ಬರಗಾಲಕ್ಕೂ ಕೇಂದ್ರ ಹಣ ಬಿಡುಗಡೆ ಮಾಡಲಿಲ್ಲ

| Published : Mar 31 2024, 02:01 AM IST

ಸಾರಾಂಶ

ಕೇಂದ್ರ ಸರ್ಕಾರ ಹಲವಾರು ವೈಫಲ್ಯಗಳಿದ್ದರೂ ಜಾತಿ, ಜಾತಿಗಳ ಮಧ್ಯೆ, ಧರ್ಮ ಧರ್ಮಗಳ ಮಧ್ಯೆ ವಿಷಬೀಜ ಬಿತ್ತಿ ಮತ ಕೇಳುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.

ಕನ್ನಡಪ್ರಭ ವಾರ್ತೆ ಮುಧೋಳ

ಕೇಂದ್ರದ ಬಿಜೆಪಿ ಆಡಳಿತದಲ್ಲಿ ನಿರುದ್ಯೋಗ ಉದ್ಭವವಾಗಿದೆ. ಭೀಕರ ಬರಗಾಲಕ್ಕೆ ಹಣ ಕೂಡ ಬಿಡುಗಡೆ ಮಾಡಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಆರೋಪಿಸಿದರು.ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಹಲವಾರು ವೈಫಲ್ಯಗಳಿದ್ದರೂ ಜಾತಿ, ಜಾತಿಗಳ ಮಧ್ಯೆ, ಧರ್ಮ ಧರ್ಮಗಳ ಮಧ್ಯೆ ವಿಷಬೀಜ ಬಿತ್ತಿ ಮತ ಕೇಳುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಗಂಭೀರ ಆರೋಪ ಮಾಡಿದರು. ಲೋಕಸಭೆ ಚುನಾವಣೆಯಲ್ಲಿ ನಮ್ಮ ಪರವಾಗಿ ಮತದಾರರ ಒಲವಿದೆ. ಏಕೆಂದರೆ ನಾವು ನುಡಿದಂತೆ ನಡೆದಿದ್ದೇವೆ. ಜನತೆಗೆ ನಾವು ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ. ಗ್ಯಾರಂಟಿ ಯೋಜನೆಗಳನ್ನೇ ಮುಂದಿಟ್ಟುಕೊಂಡು ಮತ ಕೇಳುತ್ತೇವೆ ಎಂದು ಅವರು ಹೇಳಿದರು.ಇದೆ ವೇಳೆ ಬಿಜೆಪಿ ಸಂಸದ ಪಿ.ಸಿ.ಗದ್ದಿಗೌಡರ ವಿರುದ್ಧ ಹರಿಹಾಯ್ದು ಅವರು, ಕೇಂದ್ರದಿಂದ ಯಾವುದೇ ಮಹತ್ತರವಾದ ಯೋಜನೆಗಳನ್ನು ಅವರು ಜಿಲ್ಲೆಗೆ ತಂದಿಲ್ಲ. ರೈಲ್ವೆ ಯೋಜನೆಗಳನ್ನು ಕೂಡ ಕಾರ್ಯಗತಗೊಳಿಸಿಲ್ಲ. ನಾಲ್ಕು ಅವಧಿಗೆ ಆರಿಸಿ ಬಂದರೂ ಜಿಲ್ಲೆಯಲ್ಲಿ ಅಭಿವೃದ್ಧಿಗಾಗಿ ಯಾವುದೇ ಕೊಡುಗೆ ನೀಡಿಲ್ಲ. ಸರಿಯಾದ ಹೆದ್ದಾರಿ ಕಾಮಗಾರಿ ಕೂಡ ನಡೆಯುತ್ತಿಲ್ಲ. ಇಂತಹ ನಾಯಕರನ್ನು ಆಯ್ಕೆ ಮಾಡಿರುವುದು ನಮ್ಮ ದುರಂತ ಎಂದು ಟೀಕಿಸಿದರು.

ಮನಮೋಹನ್ ಸಿಂಗ್ ಅಧಿಕಾರಾವಧಿಯಲ್ಲಿ ರೈತರ ಸಾಲಮನ್ನಾ ಮಾಡಲಾಗಿತ್ತು. ಮಾತ್ರವಲ್ಲ, ಅಂತಾರಾಜ್ಯ ನದಿ ವ್ಯಾಜ್ಯಗಳನ್ನು ಪರಿಹಾರ, ಆರ್.ಟಿ.ಇ ಜಾರಿಗೆ ತರಲಾಗಿತ್ತು. ಇಂತಹ ಹತ್ತು ಹಲವಾರು ಜನಪರ ಕಾರ್ಯಗಳಿಗೆ ಒತ್ತು ನೀಡಿ ದೇಶದ ಅಭಿವೃದ್ಧಿಗೆ ಸಿಂಗ್ ಅವರು ಶ್ರಮಿಸಿದ್ದರು. ಆದರೆ, ಇಂದು ಬಿಜೆಪಿಯು ಜಾತಿ, ಧರ್ಮದ ಮಧ್ಯೆ ವಿಷಬೀಜ ಬಿತ್ತಿ ಮತ ಕೇಳುತ್ತಿರುವುದು ಮತದಾರರು ಅವರಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದು ದೂರಿದರು.

ದೇಶದಲ್ಲಿರುವ ಪರಿಶಿಷ್ಟರಿಗೆ, ಮಹಿಳೆಯರಿಗೆ ರಕ್ಷಣೆಯೇ ಇಲ್ಲವಾಗಿದೆ. ಅಲ್ಲದೆ, ಇತ್ತೀಚೆಗೆ ದೇಶಾದ್ಯಂತ 600 ಜನ ವಕೀಲರು ಕೂಡ ನ್ಯಾಯಾಂಗ ವ್ಯವಸ್ಥೆಯಲ್ಲಿ ಹಸ್ತಕ್ಷೇಪವಾಗುತ್ತಿದೆ ಎಂದು ಸುಪ್ರೀಂಕೋರ್ಟ್ ನ್ಯಾಯಾಧೀಶರಿಗೆ ಪತ್ರ ಕೂಡ ಬರೆದಿದ್ದರು. ಇದನ್ನು ಗಮನಿಸಿದರೆ ಪ್ರಧಾನಿಯವರು ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಕಾಂಗ್ರೆಸ್ ಮುಖಂಡ ಉದಯಸಿಂಹ ಪಡತಾರೆ ಮಾತನಾಡಿ, ಹಾಲಿ ಬಿಜೆಪಿ ಸಂಸದರು ತಮ್ಮ ಅವಧಿಯಲ್ಲಿ ಜಿಲ್ಲೆಗೆ ಯಾವುದೇ ಅನುದಾನ ತಂದಿಲ್ಲ. ಕ್ರಿಯಾಶೀಲರಾಗಿ ಕೆಲಸವನ್ನು ಮಾಡಿಲ್ಲ. ಇಂತಹವರನ್ನು ಏಕೆ ಆಯ್ಕೆ ಮಾಡಬೇಕು. ಜಿಲ್ಲೆಯಲ್ಲಿ ಬದಲಾವಣೆಯಾಗಲಿದ್ದು, ಕಾಂಗ್ರೆಸ್ ಅಭ್ಯರ್ಥಿ ಗೆಲವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.