ಮಹಾಶಿವರಾತ್ರಿ ಜಾತ್ರೆಗೆ ಹರಿದು ಬಂದ ಭಕ್ತ ಸಾಗರ

| Published : Feb 27 2025, 12:35 AM IST

ಸಾರಾಂಶ

ಮಲೆಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಜಾತ್ರೆ ಸಡಗರ ಸಂಭ್ರಮದಿಂದ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರುಗುತ್ತಿದ್ದು, ನಾಡಿನ ಎಲ್ಲೆಡೆಯಿಂದ ಭಕ್ತ ಸಾಗರ ಹರಿದು ಬಂದಿದೆ.

ಜಿ.ದೇವರಾಜ ನಾಯ್ಡು

ಕನ್ನಡಪ್ರಭ ವಾರ್ತೆ ಹನೂರುಮಲೆಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಜಾತ್ರೆ ಸಡಗರ ಸಂಭ್ರಮದಿಂದ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರುಗುತ್ತಿದ್ದು, ನಾಡಿನ ಎಲ್ಲೆಡೆಯಿಂದ ಭಕ್ತ ಸಾಗರ ಹರಿದು ಬಂದಿದೆ.

ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ನಡೆಯುತ್ತಿರುವ 5 ದಿನಗಳ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸ್ವಾಮಿಗೆ ವಿಶೇಷ ಅಭಿಷೇಕ, ದೂಪದ ಅಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿಯೊಂದಿಗೆ ಬೇಡಗಂಪಣ ಸರದಿ ಅರ್ಚಕರು ಸಂಪ್ರದಾಯದಂತೆ ಪೂಜಾ ಕಾರ್ಯಕ್ರಮಗಳನ್ನು ನಡೆಸಿದರು.

ಮಹಾಶಿವರಾತ್ರಿ ಹಬ್ಬದ ಸಡಗರ ಸಂಭ್ರಮದಲ್ಲಿ ಮಲೆಮಹದೇಶ್ವರನ ದೇವಾಲಯದಲ್ಲಿ ವಿಶೇಷ ಹೂವಿನ ಹಾಗೂ ಫಲಪುಷ್ಪ ತರಕಾರಿಗಳಿಂದ ಸಿಂಗಾರ ಗೊಳಿಸಲಾಗಿದ್ದ ದೇವಾಲಯದ ಪ್ರವೇಶ ದ್ವಾರ, ಹೊರಾಂಗಣ, ದೇವಾಲಯದ ಸುತ್ತಲೂ ಹೂವಿನ ಅಲಂಕಾರ ನೋಡುಗರನ್ನು ತನ್ನತ್ತ ಸೆಳೆಯುವಂತೆ ಅಲಂಕಾರ ಮಾಡಲಾಗಿತ್ತು.

ಪೂಜೆ, ಉತ್ಸವ:

ಮಲೆಮಾದೇಶ್ವರನಿಗೆ ಎಣ್ಣೆ ಮಜ್ಜನ ಹಾಗೂ ದೂಪದ ಅಭಿಷೇಕ, ಬಿಲ್ವಾರ್ಚನೆ ಮತ್ತು ಮಹಾ ಮಂಗಳಾರತಿಯೊಂದಿಗೆ ಪೂಜೆ ನಡೆಯಿತು. ಜೊತೆಗೆ ಚಿನ್ನದ ರಥೋತ್ಸವ, ಬೆಳ್ಳಿ ರಥೋತ್ಸವ, ರುದ್ರಾಕ್ಷಿ ಮಂಟಪೋತ್ಸವ, ಬಸವ ವಾಹನ ಉತ್ಸವ, ಹುಲಿವಾಹನ ಉತ್ಸವ ಹರಕೆ ಹೊತ್ತ ಭಕ್ತರಿಂದ ದೂಪದ ಸೇವೆ, ಪಂಜಿನ ಸೇವೆ, ಉರುಳು ಸೇವೆ ಮತ್ತು ಮುಡಿಸೇವೆ ವಿವಿಧ ಸೇವೆಗಳೊಂದಿಗೆ ಇಷ್ಟಾರ್ಥ ಸಿದ್ಧಿಸುವಂತೆ ಮಾದೇಶ್ವರನಲ್ಲಿ ಭಕ್ತರು ನಿವೇದನೆ ಮಾಡಿಕೊಂಡರು.

