ಪವಾಡ ಪುರುಷ ಕಾಶಲಿಂಗೇಶ್ವರ ಜಾತ್ರೆ ಸಂಪನ್ನ

| Published : Apr 22 2024, 02:17 AM IST / Updated: Apr 22 2024, 02:18 AM IST

ಸಾರಾಂಶ

ಶೃಂಗಾರಗೊಂಡ ರಥೋತ್ಸವಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸಾಯಂಕಾಲ ೫ ಗಂಟೆಗೆ ಪ್ರಾರಂಭವಾದ ರಥೋತ್ಸವ ಭಕ್ತರ ಸಮೂಹ ಕಾಶಲಿಂಗೇಶ್ವರ ಮಹಾರಾಜ ಕೀ ಜೈ ಅನ್ನುತ್ತ ರಥೋತ್ಸವ ಮುಂದೆ ಸಾಗುತ್ತಿದ್ದಂತೆ ಬಾಳೆಹಣ್ಣು, ಉತ್ತತ್ತಿ, ಎಸೆಯುವ ಮೂಲಕ ಭಕ್ತರು ಭಕ್ತಿ ಸಮರ್ಪಿಸಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಬಾನೆತ್ತರಕ್ಕೆ ಚಿಮುತ್ತಿದ್ದ ಭಂಡಾರದೋಕುಳಿ, ಡೊಳ್ಳು ವಾದನದ ಮಾರ್ದನಿಯ ಮಧ್ಯೆ ಕಾಶಲಿಂಗೇಶ್ವರ ಮಹಾರಾಜ ಕೀ ಜೈ... ಜೈಕಾರಗಳ ಝೇಂಕಾರ, ಭಕ್ತಿ ಭಂಡಾರದಲ್ಲಿ ಮಿಂದೆದ್ದ ಭಕ್ತ ಸಾಗರ, ನೆಲದ ಮೇಲಡಗಿ ಭಂಡಾರದ ಹಾಸುಗೆ, ಎಲ್ಲೆಲ್ಲೂ ಭಕ್ತಿಮಯ ವಾತಾವರಣ. ಲೋಕಾಪುರ ಪಟ್ಟಣದ ವೆಂಕಟಾಪುರ ಓಣಿಯ ಕಾಶಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಕಂಡು ಬಂದ ಚಿತ್ರಣಗಳಿವು. ಸಂಭ್ರಮ ಸಡಗರದಿಂದ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು.

ಜಾತ್ರಾ ಮಹೋತ್ಸವ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸಾಮೂಹಿಕ ಉಚಿತ ವಿವಾಹ ಹಮ್ಮಿಕೊಳ್ಳಲಾಗಿತ್ತು. ಪಲ್ಲಕ್ಕಿ ಹೊತ್ತುಕೊಂಡು ಹೋಗುವ ವೇಳೆ ಭಕ್ತ ಸಮೂಹ ಭಂಡಾರ ಎರಚುವ ಮೂಲಕ ಇಡೀ ಭಕ್ತರು ಭಂಡಾರದಲ್ಲಿ ಮಿಂದೆದ್ದರು. ಶೃಂಗಾರಗೊಂಡ ರಥೋತ್ಸವಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸಾಯಂಕಾಲ ೫ ಗಂಟೆಗೆ ಪ್ರಾರಂಭವಾದ ರಥೋತ್ಸವ ಭಕ್ತರ ಸಮೂಹ ಕಾಶಲಿಂಗೇಶ್ವರ ಮಹಾರಾಜ ಕೀ ಜೈ ಅನ್ನುತ್ತ ರಥೋತ್ಸವ ಮುಂದೆ ಸಾಗುತ್ತಿದ್ದಂತೆ ಬಾಳೆಹಣ್ಣು, ಉತ್ತತ್ತಿ, ಎಸೆಯುವ ಮೂಲಕ ಭಕ್ತರು ಭಕ್ತಿ ಸಮರ್ಪಿಸಿದರು. ಬೆಳಿಗ್ಗೆಯಿಂದ ಭಕ್ತರು ಸರತಿ ನಾಲಿನಲ್ಲಿ ನಿಂತು ಕಾಶಲಿಂಗೇಶ್ವರನ ದರ್ಶನ ಪಡೆದರು.

