ಯಶಸ್ವಿಯತ್ತ ‘ಶೆಫ್ ಚಿದಂಬರ’ಸಿನಿಮಾ: ನಟ ಅನಿರುದ್ಧ್

| Published : Jun 20 2024, 01:03 AM IST

ಸಾರಾಂಶ

ಕೊಲೆಗಳ ಸುತ್ತ ನಡೆಯುವ ಆ್ಯಕ್ಷನ್ ಥ್ರಿಲರ್ ಕಥಾ ಹಂದರವೊಂದಿರುವ ಹಾಸ್ಯಮಯ ಚಿತ್ರ ‘ಶೆಫ್ ಚಿದಂಬರ’ ಚಿತ್ರತಂಡವನ್ನು ಆಶೀರ್ವದಿಸಲು ಕೋರಿದ ತಂಡ ನಗರದಲ್ಲಿ ಪ್ರಚಾರ ನಡೆಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಒಂದಿಷ್ಟು ಕುತೂಹಲಕಾರಿ ವಿಷಯಗಳನ್ನು ಇಟ್ಟುಕೊಂಡು ನಿರ್ದೇಶಕ ಎಂ.ಆನಂದರಾಜ್‌ ಕಥೆ ಹೆಣೆದಿರುವ ಚೆಫ್ ಚಿದಂಬರ ನಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಅತ್ಯಂತ ಯಶಸ್ವಿಯತ್ತ ಸಾಗುತ್ತಿದೆ ಎಂದು ಚಿತ್ರದ ನಾಯಕ ನಟ ಅನಿರುದ್ಧ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಚಿತ್ರವು ಒಂದು ಕೌತುಕವಾಗಿದೆ. ವಿನೂತನ ಪ್ರಯತ್ನ ಇದಾಗಿದೆ. ಕೊಲೆಗಳ ಸುತ್ತ ನಡೆಯುವ ಆ್ಯಕ್ಷನ್ ಥ್ರಿಲರ್ ಕಥಾ ಹಂದರವೊಂದಿರುವ ಹಾಸ್ಯಮಯ ಚಿತ್ರ ಇದಾಗಿದೆ. ಕೊಲೆಗಳ ಸುತ್ತ ಇರುವ ಚಿತ್ರವಾದರೂ ಕೂಡ ಇದೊಂದು ಹಾಸ್ಯದ ಸುತ್ತ ಇರುವ ಭಾವನೆ ಗಳನ್ನು ಬಿಂಬಿಸುವ ಸಂಪೂರ್ಣ ಮನರಂಜನೆ ನೀಡಿರುವ ಚಿತ್ರವಾಗಿದ್ದು, ನಾಟ್ಯ, ಸಾಹಸ, ಉತ್ತಮ ಸಂಗೀತ, ಸಾಹಿತ್ಯವನ್ನು ಹೊಂದಿದ್ದು, ಪೂರ್ಣ ಪ್ರಮಾಣದ ಇಡೀ ಕುಟುಂಬ ಕುಳಿತು ನೋಡುವ ಚಿತ್ರವಾಗಿದ್ದು, ಶಿವಮೊಗ್ಗದವರೇ ಆದ ಡಿ.ಎನ್.ರೂಪ ಅವರ ನಿರ್ಮಾಣದಲ್ಲಿ ಈ ಚಿತ್ರ ಮೂಡಿ ಬಂದಿದೆ ಎಂದರು.

ಈ ಚಿತ್ರದಲ್ಲಿ ನಿಧಿಸುಬ್ಬಯ್ಯ, ಹಾಗೂ ರೆಚಲ್ ಡೇವಿಡ್ ಎಂಬ ಇಬ್ಬರು ನಾಯಕಿಯರಿದ್ದಾರೆ. ಚಿತ್ರಕ್ಕೆ ಋತ್ವಿಕ್ ಮುರಳೀಧರ್ ಸಂಗೀತ ನೀಡಿದ್ದು, ಉದಯ ಲೀಲಾ ಛಾಯಾಗ್ರಹಣ ಮಾಡಿದ್ದಾರೆ. ಕನ್ನಡ ಚಿತ್ರಗಳಿಗೆ ಪ್ರೇಕ್ಷಕರು ಯಾವಾಗಲೂ ಮನ್ನಣೆ ನೀಡುತ್ತ ಬಂದಿದ್ದಾರೆ. ಶಿವಮೊಗ್ಗದಲ್ಲಿ ಭಾರತ್ ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆಯಾಗಿದೆ. ಶಿವಮೊಗ್ಗದ ಪ್ರೇಕ್ಷಕರು ಈ ಚಿತ್ರವನ್ನು ನೋಡಿ ನಮ್ಮನ್ನು ಹರಸಬೇಕು ಎಂದರು.

ನಿರ್ಮಾಪಕಿ ರೂಪ ಡಿ.ಎನ್. ಮಾತನಾಡಿ, ನಾನು ವಿಷ್ಣುವರ್ಧನ್ ಅಭಿಮಾನಿ, ಚಿತ್ರ ನಿರ್ಮಾಣ ಮಾಡಬೇಕು ಎಂದುಕೊಂಡಾಗ ನಟ ಅನಿರುದ್ಧ್ ನೆನಪಾದರು. ಅವರನ್ನೇ ನಾಯಕನನ್ನಾಗಿ ಮಾಡಿಕೊಂಡು ಈ ಚಿತ್ರವನ್ನು ನಿರ್ಮಿಸಿದ್ದೇನೆ. ಇಲ್ಲಿನ ಹಾಸ್ಯ ನವೀರಾಗಿದೆ. ಹೊಸಬರು, ಹಳಬರು, ನಟಿಸಿದ್ದಾರೆ. ಶರತ್ ಲೋಹಿತಾಶ್ವ ಶಿವಮಣಿ, ಶ್ರೀಧರ್, ಮಹಾಂತೇಶ್ ಮುಂತಾದವರಿದ್ದಾರೆ. ಇದೊಂದು ಒಳ್ಳೆಯ ಮನೋರಂಜನೆಯ ಚಿತ್ರ ನಮ್ಮ ಚಿತ್ರತಂಡವನ್ನು ಆಶೀರ್ವದಿಸಿ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀ ಗಣೇಶ್, ಮಾಧವಿ ಇದ್ದರು.