ಸಾರಾಂಶ
ನಮ್ಮ ಧರ್ಮ ನಮ್ಮದು, ನಮ್ಮ ದೇಶದಲ್ಲಿ ಹಿಂದೂ ಧರ್ಮ ಉಳಿಯಬೇಕು ನಾವೆಲ್ಲರೂ ನೆಮ್ಮದಿಯಾಗಿ ಬದುಕು ನಡೆಸಬೇಕೆಂದು ಹೋರಾಟ ಮಾಡುತ್ತಿದ್ದೇವೆಯೆ ಹೊರತು ಯಾವ ಧರ್ಮದ ವಿರುದ್ದವೂ ಅಲ್ಲ. ಆದರೆ ನಮ್ಮ ಧರ್ಮದ ತಂಟೆಗೆ ಬಂದರೆ ಸುಮ್ಮನೆ ಇರಲು ಆಗೊಲ್ಲ. ಬಾನು ಮುಷ್ತಾಕ್ ಸಾಧನೆಯನ್ನು ಅಲ್ಲಗೆಳೆಯುವುದಿಲ್ಲ. ಆದರೆ ಅವರು ನಾಡ ದೇವತೆಯ ವಿರೋಧಿ ಭಾವನೆಯನ್ನಷ್ಟೆ ಬಿಜೆಪಿ ವಿರೋಧಿಸುತ್ತದೆ.
ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ
ಓಟಿನ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಮುಸ್ಲಿಂ ಸಮುದಾಯವನ್ನು ಓಲೈಸಲು ಮುಂದಾಗಿದ್ದು ಹಿಂದೂ ಧರ್ಮ, ಹಿಂದೂ ದೇವಾಲಯ, ಹಿಂದೂ ಸಂಪ್ರದಾಯಗಳನ್ನು ಟಾರ್ಗೆಟ್ ಮಾಡಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಆರೋಪಿಸಿದರು.ನಗರದ ಬಿಜೆಪಿ ಸೇವಾ ಸೌಧ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ಪರವಾದ ತುಷ್ಟೀಕರಣ ರಾಜ್ಯದಲ್ಲಿ ಧರ್ಮ ಧರ್ಮಗಳ ನಡುವೆ ಕೋಮು ಸಾಮರಸ್ಯ ಕದಡಲು ಕಾರಣವಾಗಿದೆ ಎಂದು ದೂರಿದರು.ಬೇರೆ ಧರ್ಮದ ವಿರುದ್ಧ ಹೋರಾಟ ಅಲ್ಲ
ನಮ್ಮ ಧರ್ಮ ನಮ್ಮದು, ನಮ್ಮ ದೇಶದಲ್ಲಿ ಹಿಂದೂ ಧರ್ಮ ಉಳಿಯಬೇಕು ನಾವೆಲ್ಲರೂ ನೆಮ್ಮದಿಯಾಗಿ ಬದುಕು ನಡೆಸಬೇಕೆಂದು ಹೋರಾಟ ಮಾಡುತ್ತಿದ್ದೇವೆಯೆ ಹೊರತು ಯಾವ ಧರ್ಮದ ವಿರುದ್ದವೂ ಅಲ್ಲ. ಆದರೆ ನಮ್ಮ ಧರ್ಮದ ತಂಟೆಗೆ ಬಂದರೆ ಸುಮ್ಮನೆ ಇರಲು ಆಗೊಲ್ಲ ಎಂದರು. ದಸರಾ ಉದ್ಘಾಟನೆಗೆ ನಮ್ಮಿಂದಲೆ ಮಾಡಿಸಿ ಎಂದು ಮುಸ್ಲಿಮರೇನಾದರೂ ಸಿಎಂ ಸಿದ್ದರಾಮಯ್ಯ ರವರಿಗೆ ಮನವಿ ಮಾಡಿದ್ದರಾ, ಸಾಧನೆ ಮಾಡಿದ ಅನೇಕರು ನಮ್ಮಲ್ಲಿದ್ದಾರೆ. ಅಂತಹ ಸಾಧಕರಿಂದ ಮಾಡಿಸಬಹುದಿತ್ತು. ಮುಷ್ತಾಕ್ ಅವರ ಸಾಧನೆಯನ್ನು ನಾವು ಅಲ್ಲಗೆಳೆಯುವುದಿಲ್ಲ. ಆದರೆ ಅವರು ನಾಡ ದೇವತೆಯ ವಿರೋಧಿ ಭಾವನೆಯನ್ನಷ್ಟೆ ವಿರೋಧಿಸುತ್ತೇವೆ ಎಂದರು.ಜಿಎಸ್‌ಟಿಯಲ್ಲಿ ಭಾರಿ ಇಳಿಕೆ
ಈ ದೇಶದ ಬಡ ಹಾಗೂ ಮದ್ಯಮ ವರ್ಗದ ಜನ ಸಾಮಾನ್ಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಧಾನಿ ಮೋದಿ ಅವರು ಜಿ ಎಸ್ ಟಿ ಯಲ್ಲಿ ಅಮೂಲಾಗ್ರ ಬದಲಾವಣೆ ತಂದಿದ್ದು ಕೋಟ್ಯಂತರ ಮಂದಿಗೆ ಇದರ ನೇರ ಲಾಭ ಸಿಗಲಿದೆ ಎಂದು ಸೀಕಲ್ ರಾಮಚಂದ್ರಗೌಡ ತಿಳಿಸಿದರು. ಜನ ಸಮಾನ್ಯರು ದಿನ ನಿತ್ಯ ಬಳಸುವ ಆಹಾರ ಪದಾರ್ಥಗಳು, ಕ್ಯಾನ್ಸರ್ ಇನ್ನಿತರೆ ರೋಗಗಳ ಔಷಧಿಗಳು, ಮುಖ್ಯವಾಗಿ ಜೀವ ವಿಮೆಯ ಮೇಲಿನ ತೆರಿಗೆ ಗಣನೀಯವಾಗಿ ಇಳಿಖೆ ಆಗುವುದರಿಂದ ಬಡ ಮಧ್ಯಮ ವರ್ಗಕ್ಕೆ ಬಹಳ ಅನುಕೂಲ ಆಗಲಿದೆ ಎಂದರು. ರಾಜ್ಯ ಕಾರ್ಯದರ್ಶಿ ವಿನಯ್ ಬಿದಿರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರಳೀಧರ್ , ನಿಕಟಪೂರ್ವ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಚಿಂತಾಮಣಿ ಕ್ಷೇತ್ರದ ಮುಖಂಡ ವೇಣುಗೋಪಾಲ್, ಮಧುಚಂದ್ರ, ಲಕ್ಷ್ಮೀನಾರಾಯಣ್ ಗುಪ್ತ, ಕಂಬದಹಳ್ಳಿ ಸುರೇಂದ್ರಗೌಡ, ಸೀಕಲ್ ಆನಂದಗೌಡ ಇನ್ನಿತರರು ಹಾಜರಿದ್ದರು.