ಸಾರಾಂಶ
- ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾ (ಎಫ್‌ಪಿಎಐ)ದಿಂದ ಅಭಿಯಾನ
- ಬಾಡ ಗರ್ಭಾಶಯ ಕ್ಯಾನ್ಸರ್ ಮುಕ್ತ ಗ್ರಾಮ, ಎಫ್‌ಪಿಎಐ ಅಧ್ಯಕ್ಷೆ ಡಾ. ರತ್ನಮಾಲಾ ದೇಸಾಯಿಕನ್ನಡಪ್ರಭ ವಾರ್ತೆ ಧಾರವಾಡ
ಕ್ಯಾನ್ಸರ್ ವಿಧಗಳಲ್ಲಿ 2ನೇ ಸ್ಥಾನದಲ್ಲಿರುವ ಗರ್ಭಾಶಯ ಕೊರಳಿನ ಕ್ಯಾನ್ಸರ್ ನಿರ್ಮೂಲನೆಗೆ ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾ (ಎಫ್‌ಪಿಎಐ) ಧಾರವಾಡ ಶಾಖೆಯು ವಿಶೇಷ ಅಭಿಯಾನ ನಡೆಸುತ್ತಿದೆ ಎಂದು ಶಾಖೆಯ ಅಧ್ಯಕ್ಷರಾದ ಡಾ. ರತ್ನಮಾಲಾ ದೇಸಾಯಿ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ಕ್ಯಾನ್ಸರ್ ಶೇ. 95ರಷ್ಟು ಹ್ಯುಮನ್ ಪಾಪಿಲ್ಲೋಮಾ ವೈರಸ್ (ಎಚ್‌ಪಿವಿ) ನಿಂದ ಹರಡುತ್ತದೆ. ಈ ವೈರಸ್ ಅನ್ನು ಸುರಕ್ಷಿತವಾಗಿ, ಪರಿಣಾಮಕಾರಿಯಾದ ಲಸಿಕೆಯಿಂದ ತಡೆಯಲು ಸಾಧ್ಯವಿದೆ. ಎಚ್‌ಪಿವಿ ಲಸಿಕೆ ಮತ್ತು ಮಹಿಳೆಯರಿಗೆ ಸ್ಕ್ರೀನಿಂಗ್ ಮೂಲಕ ತಡೆಗಟ್ಟುವುದು ವಿಶ್ವ ಆರೋಗ್ಯ ಸಂಸ್ಥೆಯಿಂದಲೇ ಸಿದ್ಧವಾಗಿದೆ. ಬೇರೆ ಕ್ಯಾನ್ಸರ್‌ಗಳನ್ನು ಪತ್ತೆ ಹಚ್ಚುವುದು, ಚಿಕಿತ್ಸೆ ನೀಡುವುದು ಕಷ್ಟಸಾಧ್ಯ. ಆದರೆ, ಗರ್ಭಾಶಯ ಕೊರಳು ಕ್ಯಾನ್ಸರ್‌ಗೆ ಮುಂಚಿತವಾಗಿ ಲಸಿಕೆ ಪಡೆದು, ಸ್ಕ್ರೀನಿಂಗ್ ಮಾಡಿ ಹಾಗೂ ಚಿಕಿತ್ಸೆ ಮಾಡುವ ಮೂಲಕ ತಡೆಯಲು ಎಲ್ಲ ರೀತಿಯ ಸಾಧ್ಯತೆಗಳಿದ್ದು, ಈ ಕಾರ್ಯವನ್ನು ಸಂಸ್ಥೆ ಮಾಡುತ್ತಿದೆ ಎಂದರು.77 ಸಾವಿರ ಮಹಿಳೆಯರ ಸಾವು
ಗರ್ಭಾಶಯ ಕೊರಳು ಕ್ಯಾನ್ಸರ್ ಸ್ಕ್ರೀನಿಂಗ್ ಹಾಗೂ ಚಿಕಿತ್ಸೆ ಕ್ರಮ ಹೊಂದಿರುವ ಅಭಿವೃದ್ಧಿ ದೇಶಗಳಲ್ಲಿ ಈ ಕ್ಯಾನ್ಸರ್ ಪ್ರಮಾಣ ತೀರಾ ಕಡಿಮೆ ಇದೆ. ಅಭಿವೃದ್ಧಿ ಹೊಂದುತ್ತಿರುವ ಹಾಗೂ ಬಡ ರಾಷ್ಟ್ರಗಳಲ್ಲಿ ವರ್ಷಕ್ಕೆ 12 ಲಕ್ಷ ಪ್ರಕರಣಗಳು ಪತ್ತೆಯಾಗುತ್ತಿವೆ. ಈ ಪೈಕಿ 77 ಸಾವಿರ ಮಹಿಳೆಯರು ಸಾವನ್ನಪ್ಪುತ್ತಿದ್ದಾರೆ. ಈ ಬಗ್ಗೆ ನಮ್ಮ ಸಮಾಜಕ್ಕೆ ಇನ್ನೂ ಹೆಚ್ಚಿನ ತಿಳಿವಳಿಕೆ ಇಲ್ಲ. ಈ ಹಿನ್ನೆಲೆಯಲ್ಲಿ ಇದನ್ನು ನಾವು ಗಂಭೀರವಾಗಿ ತೆಗೆದುಕೊಳ್ಭಬೇಕಿದೆ. ಎಫ್‌ಪಿಎಐ ಕೇಂದ್ರ ಸಂಸ್ಥೆ ಟಾಟಾ ಸಂಸ್ಥೆಯ ಜೊತೆಗೂಡಿ ಟಾಟಾ ಮುಂಬೈ ಮ್ಯಾರಥಾನ್ ಎಂಬ ಅಭಿಯಾನ ಹಮ್ಮಿಕೊಂಡಿದ್ದು, ಒಂದು ಕೋಟಿ ಸಂಗ್ರಹಿಸಿ ಡಿ. 31ರೊಳಗೆ 20 ಸಾವಿರ ಹೆಣ್ಣು ಮಕ್ಕಳಿಗೆ ಲಸಿಕೆ ಹಾಕಿಸುವ ಗುರಿ ಹೊಂದಿದೆ. ಈ ಪೈಕಿ ಧಾರವಾಡ ಶಾಖೆಯು 400 ಹೆಣ್ಣು ಮಕ್ಕಳಿಗೆ ಲಸಿಕೆ ಹಾಕಿಸಲು ಕಾರ್ಯೋನ್ಮುಖವಾಗಿದೆ ಎಂದರು.ಎಫ್‌ಪಿಎಐ ಧಾರವಾಡ ಶಾಖೆಯ ಮುಖ್ಯಸ್ಥರಾದ ಸುಜಾತಾ ಆನಿಶೆಟ್ಟರ್ ಮಾತನಾಡಿ, ಗುರಿಯ 400 ಹೆಣ್ಣು ಮಕ್ಕಳ ಪೈಕಿ 188 ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಒಂದು ಲಸಿಕೆಯ ಮೊತ್ತ ₹2 ಸಾವಿರ ಇದ್ದು, ದೇಣಿಗೆ ಸಂಗ್ರಹಿಸಿದ್ದರಿಂದ ಶೇ. 40ರಷ್ಟು, ಶೇ. 60ರಷ್ಟು ಪಾಲಕರು ಅಥವಾ ದೇಣಿಕೆ ನೀಡುವವರು ಕೊಡಬಹುದು. ಬಾಡ ಗ್ರಾಮದ ಶಿವಾನಂದ ಕಮಲಾಪೂರ ಎಂಬುವರು ತಮ್ಮೂರಿಗೆ ಎಲ್ಲ 9-15 ವರ್ಷದ 92 ಬಾಲಕಿಯರಿಗೆ ದೇಣಿಗೆ ನೀಡುವ ಮೂಲಕ ಗರ್ಭಾಶಯ ಕೊರಳು ಮುಕ್ತ ಗ್ರಾಮವಾಗಿದೆ. ಧಾರವಾಡದ ಕೆ.ಇ. ಬೋರ್ಡ್, ಬಿಜಿಎಸ್ ಶಾಲೆಗಳಲ್ಲೂ ಈ ಲಸಿಕೆ ನೀಡಲಾಗಿದೆ. ದುರ್ಗದಕೇರಿ ಗ್ರಾಮದಲ್ಲಿ ರೋಟರಿ ಸವೆನ್ ಹಿಲ್ಸ್ ದೇಣಿಗೆ ನೀಡಿದೆ. ಇದೇ ರೀತಿ ಮಕ್ಕಳಿಗೆ ಲಸಿಕೆ, ಮಹಿಳೆಯರಿಗೆ ಸ್ಕ್ರೀನಿಂಗ್ ಮಾಡುವ ಮೂಲಕ ರೋಗವನ್ನು ನಿರ್ಮೂಲನೆ ಮಾಡಲು ಸಂಸ್ಥೆಯು ಪಣ ತೊಟ್ಟಿದ್ದು, ಸಾರ್ವಜನಿಕರು ಈ ಕುರಿತು ಹೆಚ್ಚಿನ ಜಾಗೃತಿ ವಹಿಸಬೇಕು. ಸಿಕ್ಕಿಂ ರಾಜ್ಯ ಈ ಕ್ಯಾನ್ಸರ್ ತಡೆಯಲು ಸರ್ಕಾರದ ಯೋಜನೆ ರೂಪಿಸಿದ್ದು ಕರ್ನಾಟಕ ಸರ್ಕಾರ ಸಹ ಈ ಚಿಂತನೆ ಮಾಡಲಿ ಎಂದರು. ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮ ಯೋಜನಾಧಿಕಾರಿ ನಿಂಗಪ್ಪ ಮಡಿವಾಳರ ಇದ್ದರು.