟಾವು ಪ್ರಯೋಗದ ಸಂದರ್ಭದಲ್ಲಿ ಕಡ್ಡಾಯವಾಗಿ ಇರಬೇಕು. ಪ್ರತಿ ತಾಲೂಕು ವ್ಯಾಪ್ತಿಗೆ ಮೂರರಿಂದ ನಾಲ್ಕು ಪ್ರತಿನಿಧಿಗಳನ್ನು ನೇಮಿಸಬೇಕು’ ಎಂದು ತಿಳಿಸಿದರು.ಕೃಷಿ ಗಣತಿ ಮಾದರಿಯಾಗಲಿ‘ಕೃಷಿ ಗಣತಿ ಕಾರ್ಯದಲ್ಲಿ ಜಿಲ್ಲೆ ರಾಜ್ಯಕ್ಕೆ ಮಾದರಿಯಾಗಬೇಕು ಈ ಬಾರಿ ಜಿಲ್ಲೆಯಲ್ಲಿ ಬೆಳೆ ಕಟಾವು ಪ್ರಯೋಗಗಳಿಗೆ ಅಸಾಧಾರಣ ಇಳುವರಿ, ಛಾಯಾಚಿತ್ರ ಇಳುವರಿ ವ್ಯತ್ಯಾಸ, ಶೂನ್ಯ ಇಳುವರಿ ದಾಖಲಿಸಿದ ಪರಿಣಾಮ ಒಟ್ಟು ೨೬ಪ್ರಯೋಗಗಳಿಗೆ ಆಕ್ಷೇಪಣೆ ದಾಖಲಿಸಿ ೨೪ ಪ್ರಯೋಗಗಳ ಆಕ್ಷೇಪಣೆ ಇತ್ಯರ್ಥಪಡಿಸಲಾಗಿದೆ. ಉಳಿದ ೨ ಪ್ರಯೋಗಗಳ ಆಕ್ಷೇಪಣೆ ರದ್ದು ಪಡಿಸಿ ಇಳುವರಿಯನ್ನು ಉಳಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ರಮೇಶ್ ವಿವರಿಸಿದರು.ಪ್ರಸ್ತುತ ರಾಗಿ ಬೆಳೆ ಮಳೆಯಿಂದಾಗಿ ನಷ್ಟಗೊಳ್ಳುತ್ತಿದ್ದು, ವಿಮಾ ಕ್ಯಾಂಪನಿಯ ಸಹಾಯವಾಣಿ ೧೮೦೦೪೨೫೬೬೭೯ನ್ನು ಸಂಪರ್ಕಿಸಿ ಪರಿಹಾರ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಂಗಳ, ತೋಟಗಾರಿಕೆ ಉಪನಿರ್ದೇಶಕ ಕುಮಾರಸ್ವಾಮಿ ಇದ್ದರು.