ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಬಸವಾದಿ ಶರಣರ ಕಲ್ಯಾಣ ಕ್ರಾಂತಿ, ಅಲ್ಲಿನ ಕುರುಹಗಳಷ್ಟೇ ಅಲ್ಲ ದೇಶದ ವಿವಿಧ ಭಾಗಗಳಿಂದ ಕಲ್ಯಾಣದತ್ತ ಸೆಳೆದ ಬಸವ ಚಿಂತನೆ ಕಟ್ಟಿಕೊಟ್ಟಿರುವಂಥ ಬಸವಪ್ರಭ ಪುಸ್ತಕವು ಪ್ರತಿಯೊಬ್ಬ ನಾಗರಿಕನಿಗಷ್ಟೇ ಅಲ್ಲ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಗೂ ಅತ್ಯುಪಯುಕ್ತವಾಗಿದೆ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಶ್ಲಾಘನೆ ವ್ಯಕ್ತಪಡಿಸಿದರು.ಅವರು ಭಾನುವಾರ ನಗರದ ಎಸ್‌ಆರ್‌ಎಸ್ ಫಂಕ್ಷನ್ ಹಾಲ್‌ನಲ್ಲಿ ಕನ್ನಡಪ್ರಭ ವತಿಯಿಂದ ಬಸವಜಯಂತಿ ನಿಮಿತ್ತ ಹೊರತರಲಾದ ಬಸವಪ್ರಭ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, 12ನೇ ಶತಮಾನದಲ್ಲಿಯೇ ಧಾರ್ಮಿಕ ಕ್ರಾಂತಿ, ವಚನ ಕ್ರಾಂತಿ ಮಾಡಿ ಸಮ ಸಮಾಜವನ್ನು ಸರಿ ದಾರಿಗೆ ತರುವ ಪ್ರಯತ್ನ ಬಸವಣ್ಣನವರು ಮಾಡಿದ್ದಾರೆ. ಅದನ್ನೆಲ್ಲ ಸಂಕ್ಷಿಪ್ತವಾಗಿ ಸರ್ವರಿಗೂ ತಿಳಿಯುವಂತೆ ಬಸವಪ್ರಭ ಪುಸ್ತಕದಲ್ಲಿ ಮೂಡಿಸಲಾಗಿದೆ ಎಂದರು.
ಬಸವಣ್ಣನವರ ಕಾಲದಲ್ಲಿ ಮೊಬೈಲ್ ಇರಲಿಲ್ಲ ಆದರೂ ಕೂಡ ಅವರು ತಮ್ಮಲ್ಲಿರುವ ಹೊಸ ಹೊಸ ವಿಚಾರಗಳನ್ನು ಜನರ ಬಾಯಿಯಿಂದ ಬಾಯಿಗೆ ಮೂಲಕ ತಿಳಿಸುವ ಕಾರ್ಯ ಮಾಡಿದ್ದರು. ಬಸವಪ್ರಭ ಪುಸ್ತಕದಲ್ಲಿ ಬಸವಕಲ್ಯಾಣದ ಅನೇಕ ಐತಿಹಾಸಿಕ ಸ್ಥಳ ಚಿತ್ರಿಕರಿಸಲಾಗಿದೆ. ಪಾರ್ಲಿಮೆಂಟ್‌ನ ಚಿಂತನೆ ಅಂದಿನ ಅನುಭವ ಮಂಟಪದಲ್ಲಿ ವಿಶೇಷ ಮಾನ್ಯತೆ ಪಡೆದಿದೆ 12ನೇ ಶತಮಾನದ ಮೊದಲನೇ ಅನುಭವ ಮಂಟಪವೇ ಮಾದರಿಯಾಗಿದೆ ಎಂದರು.ಬಸವಕಲ್ಯಾಣದಲ್ಲಿನ ಐತಿಹಾಸಿಕ ಸ್ಮಾರಕ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ₹610 ಕೋಟಿ ಮಂಜೂರು ಮಾಡಿದ್ದು ಅದರಲ್ಲಿ ಈಗಾಗಲೇ ₹200 ಕೋಟಿ ವೆಚ್ಚದಲ್ಲಿ ಸ್ಮಾರಕ ಗುರುತಿಸುವ ಕಾರ್ಯ ಬಿಕೆಡಿಬಿ ವತಿಯಿಂದ ಮಾಡಲಾಗುತ್ತದೆ. ಬಸವಣ್ಣನವರ ವಚನಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಜೀವನ ಸಾರ್ಥಕ ಮಾಡಿಕೊಳ್ಳಬೇಕೆಂದರು. ಜಾಹಿರಾತು ಇಲ್ಲದೇ ಹೊರತರಲಾದ ಈ ಬಸವಪ್ರಭ ಪುಸ್ತಕವು ಎಲ್ಲರಿಗೂ ಓದಿಸಿಕೊಂಡು ಹೋಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಮಾರಂಭದಲ್ಲಿ ಹುಲಸೂರಿನ ಡಾ. ಶಿವಾನಂದ ಸ್ವಾಮಿಗಳು, ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು, ಅಕ್ಕ ಗಂಗಾಂಬಿಕೆ ಸಾನ್ನಿಧ್ಯ ವಹಿಸಿದ್ದರು.ಕನ್ನಡಪ್ರಭ ಪತ್ರಿಕೆಯ ಸಮನ್ವಯ, ವಿಶೇಷ ಯೋಜನೆ ಸಂಪಾದಕರಾದ ಬಿ.ವಿ ಮಲ್ಲಿಕಾರ್ಜುನಯ್ಯ, ಜಿ.ಕೆ ಫೌಂಡೇಷನ್ ಅಧ್ಯಕ್ಷ ಗುರುನಾಥ ಕೊಳ್ಳೂರ, ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆಯ ಮುಖ್ಯಸ್ಥರಾದ ಡಾ. ಅಬ್ದುಲ್ ಖದೀರ, ಕಲಬುರಗಿ ಕನ್ನಡಪ್ರಭದ ಬ್ಯುರೋ ಮುಖ್ಯಸ್ಥ ಅಪ್ಪಾರಾವ್ ಸೌದಿ, ಸುವರ್ಣ ಸುದ್ದಿವಾಹಿನಿ ಜಿಲ್ಲಾ ವರದಿಗಾರರಾದ ಲಿಂಗೇಶ ಮರಖಲೆ, ಟಿಆರ್ ದೊಡ್ಡೆಡಿಡಿಪಿಯು ಚಂದ್ರಕಾಂತ ಶಾಬಾದಿ ಉಪಸ್ಥಿತರಿದ್ದರು. ಪುಸ್ತಕ ಪರಿಚಯವನ್ನು ಶಿವಲಿಂಗ ಹೇಡೆ ಮಾಡಿದರು. ಶಿವಶಂಕರ ಟೋಕರೆ ನಿರೂಪಿಸಿದರು.