ರಥೋತ್ಸವಕ್ಕೆ ಕಳಸ, ನಂದಿಕೋಲು, ತೇರಿನ ಬೆಳ್ಳಿ ಛತ್ರಿ, ಗೆಜ್ಜೆಕೋಲು, ಬಾಳೆಕಂಬ, ತೆಂಗಿನ ಗರಿ ಮತ್ತು ಬಣ್ಣ ಬಣ್ಣದ ಹೂವಿನಹಾರ ಸೇರಿದಂತೆ ವಿವಿಧ ವಸ್ತುಗಳಿಂದ ತೇರನ್ನು ಅಲಂಕಾರ ಗೊಳಿಸಲಾಗಿತ್ತು. ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಸೇರಿದಂತೆ ವಿವಿಧ ಪಟ್ಟಣ ಮತ್ತು ನಗರ ಪ್ರದೇಶಗಳಿಂದ ಸಾವಿರಾರೂ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ಜಾತ್ರಾ ಮಹೋತ್ಸವದ ಅಂಗವಾಗಿ ಯುವಕರಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಗಮನ ಸೆಳೆದರು. ಕಾಶಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಯಾವುದೇ ರೀತಿಯಿಂದ ತೊಂದರೆ ಇಲ್ಲದೇ ಶಾಂತಿಯುತವಾಗಿ ನಡೆಯಿತು. ಇದಲ್ಲದೇ ಸುಗಮವಾಗಿ ಜಾತ್ರೆ ನೆಡೆದುಕೊಂಡು ಹೋಗಲು ಜಿಲ್ಲಾಡಳಿತ ಸೂಕ್ತವಾದ ಬಿಗಿ ಪೊಲೀಸ್‌ ಬಂದೋ ಬಸ್ತ್‌ ವ್ಯವಸ್ಥೆ ಮಾಡಿತ್ತು.

ಜಾತ್ರಾ ಮಹೋತ್ಸವದ ಎಲ್ಲ ಕಾರ್ಯಕ್ರಮವು ಜ್ಞಾನೇಶ್ವರ ಮಠದ ಪೀಠಾಧಿಕಾರಿ ಬ್ರಹ್ಮಾನಂದ ಶ್ರೀಗಳು ಹಾಗೂ ಕನಕ ಗುರುಪೀಠದ ಸಿದ್ಧರಾಮಾನಂದ ಸ್ವಾಮೀಜಿ ಇವರ ನೇತೃತ್ವದಲ್ಲಿ ಜರುಗಿದವು. ಕಾಶಲಿಂಗೇಶ್ವರ ಜೀರ್ಣೊದ್ದಾರ ಸೇವಾ ಸಮಿತಿ ಅಧ್ಯಕ್ಷ ಮುತ್ತಪ್ಪ ಗಡ್ಡದವರ ಸೇವಾ ಸಮಿತಿ ಕಾರ್ಯದರ್ಶಿ ಬಾಳು ಗಡ್ಡದವರ, ಸಿದ್ದಪ್ಪ ಗಡ್ಡದವರ, ನಿಂಗಪ್ಪ ಗಡ್ಡದವರ, ಮುತ್ತು ತುಂಗಳ, ತಿಪ್ಪಣ್ಣ ಕಿಲಾರಿ, ಸಿದ್ದಪ್ಪ ಹರಕಂಗಿ, ನಾಗಪ್ಪ ಗುಡ್ಡದ, ಬಸೆಂಗಪ್ಪ ಸಿದ್ದಾಪುರ, ಮಾಯಪ್ಪ ಗಡ್ಡದವರ, ಸಿಂಗಾಡೆಪ್ಪ ಗಡ್ಡದವರ, ಸಿದ್ದಪ್ಪ ಕಂಬಳಿ, ಬಾಳು ಗಡ್ಡದವರ ವೆಂಕಟಾಪುರ ಗ್ರಾಮದ ಕಾಶಲಿಂಗೇಶ್ವರ ಜಾತ್ರಾ ಮಹೋತ್ಸವ ಅಪಾರ ಭಕ್ತ ವೃಂದ ಇದ್ದರು.