ಸಾರಾಂಶ
ಕನ್ನಡಪ್ರಭ ವಾರ್ತೆ ನೆಲಮಂಗಲ
ಮಾತೃ ವಿಯೋಗದ ನೋವಿನಲ್ಲಿದ್ದ ನಟ ವಿನೋದ್ ರಾಜ್‌ಗೆ ಮತ್ತೊಂದು ಅಘಾತ ಎದುರಾಗಿ ಬಾಲ್ಯದಿಂದಲೂ ಆರೈಕೆ ಮಾಡಿದವರನ್ನು ಕಳೆದುಕೊಂಡು ಬರಸಿಡಿಲು ಬಡಿದಂತಾಗಿದೆ.ಚಂದನವನದ ಹಿರಿಯ ನಟಿ ಲೀಲಾವತಿ ನಮ್ಮನ್ನೆಲ್ಲ ಅಗಲಿ ಇನ್ನೂ ಮೂರ್ನಾಲ್ಕು ದಿನಗಳು ಕಳೆದಿವೆ ಅಷ್ಟೆ, ಅಷ್ಟರಲ್ಲಾಗಲೇ ತಾಲೂಕಿನ ಸೋಲದೇವನಹಳ್ಳಿ ತೋಟದ ವಿನೋದ್ ಮನೆಯಲ್ಲಿ ಮತ್ತೊಂದು ಸಾವು ಸಂಭವಿಸಿದೆ. ಹೌದು! ನಟ ವಿನೋದ್ ರಾಜ್ ರನ್ನು ಸಾಕಿ ಬೆಳೆಸಿ ಕಷ್ಟ ಕಾಲದಲ್ಲಿ ಅನ್ನ ಹಾಕಿದ್ದ ಬಂಗಾರಮ್ಮ ಡಿ.13 ರಂದು ಮೃತ ಪಟ್ಟಿದ್ದಾರೆ. ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿರುವ ಇವರನ್ನು ಕಳೆದ ಐದು ದಿನಗಳಿಂದ ಆಸ್ಪತ್ರೆಯಿಂದ ಕರತಂದು ಜನಸ್ನೇಹಿ ಆಶ್ರಮದಲ್ಲಿ ಆರೈಕೆ ಮಾಡಲಾಗುತ್ತಿತ್ತು. ಅದರೆ ಲೀಲಾವತಿ ಆಗಲಿಕೆ ನೋವಿನಿಂದ ಕೊನೆಯುಸಿರೆಳೆದಿದ್ದಾರೆ. ಮೃತೆ ಬಂಗಾರಮ್ಮ ಹಾಗೂ ಲೀಲಾವತಿ ಕುಟುಂಬಕ್ಕೆ ಕಳೆದ 30 ವರ್ಷಗಳ ಅವಿನಾಭಾವ ಸಂಬಂಧವಿದ್ದು, ಚೆನೈನಿಂದ ಕರೆದುಕೊಂಡು ಬಂದು ತನ್ನ ತೋಟದ ಮನೆಯಲ್ಲಿಯೇ ಇರಿಸಿಕೊಂಡಿದ್ದರು. ಕಳೆದ ಕೆಲ ದಿನಗಳ ಹಿಂದೆ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದ ಬಂಗಾರಮ್ಮರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ನಡುವೆ ಲೀಲಾವತಿ ಸಹ ಹಾಸಿಗೆ ಹಿಡಿದ್ದಿದ್ದರಿಂದ ಬಂಗಾರಮ್ಮ ಅವರನ್ನು ಆಶ್ರಮದಲ್ಲಿ ಸೇರಿಸಲಾಗಿತ್ತು.ಇಂದು ಬಂಗಾರಮ್ಮನವರ ಅಗಲಿಕೆ ವಿನೋದ್ ಕುಟುಂಬಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಬಂಗಾರಮ್ಮ ಮೃತದೇಹವನ್ನು ವಿನೋದ್ ತೋಟದ ಮನೆಯಲ್ಲಿ ಇರಿಸಿ ಅಂತಿಮ ವಿಧಿ ವಿಧಾನ ಪೂರೈಸಿ ಬಳಿಕ ಪೀಣ್ಯಾದ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
--ಹಿರಿಯ ನಟಿ ಲೀಲಾವತಿ, ಮಗ ವಿನೋದ್ ಜೊತೆ ಬಂಗಾರಮ್ಮ.