ಜಗಮಗಿಸಿದ ವಿದ್ಯುತ್ ದೀಪಾಲಂಕಾರ:

ಮಲೆಮಹದೇಶ್ವರ ಬೆಟ್ಟದಲ್ಲಿ ವಿಶೇಷವಾಗಿ ದೇವಾಲಯ ಹಾಗೂ ಗೋಪುರ ಸುತ್ತಲೂ ವಿಶೇಷ ವಿದ್ಯುತ್ ದೀಪ ಅಲಂಕಾರ ಜಗಮಗಿಸುವಂತೆ ನೋಡುಗರ ಕಣ್ಮನ ತಣಿಸಿತು.

ಭಕ್ತ ಸಾಗರ:

ಮಹಾಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ನಾನಾ ಭಾಗಗಳಿಂದ ಮಲೆಮಹದೇಶ್ವರನ ಭಕ್ತರು ಬೆಂಗಳೂರು ಮೈಸೂರು ಮಂಡ್ಯ ಚಾಮರಾಜನಗರ ಜಿಲ್ಲೆ ಸೇರಿದಂತೆ ವಿವಿಧ ತಾಲೂಕುಗಳಿಂದಲೂ ಭಕ್ತರು ಮಹಾಶಿವರಾತ್ರಿ ಪ್ರಯುಕ್ತ ಸರತಿ ಸಾಲಿನಲ್ಲಿ ನಿಂತು ಶಿವನ ದರ್ಶನ ಪಡೆದು ಪುನೀತರಾದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ:

ಶ್ರೀಕ್ಷೇತ್ರದ ಆಯಕಟ್ಟಿನ ಸ್ಥಳಗಳಲ್ಲಿ ದೇವಾಲಯ ಬಸ್ ನಿಲ್ದಾಣ ತಾಳುಬೆಟ್ಟ ಹಾಗೂ ಸಾಲೂರು ಮಠಕ್ಕೆ ತೆರಳುವ ರಸ್ತೆ ಸೇರಿದಂತೆ ವಿವಿಧ ಕಡೆಗಳಲ್ಲಿ ಕಟ್ಟುನಿಟ್ಟಿನ ಕ್ರಮ ವಹಿಸುವ ಮೂಲಕ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕವಿತಾ ಭೇಟಿ ನೀಡಿ ಬಂದೋಬಸ್ತ್‌ ಪರಿಶೀಲನೆ ನಡೆಸಿ, ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶನ ನೀಡಿದರು. ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಎಇ ರಘು ಹಾಗೂ ಕೊಳ್ಳೇಗಾಲ ಉಪ ವಿಭಾಗ ಡಿವೈಎಸ್ಪಿ ಧರ್ಮೇಂದರ್ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಗೋವಿಂದ್ ರಾಜ್ ಇನ್ನಿತರರು ಉಪಸ್ಥಿತರಿದ್ದರು.

ಮಹಾಶಿವರಾತ್ರಿ ಹಬ್ಬಕ್ಕೆ ಬರುವ ಭಕ್ತಾದಿಗಳಿಗೆ ಸಕಲ ಸೌಕರ್ಯಗಳನ್ನು ನೀಡುವ ನಿಟ್ಟಿನಲ್ಲಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕ್ರಮವಹಿಸಿದೆ. ಬಿಸಿಲು ಹೆಚ್ಚಾಗಿರುವ ಹಿನ್ನೆಲೆ ದೇವಾಲಯದ ಸುತ್ತಲೂ ಟ್ಯಾಂಕರ್‌ಗಳಲ್ಲಿ ನೀರು ಹಾಕಲಾಗುತ್ತಿದೆ. ಹೆಚ್ಚುವರಿಯಾಗಿ ಪೆಂಡಾಲ್‌ಗಳನ್ನು ಹಾಕಲಾಗಿದೆ. ಸರತಿ ಸಾಲು ಸೇರಿದಂತೆ ವಿವಿಧಡೆ ಭಕ್ತಾದಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ವಿಶೇಷ ದಾಸೋಹ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಎ.ಇ.ರಘು, ಕಾರ್ಯದರ್ಶಿ, ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಮಲೆಮಹದೇಶ್ವರ ಬೆಟ್ಟ