ಸಾರಾಂಶ
ಚಿಕ್ಕಬಳ್ಳಾಪುರ : ಬಯಲು ಸೀಮೆಗಳಿಗೆ ಶಾಶ್ವತ ನೀರಾವರಿ ಯೋಜನೆಗಳ ವಿಸ್ತೃತವರದಿಗಳ ಚರ್ಚಿಸಲು ಅನುವಾಗುವಂತೆ ಜುಲೈ 2 ರ ನಂದಿಗಿರಿಧಾಮದ ಸಚಿವ ಸಂಪುಟ ಸಭೆಯಲ್ಲಿ ಕಾರ್ಯಕಲಾಪಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡಬೇಕು ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ ಒತ್ತಾಯಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿ, ಸರ್ಕಾರವು ಅನುಷ್ಠಾನಗೊಳಿಸುತ್ತಿರುವ ಎತ್ತಿನಹೊಳೆ, ಕೆ.ಸಿ.ವ್ಯಾಲಿ ಮತ್ತು ಹೆಚ್.ಎನ್. ಪ್ಯಾಲಿ ಯೋಜನೆಗಳ ಬಗ್ಗೆ ಹಲವಾರು ವೈಜ್ಞಾನಿಕ ಸಂಸ್ಥೆಗಳು ನೀಡಿರುವ ಶಿಫಾರಸ್ಸುಗಳನ್ನು ನಿರ್ಲಕ್ಷಿಸಿರುವುದು ಕಂಡುಬಂದಿದೆ ಎಂದರು.
ಎತ್ತಿನಹೊಳೆ ಯೋಜನೆ ವಿಫಲ
ಎತ್ತಿನಹೊಳೆ ಯೋಜನೆಯ ಬಗ್ಗೆ ಕೇಂದ್ರೀಯ ಜಲ ಆಯೋಗವು 2012 ರಲ್ಲಿಯೇ ನೀರಿನ ಲಭ್ಯತೆ ಕೇವಲ 8 ಟಿಎಂಸಿ ಎಂಬ ಅಧ್ಯಯನ ವರದಿ ನೀಡಿತ್ತು. ಆದರೆ ಇದನ್ನು ರಾಜ್ಯ ಉಪೇಕ್ಷಿಸಿ 12 ವರ್ಷಗಳ ಕಾಲ ಕಾಮಗಾರಿ ನಡೆಸು ಹಣ ವ್ಯರ್ಥ ಮಾಡಿದೆ. ಆದರೆ 2024ರಲ್ಲಿ ವಿಧಾನಸಭಾ ಅಧಿವೇಶನದಲ್ಲೇ ಈ ವರದಿಯನ್ನು ಸರ್ಕಾರ ಒಪ್ಪಿಕೊಂಡಿತ್ತು. ಹಾಗಾಗಿ ಎತ್ತಿನಹೊಳೆ ಯೋಜನೆಯ ಕಟ್ಟಕಡೆಯ ಫಲಾನುಭವಿ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರು ಹರಿಯುವುದು ಅಸಾಧ್ಯ ಎಂದರು.
3ನೇ ಹಂತದ ಶುದ್ಧೀಕರಣ
ಕೆ.ಸಿ.ವ್ಯಾಲಿ, ಹೆಚ್.ಎನ್.ವ್ಯಾಲಿ ಯೋಜನೆಗಳನ್ನು ಕಡ್ಡಾಯವಾಗಿ ಮೂರನೇ ಹಂತದ ಶುದ್ದೀಕರಣಕ್ಕೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಶಿಫಾರಸು ಮಾಡಿದ್ದರೂ ಸಣ್ಣ ನೀರಾವರಿ ಇಲಾಖೆಯು ತಿರಸ್ಕರಿಸಲು ಕಾರಣವೇನು ಎಂದು ಪ್ರಶ್ನಿಸಿದ ಅವರು, ಕೃಷ್ಣಾ ನದಿ ನೀರನ್ನು ನಮ್ಮ ಜಿಲ್ಲೆಗಳಿಗೆ ಹರಿಸುವಲ್ಲಿ ರಾಜ್ಯ ಸರ್ಕಾರ ತನ್ನ ನಿಲುವನ್ನೇ ಪ್ರಕಟಿಸುತ್ತಿಲ್ಲ. ಇದೆಲ್ಲ ಸಂಪುಟ ಸಭೆಯಲ್ಲಿ ಚರ್ಚೆಯಾಗಲಿ ಎಂದರು.ಹಿಸಿದರು.
ಸುದ್ದಿಗೋಷ್ಟಿಯಲ್ಲಿ ಕಾಮ್ರೇಡ್ ಲಕ್ಷ್ಮಯ್ಯ,ಕರ್ನಾಟಕ ರೈತ ಜನಸೇನಾ ಸಂಸ್ಥಾಪಕಿ ಸುಷ್ಮಾಶ್ರೀನಿವಾಸ್, ಕನ್ನಡ ಸೇನೆಯ ರವಿಕುಮಾರ್, ಶಾಶ್ವತ ನೀರಾವರಿ ಹೋರಾಟ ಸಮಿತಿಯ ಮಳ್ಳೂರು ಹರೀಶ್, ಆನೂರು ದೇವರಾಜ್, ಶ್ರೀನಿವಾಸ್ ಮತ್ತಿತರರು ಇದ್ದರು.