ಸಾರಾಂಶ
ನಗರದ ಹೊರವಲಯದಲ್ಲಿರುವ ಬಿಜಿಎಸ್ ವಿದ್ಯಾ ಸಂಸ್ಥೆಯಲ್ಲಿ ಪ್ರಥಮ ಪಿಯುಸಿಗೆ ದಾಖಲಾದ ವಿದ್ಯಾರ್ಥಿಗಳ ತರಗತಿ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ದೀಪಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಗೌರಿಬಿದನೂರು : ನಗರದ ಹೊರವಲಯದಲ್ಲಿರುವ ಬಿಜಿಎಸ್ ವಿದ್ಯಾ ಸಂಸ್ಥೆಯಲ್ಲಿ ಪ್ರಥಮ ಪಿಯುಸಿಗೆ ದಾಖಲಾದ ವಿದ್ಯಾರ್ಥಿಗಳ ತರಗತಿ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ದೀಪಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ನಂತರ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದ ಅವರು ಎಸ್ಎಸ್ಎಲ್ ಸಿ ಮತ್ತು ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಮುಂಬರುವ ಪರೀಕ್ಷೆಗಳಲ್ಲಿ ಅತಿಹೆಚ್ಚು ಅಂಕಗಳಿಸುವ ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಥೆಯಿಂದ ಪ್ರೋತ್ಸಾಹ ನೀಡಲಾಗುವುದು ಹಾಗೂ ಮೌಲ್ಯಾಧಾರಿತ ಶಿಕ್ಷಣ ನೀಡುವಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯು ಹಗಲಿರುಳು ಶ್ರಮಿಸುತ್ತದೆ ಎಂದು ತಿಳಿಸಿದರು.
ಪ್ರಾಂಶುಪಾಲರಾದ ಎಂ. ವಿ. ಚಿಕ್ಕಜ್ಜಪ್ಪ ಮಾತನಾಡಿ, ಬಿಜಿಎಸ್ ಸಂಸ್ಥೆಯು ಗೌರಿಬಿದನೂರು ನಗರದಲ್ಲಿ ಪ್ರಾರಂಭವಾಗಲು ಕಾರಣೀಕರ್ತರು ಶ್ರೀ ಬಾಲಗಂಗಾಧರನಾಥ ಮಹಾ ಸ್ವಾಮೀಜಿಯವರಾಗಿದ್ದು, ಈ ಸಂಸ್ಥೆ 2008ರಲ್ಲಿ ಪ್ರಾರಂಭವಾಯಿತು. ಪರಮಪೂಜ್ಯರು ತಮ್ಮ ಕನಸಿನಂತೆ ಗ್ರಾಮಾಂತರ ಪ್ರದೇಶಗಳಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ಪ್ರಾರಂಭಿಸಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಗುರಿ ಹೊಂದಿದ್ದ ಮಹಾನ್ ವ್ಯಕ್ತಿಯಾಗಿದ್ದರು ಎಂದು ಹೇಳಿದರು.
ಚಿಕ್ಕಬಳ್ಳಾಪುರ ಶಾಖಾ ಮುಖ್ಯ ಆಡಳಿತಾಧಿಕಾರಿಯಾದ ಎನ್. ಶಿವರಾಮರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳು ದೃಢ ಸಂಕಲ್ಪದಿಂದ ಓದುವುದನ್ನು ಅಭ್ಯಸಿಸಿದರೆ ತಾವು ಅಂದುಕೊಂಡ ಗುರಿಯನ್ನು ಮುಟ್ಟುತ್ತಾರೆ ಎಂಬುದು ನನ್ನ ಅನಿಸಿಕೆಯಾಗಿದೆ. ಬಡತನದ ರೇಖೆಯನ್ನು ದಾಟಿ ಮುಂದಿನ ಉಜ್ವಲ ಭವಿಷ್ಯಕ್ಕೆ ಹೋಗಬೇಕಾದರೆ ಉತ್ತಮ ಶಿಕ್ಷಣ ಒಂದೇ ದಾರಿ ಎಂದು ತಿಳಿಸಿದರು.
ಶಿಕ್ಷಕ ಜನಾರ್ಧನ ಮೂರ್ತಿ, ಬಾಬಾಜಾನ್ ಮತ್ತು ಇನ್ನಿತರರು ಭಾಗವಹಿಸಿದ್ದರು.